Advertisement

ಬಿಡುಗಡೆಗೆ ಸಿದ್ಧವಾಗಿದೆ ಕಲಾಜಗತ್ತು ಪ್ರಥಮ ಕಾಣಿಕೆ “ಪತ್ತನಾಜೆ’

03:07 PM Jun 16, 2017 | |

ತುಳುನಾಡ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸಿ, ಇದರ ಶ್ರೇಷ್ಠತೆಗೆ ಹೆಚ್ಚಿನ ಒತ್ತು ನೀಡಿರುವ  ಕಲಾಜಗತ್ತು ಮುಂಬಯಿ ಕ್ರಿಯೇಶನ್ಸ್‌ ನಿರ್ಮಾಣದ ಮೊದಲ ಕಾಣಿಕೆ “ಪತ್ತನಾಜೆ’ ತುಳು ಚಿತ್ರವು ಸೆ. 1ರಂದು ಬಿಡುಗಡೆಗೊಳ್ಳಲಿದೆ. ಕೋಸ್ಟಲ್‌ವುಡ್‌ನ‌ಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಪತ್ತನಾಜೆಗೆ ಸೆನ್ಸಾರ್‌ ಸರ್ಟಿಫಿಕೇಟ್‌ ಸಿಕ್ಕಿದ್ದು, ಪ್ರಸ್ತುತ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ.

Advertisement

ಕೋಸ್ಟಲ್‌ವುಡ್‌ನ‌  ಘಟಾನುಘಟಿ  ಕಲಾವಿದರಾದ ಶಿವಧ್ವಜ್‌, ಚೇತನ್‌ ರೈ ಮಾಣಿ ಸೇರಿದಂತೆ ಮುಂಬಯಿಯ ಪ್ರಸಿದ್ಧ ಕಲಾವಿದೆ ರೇಷ್ಮಾ ಶೆಟ್ಟಿ, ಸೂರ್ಯ ರಾವ್‌, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ, ಶ್ರೇಷ್ಠ ಕಲಾವಿದ ಸುರೇಂದ್ರ ಕುಮಾರ್‌ ಹೆಗ್ಡೆ, ಸೀತಾ ಕೋಟೆ, ಸುಂದರ ರೈ ಮಂದಾರ, ತೆಂಕುತಿಟ್ಟು ಯಕ್ಷಗಾನದ ಧ್ರುವತಾರೆ ಸತೀಶ್‌ ಶೆಟ್ಟಿ ಪಟ್ಲ ಮೊದಲಾದವರ ಅಭಿನಯದಲ್ಲಿ ಮೂಡಿ ಬಂದಿರುವ ಪತ್ತನಾಜೆ ಚಿತ್ರವು ವಿಭಿನ್ನ ಕಥಾ ಹಂದರವನ್ನು ಹೊಂದಿದೆ. ತುಳುಚಿತ್ರರಂಗಕ್ಕೆ ನೂತನ ಆಯಾಮವನ್ನು ಕೊಡುವ ಉದ್ದೇಶದಿಂದ ಮುಂಬಯಿ, ತುಳುನಾಡು ಹಾಗೂ ಕನ್ನಡ ಚಿತ್ರರಂಗದ ಕಲಾವಿದರ, ತಂತ್ರಜ್ಞರ ಸಂಗಮದಲ್ಲಿ ಈ ಚಿತ್ರ ಮೂಡಿ ಬಂದಿದೆ ಎಂದು ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅವರು ತಿಳಿಸಿದ್ದಾರೆ.

