ಮಂಬಯಿ: ಬಾಲಿವುಡ್‌ನಲ್ಲಿ ʼಬಾಯ್ಕಾಟ್ʼ ಹೊಸತೇನಲ್ಲ. ಇತ್ತೀಚೆಗೆ ಬಾಯ್ಕಾಟ್ ಟ್ರೆಂಡ್ ಹೆಚ್ಚಾಗುತ್ತಿದೆ. ಧಾರ್ಮಿಕ ಭಾವನೆಗೆ ಧಕ್ಕೆ, ಯಾವುದೋ ಸಮುದಾಯಕ್ಕೆ ಅವಮಾನ ಇಂಥ ವಿಷಯಗಳಿಂದ ವಿವಾದಕ್ಕೆ ಸಿಲುಕಿ ಸಂಘಟನೆಗಳಿಂದ ಹಾಗೂ ಜನರಿಂದ ಬಾಯ್ಕಾಟ್ ಗೆ ಒಳಗಾದ ಸಿನಿಮಾಗಳ ಪಟ್ಟಿ ಇಲ್ಲಿದೆ.
ಫೈಯರ್: 1998 ರಲ್ಲಿ ತೆರೆಗೆ ಬಂದಿದ್ದ ಫೈಯರ್ ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲಿ ಶಿವ ಸೇನೆ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಸಾಂಪ್ರದಾಯಿಕ ಕುಟುಂಬವೊಂದರಲ್ಲಿ ಇಬ್ಬರು ಮಹಿಳೆಯರ ನಡುವಿನ ಸಂಬಂಧವನ್ನು ತೋರಿಸುವ ಸಿನಿಮಾ ಇದಾಗಿದೆ. ರಾಧಾ – ಸೀತಾ ನಡುವೆ ರೂಪುಗೊಳ್ಳುವ ಸಂಬಂಧದ ಕುರಿತು ಸಾಗುವ ಸಿನಿಮಾ ಬಲಪಂಥೀಯ ಸಂಘಟನೆಯನ್ನು ಕೆರಳಿಸಿತ್ತು. ಥಿಯೇಟರ್ ನೊಳಗೆ ನುಗ್ಗಿ ಸಂಘಟನೆಗಳು ಈ ಸಿನಿಮಾದ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಪ್ರತಿಭಟನೆ ನಡೆಸಿದ್ದರು.
ವಾಟರ್: ಫೈಯರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ದೀಪಾ ಮೆಹ್ತಾ ಅವರೇ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಬಡ ವಿಧವೆ ಮಹಿಳೆಯರು ಸಮಾಜದಲ್ಲಿರುವ ಬಲಿಷ್ಠ ಪುರೋಹಿತರ ಬಲವಂತಿಕೆಗೆ ವೇಶ್ಯಾವಾಟಿಕೆಗೆ ಒಳಗಾಗುವುದನ್ನು ಈ ಸಿನಿಮಾದಲ್ಲಿ ಕಥಾ ವಸ್ತುವಾಗಿ ತೋರಿಸಲಾಗಿದೆ. ಇದೊಂದು ಹಿಂದೂ ವಿರೋಧಿ ಸಿನಿಮಾವೆಂದು ಶಿವಸೇನಾ ಕಾರ್ಯಕರ್ತರು ಸಿನಿಮಾಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುಸಿದ್ದರು. ಸಿನಿಮಾ ಚಿತ್ರೀಕರಣದ ವೇಳೆ ಶೂಟಿಂಗ್ ಸ್ಥಳದಲ್ಲಿ ಭಾರೀ ಪ್ರತಿಭಟನೆ ನಡೆಸಿ ನಿರ್ದೇಶಕಿಗೆ ಬೆದರಿಕೆ ಕೂಡ ಹಾಕಲಾಗಿತ್ತು.
ಸಿನಿಮಾದ ಡಿವಿಡಿಗಳನ್ನು ಸುಟ್ಟು ಹಾಕಿ, ಸಿನಿಮಾವನ್ನು ಪ್ರದರ್ಶನ ಮಾಡದಂತೆ ಆ ಸಮಯದಲ್ಲಿ (2007) ಪ್ರತಿಭಟನಾಕಾರರು ಥಿಯೇಟರ್ ಗಳಿಗೆ ಸೂಚಿಸಿದ್ದರು. ಅನೇಕಾ ಚಿತ್ರ ಮಂದಿರದಲ್ಲಿ ಈ ಕಾರಣದಿಂದ ಈ ಸಿನಿಮಾ ಬಿಡುಗಡೆಯೇ ಆಗಿಲ್ಲ.
