Advertisement

ರೋಗಿಗಳಿಗೆ ಬರವಿಲ್ಲ, ವೈದ್ಯರಿಗೆ ಬಿಡುವಿಲ್ಲ, ಸಿಬಂದಿಯೂ ಇಲ್ಲ!

01:00 AM Mar 12, 2019 | Team Udayavani |

ಕುಂದಾಪುರ: ಹೇಳಿಕೊಳ್ಳಲು ದೊಡ್ಡ ಆಸ್ಪತ್ರೆ. ದಿನವೊಂದಕ್ಕೆ 400ಕ್ಕಿಂತ ಹೆಚ್ಚು ರೋಗಿಗಳು ಬರುತ್ತಾರೆ. ತಿಂಗಳಿಗೆ 200ರಷ್ಟು ಹೆರಿಗೆಯಾಗುತ್ತದೆ.  ವೈದ್ಯರಿಗೆ ಬಿಡುವೇ ಇಲ್ಲದಷ್ಟು ಕೆಲಸ. ಆದರೆ ಆಸ್ಪತ್ರೆ ಒಳಗೆ ಶುಚಿಯಾಗಿದ್ದರೂ ಆವರಣ ಶುಚಿಗೊಳಿಸಲು ಸಿಬಂದಿ ಕೊರತೆ. ಇನ್ನೊಂದೆಡೆ ತ್ಯಾಜ್ಯನೀರಿನಿಂದಾಗಿ ಅಸಹ್ಯ!

Advertisement

ಹೊಸ ಕಟ್ಟಡ; ಡಬಲ್‌ ಧಮಾಕಾ
ಹೊಸ ಕಟ್ಟಡಗಳ ರಚನೆ ಪೂರ್ಣವಾದಲ್ಲಿ ಒಂದಷ್ಟು ಸಮಸ್ಯೆ ನಿವಾರಣೆಯಾಗಲಿದೆ. ಡಬಲ್‌ ಧಮಾಕಾ ಎಂಬಂತೆ ಆಸ್ಪತ್ರೆ ಪಕ್ಕದಲ್ಲಿ ಕೊಡುಗೆಯಾಗಿ ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮೂಲಕ ಸುಸಜ್ಜಿತ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮರಳು ಅಲಭ್ಯತೆಯಿಂದಾಗಿ ಕಾಮಗಾರಿ ನಿಧಾನವಾಗಿದ್ದರೂ ಈ ಮಾಸಾಂತ್ಯ ಅಥವಾ ಮುಂದಿನ ತಿಂಗಳಲ್ಲಿ ಇದರ ಪ್ರಯೋಜನ ಸಾರ್ವಜನಿಕರಿಗೆ ದೊರೆಯಲಿದೆ. ಈ ಮೂಲಕ ಸುಸಜ್ಜಿತ ಆಸ್ಪತ್ರೆ ಕನಸು ನನಸಾಗಲಿದೆ. ಏಕೆಂದರೆ ಪ್ರತಿತಿಂಗಳು 150ರಿಂದ 200 ಹೆರಿಗೆಗಳು ಇಲ್ಲಿ ನಡೆಯುತ್ತಿದ್ದು ಹೊಸ ಆಸ್ಪತ್ರೆ ಮೂಲಕ ಸುಧಾರಿತ ತಂತ್ರಜ್ಞಾನದ ನೆರವು ಬಡರೋಗಿಗಳಿಗೆ ದೊರೆಯಲಿದೆ. ಪ್ರಸ್ತುತ ಒಬ್ಬ ವೈದ್ಯರಿದ್ದು ಕೋಟ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 100 ಹಾಸಿಗೆಗಳ ಆಸ್ಪತ್ರೆ ಯಾಗಿ ಬಹುತೇಕ ಎಲ್ಲ ತಾಲೂಕುಗಳ ಆಸ್ಪತ್ರೆಗಳು ಮೇಲ್ದರ್ಜೆಗೇರಿದ್ದರೂ ಇಲ್ಲಿ 6 ಕೋ.ರೂ.ಗಳ ಸುಸಜ್ಜಿತ ಕಟ್ಟಡ ಕಾಮಗಾರಿ ಇನ್ನೂ ಅಂತಿಮ ಹಂತದಲ್ಲಿದೆ.  

ಡಯಾಲಿಸಿಸ್‌
ಪ್ರತಿಬಾರಿ ತಾ.ಪಂ. ಸಭೆ ಸೇರಿದಂತೆ ಜನಪ್ರತಿನಿಧಿಗಳು ಇಲ್ಲಿ ಡಯಾಲಿಸಿಸ್‌ಗೆ ಬರುವ ರೋಗಿಗಳ ಕುರಿತು ಧ್ವನಿ ಎಬ್ಬಿಸುತ್ತಾರೆ. 2015ರಿಂದ ಇಲ್ಲಿಗೆ ಡಯಾಲಿಸಿಸ್‌ ಸೇವೆ ಮಂಜೂರಾಗಿದ್ದು ಖಾಸಗಿ ಸರಕಾರಿ ಸಹಭಾಗಿತ್ವದಲ್ಲಿ  ಬಿಆರ್‌ಎಸ್‌ ಸಂಸ್ಥೆ ಮೂಲಕ ಸೇವೆ ನೀಡಲಾಗುತ್ತಿದೆ. 2 ಯಂತ್ರಗಳನ್ನು ಸರಕಾರ ನೀಡಿದ್ದು 1 ಯಂತ್ರ ದಾನಿಯೊಬ್ಬರು ನೀಡಿದ್ದಾರೆ. 2 ಯಂತ್ರಗಳನ್ನು ಸೇಡಂನಿಂದ ಅನುಪಯುಕ್ತ ಎಂದು ತರಿಸಲಾಗಿದೆ. ಆದರೆ ಬಳಕೆಗೆ ಅನುಮತಿ ದೊರೆತಿಲ್ಲ. ಇನ್ನೂ 3 ಯಂತ್ರಗಳು ಬೇಕೆಂದು ಸರಕಾರಕ್ಕೆ ಬರೆಯಲಾಗಿದೆ. ಇದಕ್ಕೆ ಅಗತ್ಯವುಳ್ಳ ಜನರೇಟರ್‌ನ್ನು ವಿಧಾನಪರಿಷತ್‌ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ನಿಧಿ ಮೂಲಕ ಹಾಕಿಸಲಾಗಿದೆ. 