ಯಕ್ಷಗಾನ ಕಲಾವಿದನೋರ್ವನ ಬದುಕನ್ನು ಆಧರಿಸಿದ ಕಥೆ ಚಿತ್ರದಲ್ಲಿದ್ದು, ಸಹಜ ಜೀವನ ಶೈಲಿಯೂ ಒಳಗೊಂಡಿದೆ. ಯಕ್ಷಗಾನ ಕಲಾವಿದ ಹೃದಯದಲ್ಲಿರುವ ಪ್ರೀತಿ ಈ ಸಿನೆಮಾದಲ್ಲಿ ವ್ಯಕ್ತವಾಗಲಿದೆ. ತೆಂಕು-ಬಡಗಿನ ಯಕ್ಷಗಾನ ಶೈಲಿಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅವರು ತನ್ನ ಅನುಭವವನ್ನು ಈ ಸಿನೆಮಾದಲ್ಲಿ ಧಾರೆ ಎರೆದಿದ್ದಾರೆ. ಯಕ್ಷಗಾನ ಜೀವನದ ಜತೆಗೆ ಕಲಾವಿದನ ಅಂತರಂಗವನ್ನೂ ಚಿತ್ರವು ಬಿಂಬಿಸಲಿದೆ. ಯುವ ಜನತೆಯನ್ನು ಮೆಚ್ಚಿಸಬಲ್ಲ, ಹಿರಿಯರು ಒಪ್ಪಿಕೊಳ್ಳಬಲ್ಲ ಒಳ್ಳೆಯ ಕಥೆ ಚಿತ್ರದಲ್ಲಿದೆ. ಮುಂಬಯಿಯ ತುಳು-ಕನ್ನಡಿಗರ ಸಂಪೂರ್ಣ ಪ್ರೋತ್ಸಾಹ, ಸಹಕಾರವಿರಲಿ ಎಂದು ಕಲಾಜಗತ್ತು ವಿಜಯಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

ಚಿತ್ರಕ್ಕೆ ಸಂಗೀತವನ್ನು ಮನೋಹರ್‌ ವಿಟuಲ್‌ ಅವರು ನೀಡಿದ್ದು, ಛಾಯಾಗ್ರಹಣದಲ್ಲಿ ಸುರೇಶ್‌ ಬಾಬು ಅವರು ಸಹಕರಿಸಿದ್ದಾರೆ. ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಅವರ ಅತ್ಯುತ್ತಮ ಸಂಭಾಷಣೆಯೊಂದಿಗೆ ಮೂಡಿಬಂದಿರುವ ಚಿತ್ರದ ಸಾಹಸ‌ದಲ್ಲಿ ಹರೀಶ್‌ ಶೆಟ್ಟಿ ಮುಂಬಯಿ, ಕಾರ್ಯಕಾರಿ ನಿರ್ಮಾಪಕರಾಗಿ ಮಂಜುನಾಥ ಬನ್ನೂರು, ಸಹ ನಿರ್ದೇಶಕರಾಗಿ ಸಚಿನ್‌ ಶೆಟ್ಟಿ ಕುಂಬಳೆ, ನಿರ್ಮಾಣ ಮೇಲ್ವಿಚಾರಣೆಯಲ್ಲಿ ಎನ್‌. ಪೃಥ್ವಿರಾಜ್‌ ಮುಂಡ್ಕೂರು, ಕಲಾನಿರ್ದೇಶಕರಾಗಿ ಚಂಚಲಾಕ್ಷೀ ಭಟ್‌, ಪ್ರಚಾರ ಕಲೆಯಲ್ಲಿ ಸುಧಾಕರ ಆಚಾರ್ಯ ಅಟ್ಟೆಗೋಳಿ ಅವರು ಸಹಕರಿಸಿದ್ದಾರೆ.

ಪತ್ತನಾಜೆ ತಂಡದ ದ್ವಿತೀಯ ಕೊಡುಗೆ “ಬೊಲ್ಲಿ ಬಂಗಾರ್‌’ ಚಿತ್ರಕ್ಕೆ  ಅ. 2ರಂದು ಮುಂಬಯಿಯಲ್ಲಿ ಮುಹೂರ್ತ ನಡೆಯಲಿದೆ. ಈ ಚಿತ್ರವನ್ನೂ ಕಲಾಜಗತ್ತು ವಿಜಯಕುಮಾರ್‌ ಶೆಟ್ಟಿ ಅವರು ನಿರ್ದೇಶಿಸಲಿದ್ದು, ಮುಹೂರ್ತದಿಂದ ಹಿಡಿದು ಚಿತ್ರೀಕರಣ ಎಲ್ಲವೂ ಮುಂಬಯಿ ಮಣ್ಣಿನಲ್ಲೇ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next