ಚಿತ್ರ ನೋಡುತ್ತಿದ್ದಂತೆಯೇ ಹೇಳಿದರಂತೆ ಎಸ್.ವಿ. ಬಾಬು. ಈ ಚಿತ್ರಕ್ಕೆ ನೀವೇ ಸಂಗೀತ ನಿರ್ದೇಶಕ ಎಂದು. ಮೂರು ತಿಂಗಳ ನಂತರ ಕೆಲಸ ಶುರು ಮಾಡ್ಕೊಳ್ಳಿ ಎಂದರಂತೆ. ಆಗ ಶುರುವಾದ ಕೆಲಸ ಈಗ ಒಂದು ಹಂತಕ್ಕೆ ಬಂದಿದೆ. ‘ಪಟಾಕಿ’ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಹೌದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ‘ಪಟಾಕಿ’ ಚಿತ್ರದ ಹಾಡುಗಳು ಇದೀಗ ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಅವರ ಹುಟ್ಟುಹಬ್ಬದಂದೇ. ಹಾಗಾಗಿ ಅಂದಿನ ಸಮಾರಂಭಕ್ಕೆ ವಿಶೇಷ ಕಳೆ ಎಂದರೆ ತಪ್ಪಿಲ್ಲ. ಅಂದು ಹಾಡುಗಳು ಬಿಡುಗಡೆ ಮಾಡುವುದಕ್ಕೆ ಐಜಿಪಿ ಸತ್ಯನಾರಾಯಣ ರಾವ್ ಬಂದಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಅಕಾಡೆಮಿ ಅಧ್ಯಕ್ಷ ಸಾ.ರಾ. ಗೋವಿಂದು, ಮಾಜಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್, ಎಸ್.ಎ. ಚಿನ್ನೇಗೌಡ, ನಿರ್ಮಾಪಕ-ವಿತರಕ ಪಾಲ್ ಚಂದಾನಿ, ಝೇಂಕಾರ್ ಆಡಿಯೋದ ಭರತ್ ಜೈನ್, ಗಣೇಶ್, ನಿರ್ದೇಶಕ ಮಂಜು ಸ್ವರಾಜ್ ಮುಂತಾದವರು ವೇದಿಕೆ ಮೇಲಿದ್ದರು. ಆಡಿಯೋ ಬಿಡುಗಡೆ ಮಾಡುವುದಕ್ಕೆ ಬಂದ ಗಣ್ಯರೆಲ್ಲಾ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ತಾವು ನೋಡಿದ ತೆಲುಗು ‘ಪಟಾಸ್’ಗಿಂತ, ‘ಪಟಾಕಿ’ 100 ಪರ್ಸೆಂಟ್ ಇನ್ನೂ ಚೆನ್ನಾಗಿ ಬಂದಿದೆ ಎನ್ನುತ್ತಾರೆ ಅರ್ಜುನ್ ಜನ್ಯ. ‘ರೀರೆಕಾರ್ಡಿಂಗ್ ಮಾಡುವಾಗ ಹಬ್ಬ ಎನ್ನುವಂತಿತ್ತು. ತುಂಬಾ ಎಂಜಾಯ್ ಮಾಡಿಕೊಂಡು ಕೆಲಸ ಮಾಡಿದ್ದೇನೆ. ಗಣೇಶ್ ಅವರಂತೂ ಎಲ್ಲರನ್ನೂ ತಿಂದು ಹಾಕಿದ್ದಾರೆ. ಅವರ ಪಾತ್ರ ಬಹಳ ಪವರ್‌ಫುಲ್ ಆಗಿದೆ’ ಎಂದರು. ಗಣೇಶ್ ತಾವು ಇದುವರೆಗೂ ಮಾಡಿರುವ ಪಾತ್ರಗಳೇ ಬೇರೆ, ಈ ಪಾತ್ರವೇ ಬೇರೆಯಾಗಿತ್ತು ಎನ್ನುತ್ತಾರೆ. ‘ನಿಜಕ್ಕೂ ಸವಾಲಿನ ಪಾತ್ರ. ಬಹಳ ಖುಷಿಯಿಂದ ಈ ಚಿತ್ರದಲ್ಲಿ ನಟಿಸಿದ್ದೀನಿ. ಸಾಯಿಕುಮಾರ್ ಜೊತೆಗೆ ಮೊದಲ ಬಾರಿಗೆ ನಟಿಸಿದ್ದೇನೆ. ಅವರ ಪಾತ್ರ ನೋಡಿ ಥ್ರಿಲ್ ಆದವರು ನಾವು. ಅವರೆದುರು ನಿಂತು ಡೈಲಾಗ್ ಹೊಡೆಯ ಬೇಕಾಗಿತ್ತು. ಈ ಚಿತ್ರ ನಿಜಕ್ಕೂ ಪ್ರೇಕ್ಷಕರ ನಿರೀಕ್ಷೆಗಳನ್ನು ಮುಟ್ಟುತ್ತದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ‘ಜಿಂಗ ಜಿಂಗ …’ ಹಾಡು ಬಹಳ ಚೆನ್ನಾಗಿ ಬಂದಿದೆ.
