Advertisement

ಚಿಕಿತ್ಸೆ ಸಿಗದೆ ಸಾವು: ಡಿಸಿ ಕಚೇರಿಗೆ ಮೃತದೇಹ ತಂದ ಕುಟುಂಬಸ್ಥರು!

09:03 PM Jul 30, 2020 | Hari Prasad |

ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕಿತರ ಸಂಖ್ಯೆ ಕ್ಷಿಪ್ರವಾಗಿ ಏರುಗತಿಯಲ್ಲಿ ಸಾಗುತ್ತಿದೆ.

Advertisement

ಮತ್ತೊಂದೆಡೆ ಸಾಮಾನ್ಯ ರೋಗಿಗಳು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ.

ಹಾಸಿಗೆಗಳು ಖಾಲಿ ಇಲ್ಲವೆಂದು ಆಸ್ಪತ್ರೆಯವರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ರೋಗಿಯನ್ನು ಕುಟುಂಬಸ್ಥರು ಸಾಗಿಸಿದ್ದು, ಕಚೇರಿಗೆ ತಲಪುವಷ್ಟರಲ್ಲಿ ಆ ವ್ಯಕ್ತಿ ಕೊನೆಯುಸಿರೆಳೆದಿರುವ ಘಟನೆ ಗುರುವಾರ ನಡೆದಿದೆ.

ಇಲ್ಲಿನ ಮೋಮಿನಪುರದ ನಿವಾಸಿ, 38 ವರ್ಷದ ವ್ಯಕ್ತಿ ಮೊಹಮ್ಮದ್ ಆಯೂಬ್ ಎಂಬವರೇ ಚಿಕಿತ್ಸೆ ಸಿಗದೆ ಮೃತಪಟ್ಟ ದುರ್ದೈವಿ. ಬುಧವಾರ ರಾತ್ರಿ ಇವರಿಗೆ ಜ್ವರ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಜಿಮ್ಸ್ ಆಸ್ಪತ್ರೆಗೆ ಕುಟುಂಬದವರು ಕರೆದುಕೊಂಡು ಹೋಗಿದ್ದಾರೆ. ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಮ್ಸ್ ಆಸ್ಪತ್ರೆಯಲ್ಲಿ ಆ್ಯಂಟಿಜನ್ ರ್ಯಾಪಿಡ್ ಪರೀಕ್ಷೆ ಮಾಡಲಾಗಿದೆ.

ಆಯೂಬ್‍ನ ವರದಿ ಕೋವಿಡ್ ನೆಗೆಟಿವ್ ಎಂದು ಬಂದಿದೆ. ಆದರೂ, ಆರ್ ಟಿ-ಪಿಸಿಆರ್ ಪರೀಕ್ಷೆ ಮಾಡಬೇಕೆಂದು ರಸೀದಿ ಬರೆದು ಕೊಟ್ಟಿದ್ದಾರೆ. ಅಲ್ಲದೇ, ನಮ್ಮಲ್ಲಿ ಹಾಸಿಗೆಗಳು ಲಭ್ಯವಿಲ್ಲ ಎಂದೂ ರಸೀದಿ ಬರೆದು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Advertisement

ಸರ್ಕಾರಿ ಜಿಮ್ಸ್ ಆಸ್ಪತ್ರೆಯಲ್ಲೇ ಹಾಸಿಗೆ ಇಲ್ಲವೆಂದು ಹೇಳಿದ್ದರಿಂದ ರೋಗಿಯನ್ನು ಆಟೋದಲ್ಲಿ ಇಎಸ್ಐ ಆಸ್ಪತ್ರೆ ಸೇರಿ ಐದು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದರೂ ಯಾವುದೇ ಆಸ್ಪತ್ರೆಯವರು ದಾಖಲಿಸಿಕೊಳ್ಳದ ಕಾರಣ ಕೊನೆಗೆ ದಿಕ್ಕು ತೋಚದೆ ಜಿಲ್ಲಾಧಿಕಾರಿ ಕಚೇರಿಯತ್ತ ರೋಗಿಯನ್ನು ಆಟೋದಲ್ಲಿ ಕರೆದುಕೊಂಡು ಬಂದಿದ್ದೇವು ಎಂದು ಕುಟುಂಬದವರು ದೂರಿದಿದ್ದಾರೆ.

