ಉಡುಪಿ: ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣಾರ್ಥ ಯಕ್ಷಗಾನ ಕಲಾಸಾಧಕ ಪ್ರಶಸ್ತಿಗೆ ತೆಂಕುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಅಂಬಾಪ್ರಸಾದ ಪಾತಾಳ ಮತ್ತು ಯಕ್ಷಗಾನ ಕಲಾಸೇವಾ ಪುರಸ್ಕಾರ ಪ್ರಶಸ್ತಿಗೆ ಚತುರ ಚಕ್ರತಾಳ ವಾದಕ ಬೆಳ್ತಂಗಡಿ ಕೃಷ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ.
ಅಂಬಾಪ್ರಸಾದ ಅವರು ಅಗ್ರಪಂಕ್ತಿಯ ಸ್ತ್ರೀವೇಷಧಾರಿ ಪಾತಾಳ ವೆಂಕಟರಮಣ ಭಟ್ಟರ ಪುತ್ರ. ಯಕ್ಷಗಾನ ರಂಗದಲ್ಲಿ ನಾಲ್ಕೂವರೆ ದಶಕಗಳಿಂದ ಸಕ್ರಿಯರಾಗಿದ್ದಾರೆ.
ಕನ್ನಡ ಪೌರಾಣಿಕ ಮತ್ತು ತುಳು ಸಾಮಾಜಿಕ ಪ್ರಸಂಗಗಳೆ ರಡರಲ್ಲಿಯೂ ಸ್ತ್ರೀವೇಷದ ಘನತೆ ಯನ್ನು ಮೆರೆಸಿ ಜನಮನ್ನಣೆ ಪಡೆದಿದ್ದಾರೆ.
ಬೆಳ್ತಂಗಡಿಯ ಕೃಷ್ಣ ಶೆಟ್ಟಿ ಅವರು ವೇಷಧಾರಿಯಾಗಿ, ಮದ್ದಳೆ ವಾದಕರಾಗಿ ವೃತ್ತಿಪರ ಮತ್ತು ಹವ್ಯಾಸಿ ರಂಗದಲ್ಲಿ ತೊಡಗಿಸಿಕೊಂಡಿದ್ದು ಮೂರು ದಶಕಗಳಿಂದ ಚಕ್ರತಾಳ ವಾದಕರಾಗಿ ಸಹಕರಿಸುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಸುಮಾರು 65 ವರ್ಷಗಳಿಂದ ಸಕ್ರಿಯರಾಗಿದ್ದಾರೆ.
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ಅ. 7ರಂದು ಜರಗುವ ಸರ್ಪಂಗಳ ಯಕ್ಷೋತ್ಸವ-2023ರಲ್ಲಿ ಪ್ರಶಸ್ತಿ ಪ್ರದಾನ, ಸಂಸ್ಮರಣೆ, ಯಕ್ಷಗಾನ ಪ್ರದರ್ಶನ ಜರಗಲಿವೆ. ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥರು ಸಾನ್ನಿಧ್ಯ ವಹಿಸಲಿದ್ದು, ಕಡಿಯಾಳಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ| ರವಿರಾಜ ಅಚಾರ್ಯ, ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಸಂಯೋಜಕರಾದ ನಳಿನಿ ಸುಬ್ರಹ್ಮಣ್ಯ ಭಟ್, ಡಾ| ಶೈಲಜಾ ಎಸ್., ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.