ಹೈದರ್: 2014 ರಲ್ಲಿ ತೆರೆ ಕಂಡ ವಿಶಾಲ್ ಭಾರದ್ವಾಜ್ ನಿರ್ದೇಶನದ ʼಹೈದರ್ʼ ಸಿನಿಮಾಕ್ಕೆ ಬಾಯ್ಕಾಟ್ ಬಿಸಿ ತಟ್ಟಿತ್ತು. ಸಿನಿಮಾದಲ್ಲಿ ಭಾರತೀಯ ಸೇನೆಯನ್ನು ಅಪರಾಧಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾರ ಎಂದು ಬಿಂಬಿಸುವಂತೆ ತೋರಿಸಲಾಗಿದೆ. ಸೇನೆಯನ್ನು ಅವಮಾನ ಮಾಡಲಾಗಿದೆ ಎಂದು ಕೆಲವರು ಸಿನಿಮಾವನ್ನು ಬಾಯ್ಕಾಟ್ ಮಾಡಲು ಕರೆ ನೀಡಿದ್ದರು. ಪ್ರಾಚೀನ ದೇಗುಲವನ್ನು ಭೂತದ ಮನೆಯನ್ನಾಗಿ ತೋರಿಸಿರುವುದು ಸಿನಿಮಾ ಬಾಯ್ಕಾಟ್ ಗೆ ಮತ್ತಷ್ಟು ಬಲ ನೀಡಿತ್ತು.
ಪಿಕೆ: ಪಿಕೆ ಸಿನಿಮಾ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿತ್ತು. ಆಮಿರ್ ಖಾನ್, ಅನುಷ್ಕಾ ಶರ್ಮಾ ಮುಖ್ಯ ಭೂಮಿಕೆಯ ಸಿನಿಮಾವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದರು. ಯೋಗ ಗುರು ಬಾಬಾ ರಾಮ್ ದೇವ್ ಅವರು ಸಿನಿಮಾದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ದೊಡ್ಡ ವ್ಯಕ್ತಿಗಳು ಹಿಂದೂ ದೇವತೆಗಳನ್ನು ಅವಮಾನಿಸಲು ಇಷ್ಟಪಡುತ್ತಿದ್ದಾರೆ ಎಂದು ರಾಮ್ ದೇವ್ ಆರೋಪಿಸಿದ್ದರು. ಕೆಲ ಕಡೆ ಸಿನಿಮಾದ ವಿರುದ್ದ ಎಫ್ ಐ ಆರ್ ದಾಖಲಾಗಿತ್ತು. ಹಿಂದೂಪರ ಸಂಘಟನೆಗಳು ಥಿಯೇಟರ್ ನಲ್ಲಿ ಪ್ರದರ್ಶನವನ್ನು ಸ್ಥಗಿತಗೊಳಿಸಿ, ಪೋಸ್ಟರ್ ಗಳನ್ನು ಹರಿದು ಹಾಕಿಬ್ಯಾನ್ ಮಾಡಲು ಕರೆ ನೀಡಿದ್ದರು.
ದಂಗಲ್: ಪಿಕೆ ಬಳಿಕ ಆಮಿರ್ ಖಾನ್ ನಟನೆಯ ʼದಂಗಲ್ʼ ಸಿನಿಮಾವೂ ಬಾಯ್ಕಾಟ್ ಗೆ ಗುರಿಯಾಗಿತ್ತು. 2015 ರಲ್ಲಿ ಅಹಿಷ್ಣುತೆಯಿಂದ ನನಗೆ ದೇಶದಲ್ಲಿ ವಾಸಿಸಲು ಕಷ್ಟವಾಗುತ್ತಿದೆ. ಬೇರೆ ದೇಶದಲ್ಲಿ ವಾಸಿಸುವ ಕುರಿತು ಯೋಚಿಸಿದ್ದೇನೆ ಎನ್ನುವ ಆಮಿರ್ ಖಾನ್ ಹೇಳಿಕೆ ದೇಶದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಜುಲೈ 4 ರಂದು 2016 ರಂದು ʼದಂಗಲ್ʼ ಸಿನಿಮಾದ ಪೋಸ್ಟರ್ ಬಿಡುಗಡೆಯಾದ ಮೇಲೆ ನೆಟ್ಟಿಗರು #BoycottDangal ನಡಿಯಲ್ಲಿ ಸಿನಿಮಾದ ವಿರುದ್ದ ಕಿಡಿಕಾರಲು ಶುರು ಮಾಡಿದರು. ಪೋಸ್ಟರ್ ಗಳನ್ನು ಸುಟ್ಟು ಹಾಕಿ ಪ್ರತಿಭಟನೆ ನಡೆಸಿದರು.
