ಬೀದರ: ನೂರಾರು ಸಣ್ಣಪುಟ್ಟ ಸಂಸ್ಥಾನಗಳಲ್ಲಿ ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿ, ಅಖಂಡ ಭಾರತ ನಿರ್ಮಿಸಿದವರು ಸರದಾರ್ ವಲ್ಲಭಭಾಯಿ ಪಟೇಲರು ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಇಲ್ಲಿ ಹೇಳಿದರು.
ನಗರದಲ್ಲಿ ರವಿವಾರ ನಡೆದ ರಾಷ್ಟ್ರೀಯ ಏಕತಾ ದಿವಸ್ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರವೂ ಹಲವು ರಾಜ ಸಂಸ್ಥಾನಗಳು ಭಾರತದ ಒಕ್ಕೂಟದಲ್ಲಿ ಸೇರಲು ನಿರಾಕರಿಸಿದ್ದವು. ದೇಶದ ಪ್ರಥಮ ಗೃಹ ಸಚಿವರಾಗಿದ್ದ ಪಟೇಲರು, ಎಲ್ಲ ರಾಜ್ಯಗಳು ಸೇರುವಂತೆ ಮಾಡಿದರು. ಭಾರತದಲ್ಲಿ ಸೇರಲು ನಿರಾಕರಿಸಿದ್ದ ಹೈದರಾಬಾದ್ ನಿಜಾಮನಿಗೆ ಪಾಠ ಕಲಿಸಿದರು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಪ್ರತಿಷ್ಠಾನದ ಸಂಚಾಲಕರಾದ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, 22 ವರ್ಷಗಳ ಪ್ರಯತ್ನದ ನಂತರ ಪಟೇಲರ ಪ್ರತಿಮೆ ಸ್ಥಾಪನೆಗೆ ಸ್ಥಳ ಲಭಿಸಿದೆ. ಪುರಾತತ್ವ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಸಹಕಾರದಿಂದ ಸ್ಥಳ ಸಮಸ್ಯೆ ಕೊನೆಗೊಂಡಿದೆ. ಸ್ಥಳಕ್ಕೆ ಹತ್ತಿಕೊಂಡಿಯೇ ಇರುವ ಪುರಾತತ್ವ ಇಲಾಖೆಯ ಜಮೀನು ಸುತ್ತ ಕಂಪೌಂಡ್ ನಿರ್ಮಿಸಿಕೊಳ್ಳುವುದಾಗಿ ಇಲಾಖೆಯವರು ತಿಳಿಸಿದ್ದಾರೆ ಎಂದು ಹೇಳಿದರು.
ನಿವೇಶನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಕೊನೆಗೊಂಡಿವೆ. 6 ಕೋಟಿ ರೂ. ವೆಚ್ಚದಲ್ಲಿ ಪಟೇಲರ ಮೂರ್ತಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಸಹಕಾರ ಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದಲೇ ಪ್ರತಿಮೆ ಅನಾವರಣ ಮಾಡಿಸುವ ಉದ್ದೇಶ ಇದೆ. ಜಿಲ್ಲೆಯವರೇ ಆಗಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರು ಈ ಜವಾಬ್ದಾರಿ ನಿರ್ವಹಿಸುವ ವಿಶ್ವಾಸ ಇದೆ ಎಂದರು.
ಈ ವೇಳೆ ವಾಲಿ ಅವರು ಏಕತಾ ಪ್ರತಿಜ್ಞೆ ಬೋಧಿಸಿದರು. ಹಿರಿಯರಾದ ಶಕುಂತಲಾ ವಾಲಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಕೆಎಸ್‌ಐಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಕರ್ನಲ್ ಶರಣಪ್ಪ ಸಿಕೇನಪುರ, ಸೋಮಶೇಖರ ಪಾಟೀಲ ಗಾದಗಿ, ದೀಪಕ ವಾಲಿ, ಡಾ| ರಜನೀಶ ವಾಲಿ, ವಿವೇಕ ವಾಲಿ, ಅನುÒಲ್ ವಾಲಿ, ಬಿ.ಜಿ. ಶೆಟಕಾರ, ರೇವಣಸಿದ್ದಪ್ಪ ಜಲಾದೆ, ಶಕುಂತಲಾ ಬೆಲ್ದಾಳೆ, ಬಸವರಾಜ ಧನ್ನೂರ್, ಶ್ರೀಕಾಂತ ಸ್ವಾಮಿ, ಬಸವರಾಜ ಪಾಟೀಲ ಹಾರೂರಗೇರಿ, ವಿಜಯಕುಮಾರ ಆನಂದೆ, ಪ್ರಕಾಶ ಟೊಣ್ಣೆ, ಜಗನ್ನಾಥ ಜಮಾದಾರ್, ಸುರೇಶ ಚೆನಶೆಟ್ಟಿ ಇದ್ದರು.