ತೆಲುಗಿನ ‘ಪಟಾಸ್’ ಚಿತ್ರದಲ್ಲಿ ನಟಿಸುವಾಗಲೇ, ಅವರು ನಿರ್ಮಾಪಕ ಎಸ್.ವಿ. ಬಾಬುಗೆ ಫೋನ್ ಮಾಡಿ, ಈ ಚಿತ್ರವನ್ನು ಕನ್ನಡದಲ್ಲಿ ಮಾಡಿದರೆ ಚೆನ್ನಾಗಿರುತ್ತೆ ಎಂದು ಹೇಳಿದ್ದರಂತೆ. ‘ಈ ಚಿತ್ರವನ್ನು ನನ್ನ ಮಗ ಆದಿ ಜೊತೆಗೆ ಮಾಡಬೇಕು ಅಂತ ಆಸೆ ಇತ್ತು. ಆದರೆ, ಅವನಿಗೆ ಹೆವಿ ಆಗುತ್ತದೆ. ಆ ಪಾತ್ರಕ್ಕೆ ಯಾರು ಸರಿ ಎಂದು ಯೋಜಿಸಿದಾಗ, ಗಣೇಶ್ ಸರಿ ಎನಿಸಿತು. ನಾನು ಅವರ ದೊಡ್ಡ ಅಭಿಮಾನಿ. ಅವರ ಅಭಿನಯ ಬಹಳ ಚೆನ್ನಾಗಿದೆ. ಇನ್ನು ಚಿತ್ರ ಸಹ ಚೆನ್ನಾಗಿ ಬಂದಿದೆ. ಎಲ್ಲರಿಗೂ ಇಷ್ಟವಾಗುವಂತಹ ಒಂದು ಪ್ಯಾಕೇಜ್ ಸಿನಿಮಾ ಇದು’ ಎಂದು ಹೇಳುವುದರ ಜೊತೆಗೆ ಜೈ ಪೊಲೀಸ್, ಜೈ ಕರ್ನಾಟಕ, ಜೈ ಭುವನೇಶ್ವರಿ ಎಂದು ಹೇಳಿ ಮಾತು ಮುಗಿಸಿದರು ಸಾಯಿಕುಮಾರ್.
ಸಾಯಿಕುಮಾರ್ ಇಲ್ಲದಿದ್ದರೆ ಈ ಚಿತ್ರ ಆಗುತ್ತಲೇ ಇರಲಿಲ್ಲ ಎಂದವರು ಎಸ್.ವಿ. ಬಾಬು. ‘ಚಿತ್ರದ ರೈಟ್ ಕೊಡಿಸಿದ್ದೇ ಅವರು. ಹಾಗಾಗಿ ಅವರೇ ಈ ಚಿತ್ರಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಿಲ್ಲ. ಇನ್ನು ಗಣೇಶ್‌ಗೆ ಚಿತ್ರ ತೋರಿಸಿದಾಗ, ಅವರು ಎಮೋಷನಲ್ ಆಗಿ, ತಕ್ಷಣವೇ ಈ ಚಿತ್ರ ಮಾಡೋಣ ಎಂದರು. ಮೂಲ ಚಿತ್ರವನ್ನು ಇಲ್ಲಿನ ನೇಟಿವಿಟಿಗೆ ಹೊಂದಿಸಿ ಚಿತ್ರ ಮಾಡಿದ್ದೇವೆ. ಇದೇ ತಿಂಗಳ 26ಕ್ಕೆ ಚಿತ್ರ ಬಿಡುಗಡೆ’ ಎಂದು ಘೋಷಿಸುವ ಮೂಲಕ ಸಮಾರಂಭಕ್ಕೆ ಅಂತ್ಯ ಹಾಡಿದರು ಬಾಬು.