Advertisement

ಪಟೇಲ್‌ ಕೊಡುಗೆ ಅಳಿಸಿ ಹಾಕಲು ನಡೆದಿತ್ತು ಯತ್ನ

06:35 AM Nov 01, 2017 | Team Udayavani |

ಹೊಸದಿಲ್ಲಿ: “ಸ್ವಾತಂತ್ರ್ಯ ಸಿಕ್ಕಿದ ಕೂಡಲೇ ದೇಶವನ್ನು ಒಗ್ಗೂಡಿಸುವಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ನೀಡಿದ ಕೊಡುಗೆಯನ್ನು ಸಂಪೂರ್ಣವಾಗಿ ಅಳಿಸಿಹಾಕಲು ಕೆಲವು ಪಕ್ಷಗಳು ಹಾಗೂ ಸರಕಾರಗಳು ಯತ್ನಿಸಿದವು.’ 
ಇದು ಹಿಂದಿನ ಯುಪಿಎ ಸರಕಾರ ಹಾಗೂ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಹರಿಹಾಯ್ದ ಬಗೆ.

Advertisement

ಪಟೇಲ್‌ ಅವರ 142ನೇ ಜನ್ಮದಿನದ ಅಂಗವಾಗಿ ದಿಲ್ಲಿಯಲ್ಲಿ ಮಂಗಳವಾರ ನಡೆದ “ಏಕತೆಗಾಗಿ ಓಟ’ಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಪ್ರತಿಪಕ್ಷಗಳು ಪಟೇಲ್‌ರ ನೆನಪನ್ನು ಮರೆಸಲು ಯತ್ನಿಸಿದ್ದಾಗಿ ಆರೋಪಿಸಿದ್ದಾರೆ. “ವಸಾಹತುಶಾಹಿ ಶಕ್ತಿಗಳು ದೇಶವನ್ನು ಸಣ್ಣ ಸಣ್ಣ ರಾಜ್ಯಗಳನ್ನಾಡಿ ವಿಂಗಡಿಸಲು ಬಯಸಿದ್ದರೂ, ಪಟೇಲ್‌ ಅವರ ಮುತ್ಸ ದ್ದಿತನ ಮತ್ತು ಚತುರತೆಯಿಂದಾಗಿ ಭಾರತದಲ್ಲಿ ಐಕ್ಯತೆ ಮುಂದುವರಿಯಿತು,’ ಎಂದೂ ಅವರು ಹೇಳಿದ್ದಾರೆ.

“ಪಟೇಲ್‌ರ ಕೊಡುಗೆಯನ್ನೇ ಮರೆಸುವಂಥ ಪ್ರಯತ್ನಗಳು ನಡೆದಿವೆ. ಆದರೆ, ಸರ್ದಾರ್‌ ಯಾವತ್ತೂ ಸರ್ದಾರ್‌ ಆಗಿಯೇ ಉಳಿಯುತ್ತಾರೆ. ಸರಕಾರ, ಪಕ್ಷ ಗಳು ಮರೆತರೂ ದೇಶದ ಯುವಜನಾಂಗವು ಅವರನ್ನು ಮರೆಯುವುದಿಲ್ಲ. ದೇಶವನ್ನು ಒಡೆಯುವಂಥ ಬ್ರಿಟಿಷರ ಪ್ರಯತ್ನವನ್ನು ವಿಫ‌ಲಗೊಳಿಸಿದವರು ಸರ್ದಾರ್‌. ಅವರು ಸಾಮ, ದಾಮ, ದಂಡ, ಭೇದ, ರಾಜನೀತಿಗಳನ್ನು ಬಳಸಿ, ಅತ್ಯಂತ ಕಡಿಮೆ ಅವಧಿಯಲ್ಲಿ ಎಲ್ಲ ರಾಜ್ಯಗಳನ್ನೂ ಒಗ್ಗೂಡಿಸಿ, ಭಾರತವನ್ನು ಒಂದು ದೇಶವನ್ನಾಗಿ ಮಾರ್ಪಾಡು ಮಾಡಿದರು’ ಎಂದೂ ಪ್ರಧಾನಿ ತಿಳಿಸಿದ್ದಾರೆ. ಜತೆಗೆ, ಭಾರತದ ವೈವಿಧ್ಯತೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಈ ವೈವಿಧ್ಯತೆಯೇ ನಮ್ಮ ಶಕ್ತಿ ಮತ್ತು ಭವಿಷ್ಯ ಎಂದೂ ಹೇಳಿದ್ದಾರೆ.

