ಹೊಸದಿಲ್ಲಿ : ಬಿಬಿಸಿ ಬಿಡುಗಡೆ ಮಾಡಿರುವ ವಿಶ್ವದ100 ಶ್ರೇಷ್ಠ ವಿದೇಶಿ ಚಿತ್ರಗಳ ಪಟ್ಟಿಯಲ್ಲಿ ಭಾರತದ ಏಕೈಕ ಚಿತ್ರ ಸ್ಥಾನ ಪಡೆದಿದ್ದು ಆ ಹಿರಿಮೆ ಸತ್ಯಜಿತ್ ರಾಯ್ ಅವರ ಪಥೇರ್ ಪಾಂಚಾಲಿ ಚಿತ್ರಕ್ಕೆ ಪ್ರಾಪ್ತವಾಗಿದೆ.
ರಾಯ್ ಅವರ ಪಥೇರ್ ಪಾಂಚಾಲಿ ಚಿತ್ರ 1955ರಲ್ಲಿ ತೆರೆ ಕಂಡಿತ್ತು. 1929ರಲ್ಲಿ ಪ್ರಕಟಗೊಂಡಿದ್ದ ವಿಭೂತಿಭೂಷಣ ಬಂದೋಪಾಧ್ಯಾಯ ಅವರ ಬೃಹತ್ ಕಾದಂಬರಿಯನ್ನು ಆಧರಿಸಿದ ಚಿತ್ರ ಅದಾಗಿತ್ತು.
ತಮ್ಮ ಚೊಚ್ಚಲ ನಿರ್ದೇಶನದ ಈ ಚಿತ್ರದ ಮೂಲಕ ರಾಯ್ ಅವರು ಭಾರತೀಯ ಚಿತ್ರರಂಗದ ಅತ್ಯಂತ ಭರವಸೆಯ, ಪ್ರತಿಭಾವಂತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.
ಪಥೇರ್ ಪಾಂಚಾಲಿ ಚಿತ್ರವು ಅತ್ಯಂತ ಪ್ರಸಿದ್ಧ ಮತ್ತು ಜನಪ್ರಿಯ “ಅಪೂ ಟ್ರೈಲಾಜಿ’ ಚಿತ್ರದ ಮೊದಲ ಭಾಗವಾಗಿತ್ತು.
ಇಂಡಿಯನ್ ಎಕ್ಸ್‌ಪ್ರೆಸ್ ಡಾಟ್ ಕಾಮ್ ವರದಿಯ ಪ್ರಕಾರ 43 ದೇಶಗಳ ಸುಮಾರು 209 ಪ್ರಸಿದ್ಧ ಚಿತ್ರ ವಿಮರ್ಶಕರಿಗೆ 21ನೇ ಶತಮಾನದ ವಿಶ್ವದ ಅತ್ಯಂತ ಶ್ರೇಷ್ಠ ಚಿತ್ರಗಳನ್ನು ಗುರುತಿಸುವಂತೆ ಆಹ್ವಾನಿಸಲಾಗಿತ್ತು.