ವೈದ್ಯರ ಕೊರತೆ
ಆಸ್ಪತ್ರೆಯಲ್ಲಿ ಮಂಜೂರುಗೊಂಡ ಎಲ್ಲ ಹುದ್ದೆಗಳು ಭರ್ತಿಯಾಗಿದ್ದರೂ ವೈದ್ಯರ ಕೊರತೆಯಿದೆ!. ಅಂದರೆ 24 ತಾಸು ನಿರಂತರ ಸೇವೆ ನೀಡಬೇಕಾದರೆ 4 ಮಂದಿ ಕ್ಯಾಶುವಾಲಿಟಿ ವೈದ್ಯರ ಅಗತ್ಯವಿದೆ. ಅಂತೆಯೇ ಚರ್ಮರೋಗ ತಜ್ಞರ ಹುದ್ದೆ ಸೃಜಿಸಬೇಕಿದೆ. ಫಿಸಿಶಿಯನ್‌ ಹುದ್ದೆ ಒಂದೇ ಇದೆ. ಸೇವೆಯಲ್ಲಿರುವ 10 ಮಂದಿ ವೈದ್ಯರು ಹೊರರೋಗಿ ವಿಭಾಗವನ್ನೂ ನೋಡಿಕೊಳ್ಳಬೇಕು, ತುರ್ತು ಚಿಕಿತ್ಸಾ ಘಟಕವನ್ನೂ ನೋಡಿಕೊಳ್ಳಬೇಕು, ಇತರ ಚಿಕಿತ್ಸಾ ವಿಭಾಗದಲ್ಲೂ ಕರ್ತವ್ಯ ನಿರ್ವಹಿಸಬೇಕಾದ ಒತ್ತಡದಲ್ಲಿದ್ದಾರೆ.

ಶುಚಿತ್ವ  ಕೊರತೆ
ಡಿ ದರ್ಜೆ ಸಿಬಂದಿಯ  ಕೊರತೆಯಿದೆ. ಒಟ್ಟು 28 ಹುದ್ದೆಗಳು ಮಂಜೂರಾಗಿದ್ದು ಕೇವಲ 8 ಮಂದಿಯಷ್ಟೇ ಇದ್ದಾರೆ. 12 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ತುಂಬಲಾಗಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಶುಚಿತ್ವದ ಸಮಸ್ಯೆಯಾಗುತ್ತಿದೆ. ಆರ್ಥಿಕ ಕೊರತೆಯಿಂದಾಗಿ ತ್ಯಾಜ್ಯ ನೀರು ಹೋಗಲು ಪುರಸಭೆಯ ಒಳಚರಂಡಿ ಸಂಪರ್ಕ ತೆಗೆದುಕೊಂಡಿಲ್ಲ. ಇದರ ಪರಿಣಾಮವಾಗಿ ಪ್ರಯೋಗಾಲಯದ ಸಮೀಪ ತ್ಯಾಜ್ಯ ನೀರು ತುಂಬಿ ತುಳುಕುತ್ತಿರುತ್ತದೆ. ಇದನ್ನು ಪುರಸಭೆಯ ಸಕ್ಕಿಂಗ್‌ ಯಂತ್ರ ಬಳಸಿ ವಾರಕ್ಕೆ ಎರಡು ಬಾರಿ ತೆಗೆಸುವ ಅನಿವಾರ್ಯ ಒದಗಿಬಂದಿದೆ. ಇದಕ್ಕೆ ಕೊಡುವ ಬಾಡಿಗೆಯನ್ನೇ ಒಳಚರಂಡಿ ಸಂಪರ್ಕಕ್ಕೆ ನೀಡಿದ್ದರೂ ಆಗುತ್ತಿತ್ತೋ ಏನೋ?.  

Advertisement

ಸುಧಾರಣೆಯಾಗಿದೆ
ಕೆಲವೇ ದಿನಗಳಲ್ಲಿ ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಆಗ ಬಹುತೇಕ ಸಮಸ್ಯೆಗಳು ನಿವಾರಣೆಯಾಗಲಿದೆ. ಕೊರತೆಯಿರುವ ಸಿಬಂದಿಯ ಸಂಖ್ಯೆ ತುಂಬಿದರೆ ಬೇರೆ ಯಾವುದೇ ಸಮಸ್ಯೆ ಇಲ್ಲ. ರೋಗಿಗಳಿಗೆ ಉತ್ತಮ ಸೇವೆಯನ್ನು ಇಲ್ಲಿನ ತಂಡ ನೀಡುತ್ತಿದೆ. 
-ಡಾ| ರಾಬರ್ಟ್‌ ರೆಬೆಲ್ಲೋ, ಆಡಳಿತ ವೈದ್ಯಾಧಿಕಾರಿ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next