ಆದರೆ ದುರದೃಷ್ಟವಶಾತ್ ಜಿಲ್ಲಾಧಿಕಾರಿ ಕಚೇರಿಗೆ ಬರುವಷ್ಟರಲ್ಲೇ ಆಯೂಬ್ ಮೃತಪಟ್ಟಿದ್ದಾರೆ. ಮೃತ ದೇಹದನ್ನು ಆಟೋದಲ್ಲೇ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದ ಕುಟುಂಬಸ್ಥರು, ಆಸ್ಪತ್ರೆಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರ ಹಾಕಿದರು.

ರೋಗಿಯನ್ನು ನಾವೇ ಸ್ಟ್ರೆಚರ್ ಮೇಲೆ ಹಾಕಿಕೊಂಡು ಆಸ್ಪತ್ರೆಯೊಳಗೆ ತೆಗೆದುಕೊಂಡು ಹೋದೆವು. ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಇದ್ದರೂ, ರೋಗಿಯನ್ನು ನೋಡಲಿಲ್ಲ. ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಎಂದು ಕೇಳಿಕೊಂಡರೂ ಸ್ಪಂದಿಸಲಿಲ್ಲ. ಇವರ ಸಾವಿಗೆ ಜಿಲ್ಲಾಧಿಕಾರಿಗಳು ಉತ್ತರ ಕೊಡಬೇಕೆಂದು ಮೃತ ಸಹೋದರ ಆಗ್ರಹಿಸಿದರು.

ಆಯೂಬ್ ಶವ ಇರುವ ವಿಷಯ ತಿಳಿದು ಆಟೋ ಸುತ್ತ ಜನರು ಸೇರುತ್ತಿದ್ದಂತೆ ಪೊಲೀಸರು ಬಂದು ಕುಟುಂಬದವರನ್ನು ಮೃತ ದೇಹ ತೆಗೆದುಕೊಂಡು ಹೋಗುವಂತೆ ಗದರಿಸಿದ್ದಾರೆ. ಇದರಿಂದ ಏನು ತೋಚದೆ ಮೃತ ದೇಹವನ್ನು ಕುಟುಂಬಸ್ಥರು ಮನೆಗೆ ತೆಗೆದುಕೊಂಡಿದ್ದಾರೆ. ಈತನ ಸಾವಿಗೆ ಕಾರಣರಾದವರ ವಿರುದ್ಧ ಎಫ್ ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ಹೋರಾಟಗಾರ ಮೊಹಮ್ಮದ್ ರಿಯಾಜುದ್ದೀನ್ ಒತ್ತಾಯಿಸಿದ್ದಾರೆ.

ಈ ಕುರಿತು ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿ ಶರತ್ ಬಿ., ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೆಲವು ದಿನಗಳ ಹಿಂದೆಯಷ್ಟೇ ವೆಂಟೇಲೆಟರ್ ಸಿಗದ ಕಾರಣ ಆಶಾ ಕಾರ್ಯಕರ್ತೆ ಸೇರಿ ನಾಲ್ವರು ಸಾವನ್ನಪ್ಪಿರುವ ಆರೋಪಿಗಳು ಕೇಳಿ ಬಂದಿದ್ದವು. ಈ ಘಟನೆಗಳು ಮಾಸುವ ಮುನ್ನವೇ ಇಂತಹುದೇ ಇನ್ನೊಂದು ಘಟನೆ ನಡೆದಿರುವುದು ಕಳವಳಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next