ಲಿಪ್ ಸ್ಟಿಕ್ ಅಂಡರ್ ಮೈ ಬುರ್ಖಾ: ಟೈಟಲ್ ನಿಂದಲೇ ವಿವಾದವನ್ನು ಹುಟ್ಟಿಸಿಕೊಂಡ ಸಿನಿಮಾ ಲಿಪ್ ಸ್ಟಿಕ್ ಅಂಡರ್ ಮೈ ಬುರ್ಖಾ. ಫೆಬ್ರವರಿ 26, 2017 ರಂದು ಭೋಪಾಲ್‌ನಲ್ಲಿ ಮುಸ್ಲಿಂ ಮುಖಂಡರ ಗುಂಪು ಅಲಂಕೃತ ಶ್ರೀವಾಸ್ತವ್ ಅವರ ‘ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ’ ಸಿನಿಮಾವನ್ನು ಬಹಿಷ್ಕರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಮುಸ್ಲಿಂ ಧರ್ಮದ ಭಾವನೆಗಳಿಗೆ ಸಿನಿಮಾ ಧಕ್ಕೆ ತರುತ್ತದೆ ಎಂದು ಸಿನಿಮಾ ವಿರುದ್ದ ಪ್ರತಿಭಟನೆ ವ್ಯಕ್ತವಾಗಿತ್ತು. ದೇಶದ ವಿವಿಧ ಭಾಗಗಳಲ್ಲಿ ಪರ್ದಾ ಆಯ್ಕೆ ಮಾಡುವ ಹಿಂದೂ ಮಹಿಳೆಯರನ್ನು ಕೂಡ ಸಿನಿಮಾ ಅಪಹಾಸ್ಯ ಮಾಡಿದೆ ಎಂದು ವಿರೋಧ ವ್ಯಕ್ತವಾಗಿತ್ತು.
ಪದ್ಮಾವತಿ: ರಣ್ವೀರ್ ಸಿಂಗ್ – ದೀಪಿಕಾ ಪಡುಕೋಣೆ ಅಭಿನಯದ ʼಪದ್ಮಾವತಿʼ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ದೀಪಿಕಾಳನ್ನು ರಾಣಿ ಪದ್ಮಾವತಿಯನ್ನಾಗಿ , ರಣ್ ವೀರ್ ಸಿಂಗ್ ರನ್ನು ಅಲ್ಲಾವುದ್ದೀನ್ ಖಿಲ್ಜಿಯನ್ನಾಗಿ ತೋರಿಸಲಾಗಿದೆ. ಇಬ್ಬರನ್ನೂ ಬೇರೆ ಬೇರೆ ಧರ್ಮದಲ್ಲಿ ತೋರಿಸಲಾಗಿದ್ದು, ಇಬ್ಬರ ನಡುವಿನ ಕೆಲ ದೃಶ್ಯಗಳಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಜನವರಿ 27, 2017 ರಂದು, ಶ್ರೀ ರಜಪೂತ್ ಕರ್ಣಿ ಸೇನೆಯ ಸದಸ್ಯರು ಜೈಪುರದಲ್ಲಿ ‘ಪದ್ಮಾವತಿ’ ಸೆಟ್‌ಗಳನ್ನು ಧ್ವಂಸಗೊಳಿಸಿದ್ದರು. ಮತ್ತು ದುಬಾರಿ ಚಲನಚಿತ್ರ ಉಪಕರಣಗಳನ್ನು ನಾಶಪಡಿಸಿದ್ದರು. ಅಷ್ಟೇ ಅಲ್ಲ, ಬನ್ಸಾಲಿ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದಿದ್ದರು. ಯಾವುದೇ ಧರ್ಮದ ಭಾವನಗೆ ಧಕ್ಕೆ ತರು ಉದ್ದೇಶ ನಮ್ಮದಾಗಿರಲಿಲ್ಲ ಎಂದು ಬನ್ಸಾಲಿ ಹೇಳಿದ್ದರು.
ಡಾರ್ಲಿಂಗ್ಸ್ : ಇದೇ ವರ್ಷ ತೆರೆಗೆ ಬಂದಿದ್ದ ಆಲಿಯಾ ಭಟ್ ಅಭಿನಯದ ʼಡಾರ್ಲಿಂಗ್ಸ್ʼ ಪುರುಷರ ವಿರುದ್ಧ ಕೌಟುಂಬಿಕ ಹಿಂಸೆಯನ್ನು ಪ್ರಚಾರ ಮಾಡುತ್ತದೆ ಎನ್ನುವ ಕಾರಣದಿಂದ ʼಬಾಯ್ಕಾಟ್ʼ ಗುರಿಗೆ ಒಳಗಾಗಿತ್ತು.
