ದಾವಣಗೆರೆ: ನಾವು ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಗಮನಕ್ಕೆ ತರುವುದಲ್ಲ. ಕೊರತೆ ಬಗ್ಗೆ ಸಭೆಗಳಲ್ಲಿ ಪ್ರಸ್ತಾಪಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನೇತೃತ್ವದ ತಂಡ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಸೂಚಿಸಿದೆ.
ಜಿಪಂ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ವಾಗೀಶ್‌ಸ್ವಾಮಿ, ಸದಸ್ಯೆ ಶೈಲಜಾ ಬಸವರಾಜ್ ಅವರಿದ್ದ ತಂಡ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ, ವಿವಿಧ ವಿಭಾಗ ಪರಿಶೀಲಿಸಿದ ವೇಳೆ ವೈದ್ಯಾಧಿಕಾರಿಗಳು ಅಲ್ಲಿನ ಸಮಸ್ಯೆ ಹೇಳಿದಾಗ, ಅಗತ್ಯ ಇರುವ ಉಪಕರಣಗಳ ಬಗ್ಗೆ ಸಂಬಂಧಿತರ ಗಮನಕ್ಕೆ ತಂದು, ಅವುಗಳನ್ನ ತರಿಸಿಕೊಂಡು ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡುವಂತಾಗಬೇಕು. ಯಂತ್ರೋಪಕರಣಗಳ ಕೊರತೆ ಮುಂದಿಟ್ಟುಕೊಂಡು ಆಸ್ಪತ್ರೆಗೆ ಬಂದವರಿಗೆ ತೊಂದರೆ ಕೊಡುವುದು ಸರಿಯಲ್ಲ. ಸಕಾಲಿಕವಾಗಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿತು.
ಸಂಜೆಯ ವೇಳೆಯಲ್ಲೂ ಹೊರ ರೋಗಿ ವಿಭಾಗದಲ್ಲಿ ಅತಿ ಹೆಚ್ಚಿನ ಜನರು ಇರುವುದನ್ನು ಕಂಡು ಪ್ರಶ್ನಿಸಿದ ಜಿಪಂ ತಂಡಕ್ಕೆ, ಸೋಮವಾರ ದಾವಣಗೆರೆ ಜಿಲ್ಲೆಯ ವಿವಿಧ ಭಾಗದಿಂದ ಮಾತ್ರವಲ್ಲ, ಹೊರ ಜಿಲ್ಲೆಯಿಂದಲೂ ಜನರು ಆಗಮಿಸುತ್ತಾರೆ. ಹಾಗಾಗಿಯೇ ಅತಿ ಹೆಚ್ಚಿನ ಜನರು ಇದ್ದಾರೆ ಎಂದು ನಿವಾಸಿ ವೈದ್ಯಾಧಿಕಾರಿ ಡಾ| ರಾಘವೇಂದ್ರಸ್ವಾಮಿ ಹೇಳಿದರು.
ಸ್ಕ್ಯಾನಿಂಗ್ ಸೆಂಟರ್‌ನಲ್ಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇರುವುದು ಕಂಡು ಬಂದಿತು. ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು ಕಾರಣ ಕೇಳಿದಾಗ, ಹಾವೇರಿ, ಬಳ್ಳಾರಿ ಜಿಲ್ಲೆಯ ಭಾಗದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಹೆರಿಗೆಗೆ ದಾಖಲಾಗುತ್ತಾರೆ. ತಿಂಗಳಿಗೆ ಕನಿಷ್ಠ 900 ಹೆರಿಗೆ ಆಗುತ್ತವೆ. ಸಹಜವಾಗಿಯೇ ಒತ್ತಡ ಇರುತ್ತದೆ. ಹಳೆ ಹೆರಿಗೆ ಆಸ್ಪತ್ರೆ ಜೊತೆಗೆ 100 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆಗೆ ಬೇಡಿಕೆ ಸಲ್ಲಿಸಲಾಗಿದೆ. ಇನ್ನೂ ಮಂಜೂರಾತಿ ಆಗಿಲ್ಲ ಎಂದು ನಿವಾಸಿ ವೈದ್ಯರು ತಿಳಿಸಿದರು.
ಹೊಸ ಆಸ್ಪತ್ರೆಗೆ ಬೇಡಿಕೆ ಸಲ್ಲಿಸಿ ಎಷ್ಟು ದಿನಗಳಾಗಿವೆ. ಸಂಬಂಧಿತ ಸಚಿವರು, ಶಾಸಕರ ಗಮನಕ್ಕೆ ತರಲಾಗಿದೆಯೇ ಎಂಬ ಪ್ರಶ್ನೆಗೆ ಇದು ಬಹಳ ದಿನಗಳ ಬೇಡಿಕೆ ಎಂದು ಆಸ್ಪತ್ರೆ ಅಧೀಕ್ಷಕಿ ಡಾ| ನೀಲಾಂಬಿಕೆ ತಿಳಿಸಿದರು. ಸ್ಕ್ಯಾನಿಂಗ್ ಸೆಂಟರ್‌ನಲ್ಲಿರುವ ಹೈಯರ್ ಎಂಡ್ ಅಲ್ಟ್ರಾಸೌಂಡ್ ಮೆಷಿನ್‌ಗೆ ಅಗತ್ಯ ಹೈಯರ್ ಎಂಡ್ ವ್ಯವಸ್ಥೆಯೇ ಇಲ್ಲ. ಮೈಂಡ್‌ಡ್ರೈ ಮೆಷಿನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಡಿಜಿಟಲ್ ಎಕ್ಸ್‌ರೇ ಫಿಲಂ… ಕೊರತೆ ಇದೆ ಎಂದು ಅಲ್ಲಿನ ಸಿಬ್ಬಂದಿ ತಂಡದ ಗಮನಕ್ಕೆ ತಂದರು.
ಮಹಿಳೆಯರ ವೈದ್ಯಕೀಯ ಚಿಕಿತ್ಸಾ ವಿಭಾಗ, ಹೃದ್ರೋಗ ವಿಭಾಗ, ವೆಂಟಿಲೇಟರ್, ಮೂತ್ರಪಿಂಡ ಚಿಕಿತ್ಸಾ ವಿಭಾಗ ಇತರೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಬರುವರಿಗೆ ಯಾವುದೇ ರೀತಿಯ ಲೋಪವಾಗದಂತೆ ಸಕಾಲಿಕ ಚಿಕಿತ್ಸೆ ಒದಗಿಸಲು ತಂಡ ತಿಳಿಸಿದೆ.