ಮುಂಬೈ: ಆಸ್ಟ್ರೇಲಿಯ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಗೆ ಭಾರತದ ಕೆಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಭರ್ಜರಿ ಆಮಿಷವೊಡ್ಡಿವೆಯಂತೆ. ಭಾರತದ ಹಲವು ರಾಜ್ಯಗಳಲ್ಲಿ ಐಪಿಎಲ್ ಮಾದರಿಯಲ್ಲಿ ಟಿ20 ಲೀಗ್‌ಗಳು ನಡೆಯುತ್ತವೆ.
ಇಲ್ಲಿ ಬಂದು ಆಡಿದರೆ ನಿಮಗೆ 5.31 ಕೋಟಿ ರೂ. ನೀಡುತ್ತೇವೆಂದು ಆಮಿಷ ವೊಡ್ಡಿವೆಯಂತೆ! ಹೀಗೆಂದು ಆಸ್ಟ್ರೇಲಿಯದ ಫಾಕ್ಸ್ ಸ್ಪೋರ್ಟ್ಸ್ ವರದಿ ಮಾಡಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಬಿಸಿಸಿಐನ ಐಪಿಎಲ್, ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದೊಡ್ಡ ಹೊಡೆತವಾಗಲಿದೆ.
ಈ ಮಧ್ಯೆ ಪ್ಯಾಟ್ ಕಮಿನ್ಸ್ ಈ ಅವಕಾಶವನ್ನು ನಿರಾಕರಿಸಿದ್ದಾರಂತೆ. ದೇಶದ ಪರ ಆಡುವುದೇ ನನ್ನ ಆದ್ಯತೆ, ಹಾಗಾಗಿ ಸಿಕ್ಕಸಿಕ್ಕ ಅವಕಾಶಗಳನ್ನು ಒಪ್ಪಿಕೊಳ್ಳಲು ಹೋಗುವುದಿಲ್ಲ ಎಂದಿದ್ದಾರೆ. ಸದ್ಯಕ್ಕೆ ಈ ವಿಷಯ ಮುಗಿದಿದೆ. ಹಾಗಂತ ಮುಗಿದಿಲ್ಲ! ಕಾರಣ ಪ್ಯಾಟ್ ಒಪ್ಪಿಕೊಳ್ಳದಿದ್ದರೂ, ಇದೇ ಹಾದಿಯನ್ನು ಉಳಿದವರು ಹಿಡಿಯಬೇಕಂತಿಲ್ಲ.
ನಿಧಾನಕ್ಕೆ ರಾಜ್ಯ ಸಂಸ್ಥೆಗಳ ಲೀಗ್‌ಗಳಲ್ಲಿ ವಿದೇಶಿ ಕ್ರಿಕೆಟಿಗರು ಪ್ರವೇಶ ಮಾಡುವ ಸಾಧ್ಯತೆಗಳು ದೂರವಿಲ್ಲ. ಆಗ ದೊಡ್ಡದೊಡ್ಡ ಉದ್ಯಮಿಗಳೂ ರಂಗಪ್ರವೇಶ ಮಾಡಬಹುದು. ಇದೇನಾದರೂ ಮುಂದುವರಿದರೆ ವಿವಿಧ ದೇಶಗಳ ರಾಷ್ಟ್ರೀಯ ಸಂಸ್ಥೆಗಳು ಹಾಗೂ ಐಸಿಸಿಗೆ ನೇರ ಹೊಡೆತವಾಗಲಿದೆ.
ಮುಂದಿನ ದಿನಗಳಲ್ಲಿ ಉದ್ಯಮಿಗಳು ತಮ್ಮದೇ ಆದ ಲೀಗ್ ನಡೆಸಲೂಬಹುದು. ಈಗಾಗಲೇ ದೇಶದ ಪರ ಆಡಲು ನಿರಾಕರಿಸುತ್ತಿರುವ ಕ್ರಿಕೆಟಿಗರು ಇಲ್ಲಿಗೆ ಪ್ರವೇಶ ಮಾಡಬಹುದು. ಹಾಗಾಗಿ ಪರ್ಯಾಯ ವ್ಯವಸ್ಥೆಯೊಂದು ಎದ್ದು ನಿಲ್ಲಬಹುದು. ದೊಡ್ಡದೊಡ್ಡ ಉದ್ಯಮಿಗಳು ಕ್ರಿಕೆಟನ್ನು ಆರ್ಥಿಕ ಮೂಲವಾಗಿ ಪರಿಗಣಿಸಿದರೆ ಹೊಡೆತ ತಪ್ಪಿದ್ದಲ್ಲ! ಇದನ್ನು ತಡೆಯಲು ಈಗಾಗಲೇ ಬಿಸಿಸಿಐ, ಐಸಿಸಿಯೊಳಗೆ ಕಾರ್ಯಯೋಜನೆ ನಡೆಯುತ್ತಿದ್ದಿರಬಹುದು.
ಇದನ್ನೂ ಓದಿ:ವಾಟ್ ಎ ‘ಲವ್ ಲಿ’ ಸಿನ್ಮಾ; ರೊಮ್ಯಾಂಟಿಕ್ ಆಕ್ಷನ್ ಚಿತ್ರದಲ್ಲಿ ವಸಿಷ್ಟ- ಸ್ಟೆಫಿ
ಈಗಾಗಲೇ ಯುಎಇಯಲ್ಲಿ ಐಎಲ್ ಟಿ20, ದ.ಆಫ್ರಿಕಾದಲ್ಲಿ ಎಸ್‌ಎಟಿ20 ಆರಂಭವಾಗಿವೆ. ಇವು ಪಕ್ಕಾ ಖಾಸಗಿ ಕೂಟಗಳು. ಈ ಎರಡರಲ್ಲೂ ಬಹುತೇಕ ತಂಡಗಳ ಮಾಲಿಕತ್ವ ಐಪಿಎಲ್ ಫ್ರಾಂಚೈಸಿಗಳದ್ದು! ಈ ಬೆಳವಣಿಗೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸುವುದು ಖಚಿತ. ಹಿಂದೆ ಬಿಸಿಸಿಐಗೆ ಸೆಡ್ಡು ಹೊಡೆದು ಜೀ ಸಂಸ್ಥೆ ಐಸಿಎಲ್ ನಡೆಸಿತ್ತು. ಅನಂತರವೇ ಐಪಿಎಲ್ ಶುರುವಾಗಿದ್ದು ಎನ್ನುವುದನ್ನು ನಾವಿಲ್ಲಿ ನೆನಪಿಟ್ಟುಕೊಳ್ಳಬೇಕು.