ಲಾಲ್ ಸಿಂಗ್ ಚಡ್ಡಾ: ಆಮಿರ್ ಖಾನ್ ಅವರ ʼಅಹಿಷ್ಣುತೆʼ ಹೇಳಿಕೆಯನ್ನೇ ಗುರಿಯಾಗಿಸಿಕೊಂಡು ʼ ಲಾಲ್ ಸಿಂಗ್ ಚಡ್ಡಾʼ ಸಿನಿಮಾವನ್ನು ಬಾಯ್ಕಟ್ ಮಾಡಿ ಟ್ವಟಿರ್ ನಲ್ಲಿ ಟ್ರೆಂಡ್ ಮಾಡಿದ್ದರು. ಕರೀನಾ ಕಪೂರ್ ಅವರು ನಮ್ಮ ಸಿನಿಮಾವನ್ನು ನೋಡುದಾದ್ರೆ ನೋಡಿ, ಇಲ್ಲದಿದ್ರೆ ಪರವಾಗಿಲ್ಲ ಎನ್ನುವ ಮಾತು ಕೂಡ ಸಿನಿಮಾದ ಮೇಲೆ ಪರಿಣಾಮ ಬಿದ್ದಿತ್ತು. ಕೆಲ ಸಂಘಟನೆಗಳು ಸಿನಿಮಾದ ವಿರುದ್ಧ, ಆಮಿರ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೆಲವೇ ದಿನಗಳ ಬಳಿಕ ಮಾಯಾವಾಗಿತ್ತು.
ರಕ್ಷಾ ಬಂಧನ್: ಲಾಲ್ ಸಿಂಗ್ ಚಡ್ಡಾಅಕ್ಷಯ್ ಕುಮಾರ್ ಅಭಿನಯದ ʼರಕ್ಷಾ ಬಂಧನ್ʼ ಸಿನಿಮಾದ ಬರಹಗಾರ್ತಿ ಕನಿಕಾ ಧಿಲ್ಲೋನ್ ಈ ಹಿಂದೆ ಗೋಮೂತ್ರ ಕುಡಿದರೆ ಕೋವಿಡ್ ವಾಸಿಯಾಗುತ್ತದೆ. ಹಿಜಾಬ್ ಗೆ ಬೆಂಬಲ ಹಾಗೂ ಪೌರತ್ವ ತಿದ್ದುಪಡಿ ಕಾಯಿದೆಗೆ ಬೆಂಬಲ ನೀಡಿದ ಟ್ವೀಟ್ ವಿವಾದಕ್ಕೆ ಗುರಿಯಾಗಿತ್ತು. ಅದನ್ನೇ ಗಮನದಲ್ಲಿಟ್ಟುಕೊಂಡು ಸಂಘಟನೆಗಳು ʼರಕ್ಷಾ ಬಂಧನ್ʼ ಸಿನಿಮಾವನ್ನು ಬಾಯ್ಕಾಟ್ ಮಾಡುವಂತೆ ಟ್ರೆಂಡ್ ಸೃಷ್ಟಿ ಮಾಡಿದ್ದರು.
ಬ್ರಹ್ಮಾಸ್ತ್ರ: ರಣ್ಬೀರ್ ಅಭಿನಯದ ʼಬ್ರಹ್ಮಾಸ್ತ್ರʼ ಸಿನಿಮಾಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆಲಿಯಾ ಹಾಗೂ ರಣ್ಬೀರ್ ಮಧ್ಯ ಪ್ರದೇಶದ ದೇವಸ್ಥಾನಕ್ಕೆ ಹೋಗುವಾಗ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಲಾಗಿತ್ತು. ರಣ್ಬೀರ್ ಸಿಂಗ್ ಹೇಳಿಕೆಯಲ್ಲಿ ʼನಾನು ದೊಡ್ಡ ಬೀಫ್ʼ ವ್ಯಕ್ತಿ ಅಂದರೆ ಬೀಫರ್ ತಿನ್ನುತ್ತೇನೆ ಎಂದಿದ್ದರು.
ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ʼ ʼಬ್ರಹ್ಮಾಸ್ತ್ರʼವನ್ನು ಬಾಯ್ಕಾಟ್ ಮಾಡುವಂತೆ ಟ್ರೆಂಡ್ ಸೃಷ್ಟಿಯಾಗಿತ್ತು. ಇದರ ಹೊರತಾಗಿಯೂ ಸಿನಿಮಾ ವರ್ಷದ ದೊಡ್ಡ ಹಿಟ್ ಆಗಿ ಹೊರಹೊಮ್ಮಿತ್ತು.
ಸದ್ಯ ಶಾರುಖ್ ಖಾನ್ ಅಭಿನಯದ ʼಪಠಾಣ್ʼ ಸಿನಿಮಾದ ʼಬೇಷರಂ ರಂಗ್ʼ ಹಾಡು ʼಬಾಯ್ಕಟ್ʼ ವಿವಾದದ ಕೇಂದ್ರ ಬಿಂದುವಾಗಿದೆ. ಈ ಹಾಡಿನಲ್ಲಿ ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ ಎಂದು ಕೆಲವರು ಆರೋಪಿಸಿ, ಪ್ರತಿಭಟನೆ ನಡೆಸಲಾಗುತ್ತಿದೆ.