ಸಾವಿರಾರು ಮಂದಿ ಭಾಗಿ: ದಿಲ್ಲಿಯ ಮೇಜರ್‌ ಧ್ಯಾನ್‌ ಚಂದ್‌ ನ್ಯಾಷನಲ್‌ ಸ್ಟೇಡಿಯಂನಿಂದ ಆರಂಭ ವಾದ “ಏಕತೆಗಾಗಿ ಓಟ’ದಲ್ಲಿ ಸರ್ದಾರ್‌ ಸಿಂಗ್‌, ದೀಪಾ ಕರ್ಮಾಕರ್‌, ಸುರೇಶ್‌ ರೈನಾ, ಕರ್ಣಂ ಮಲ್ಲೇಶ್ವರಿ ಮತ್ತಿತರ ಕ್ರೀಡಾಳುಗಳು, ಸರಕಾರಿ ಅಧಿಕಾರಿಗಳು, ಸಚಿವರು, ಸಾರ್ವಜನಿಕರು ಸೇರಿ ಭಾರೀ ಸಂಖ್ಯೆಯ ಜನ ಪಾಲ್ಗೊಂಡಿದ್ದರು. 1.5 ಕಿ.ಮೀ. ದೂರದವರೆಗೆ ಓಟ ನಡೆದು, ಇಂಡಿಯಾ ಗೇಟ್‌ ಸಮೀಪ ಸಮಾಪ್ತಿ ಗೊಂಡಿತು. ಇದಕ್ಕೂ ಮೊದಲು ರಾಷ್ಟ್ರಪತಿ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್‌ ಸಿಂಗ್‌ ಮತ್ತಿತರ ಗಣ್ಯರು ಪಾರ್ಲಿಮೆಂಟ್‌ ಸ್ಟ್ರೀಟ್‌ನಲ್ಲಿರುವ ಪಟೇಲ್‌ ಪ್ರತಿಮೆಗೆ ಪುಷ್ಪಾಂಜಲಿ ಸಲ್ಲಿಸಿದರು. ದಿಲ್ಲಿಯಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಹಲವೆಡೆ ಪಟೇಲ್‌ ಸ್ಮರಣಾರ್ಥ ಏಕತಾ ನಡಿಗೆ, ಏಕತೆಗಾಗಿ ಓಟ ನಡೆದವು.

ಇಂದಿರಾ ಗಾಂಧಿಯ ಸ್ಮರಿಸಿದ ಗಣ್ಯರು
ಮಂಗಳವಾರ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 33ನೇ ಪುಣ್ಯತಿಥಿಯಾಗಿದ್ದು, ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಮತ್ತಿತರ ಗಣ್ಯರು ಇಂದಿರಾರಿಗೆ ಗೌರವ ಸಲ್ಲಿಸಿದರು. ಮುಖರ್ಜಿ, ಸಿಂಗ್‌ ಹಾಗೂ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಶಕ್ತಿ ಸ್ಥಳಕ್ಕೆ ತೆರಳಿ, ಇಂದಿರಾ ಸಮಾಧಿಗೆ ಪುಷ್ಪನಮನ ಸಲ್ಲಿಸಿದರೆ, ಪ್ರಧಾನಿ ಮೋದಿ ಅವರು ಟ್ವೀಟ್‌ ಮೂಲಕ ಗೌರವ ಸಲ್ಲಿಸಿದರು. ಅನಾರೋಗ್ಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಭಾಗವಹಿಸಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next