Advertisement

ಲಾಲು, ನಿತೀಶ್‌ ವಿದ್ಯಾರ್ಥಿಗಳಾಗಿರುವಾಗ ಪಾಸ್ವಾನ್‌ ವಿಧಾನಸಭಾ ಸದಸ್ಯ!

03:29 PM Oct 09, 2020 | Karthik A |

ಮಣಿಪಾಲ: ಭಾರತದ ರಾಜಕೀಯದಲ್ಲಿ ‘ಹವಾಮಾನಶಾಸ್ತ್ರಜ್ಞ’ ಅಥವ Meteorologist ಎಂದು ಕರೆಯಲ್ಪಡುವ ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ಪ್ರಯಾಣವು ಸುಮಾರು ಐದು ದಶಕಗಳಿಗಿಂತಲೂ ಹಳೆಯದು.

Advertisement

ಕಳೆದ ಎರಡು ದಶಕಗಳಲ್ಲಿ ಅವರು ಪ್ರತಿ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದವರು. ರಾಮ್ ವಿಲಾಸ್ ಪಾಸ್ವಾನ್ ಐದು ದಶಕಗಳಲ್ಲಿ 8 ಬಾರಿ ಲೋಕಸಭೆಯ ಸದಸ್ಯರಾಗಿದ್ದಾರೆ. ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ತಮ್ಮ ವಿದ್ಯಾರ್ಥಿ ಜೀವನದಲ್ಲಿದ್ದಾಗ ಪಾಸ್ವಾನ್ ಬಿಹಾರ ವಿಧಾನಸಭೆಯಲ್ಲಿ ಸದಸ್ಯರಾಗಿದ್ದರು ಎಂಬುದು ಉಲ್ಲೇಖನೀಯ.

ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಡುವುದರಿಂದ ಹಿಡಿದು ಮುಂದಿನ ಐದು ದಶಕಗಳವರೆಗೆ ಪಾಸ್ವಾನ್ ಕಾಂಗ್ರೆಸ್ ವಿರುದ್ಧ ಹೋರಾಡುತ್ತಲೇ ಇದ್ದರು. ಈ ಅವಧಿಯಲ್ಲಿ ಅವರು ಹಲವು ಸೋಲು-ಗೆಲುವುಗಳನ್ನು ಕಂಡಿದ್ದಾರೆ. 1977 ರ ಲೋಕಸಭಾ ಚುನಾವಣೆಯಲ್ಲಿ ಹಾಜಿಪುರ ಸ್ಥಾನದಿಂದ ಜನತಾದಳ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಪಾಸ್ವಾನ್, ಸುಮಾರು 4 ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಿ ದಾಖಲೆಯ ಗೆಲುವನ್ನು ಕಂಡಿದ್ದರು. ಅನಂತರ ಅವರು 2014ರ ವರೆಗೆ ಎಂಟು ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವು ಕಂಡಿದ್ದಾರೆ. ಪ್ರಸ್ತುತ ಅವರು ರಾಜ್ಯಸಭೆಯ ಸದಸ್ಯರಾಗಿ ಕೇಂದ್ರ ಸಚಿವರಾಗಿದ್ದಾರೆ.

1969ರಲ್ಲಿ ಪ್ರಾರಂಭವಾದ ರಾಜಕೀಯ ಪ್ರಯಾಣ
5 ಜುಲೈ 1946ರಂದು ಖಾಗೇರಿಯಾದ ದಲಿತ ಕುಟುಂಬದಲ್ಲಿ ಜನಿಸಿದ ರಾಮ್ ವಿಲಾಸ್ ಪಾಸ್ವಾನ್ ರಾಜಕೀಯಕ್ಕೆ ಸೇರುವ ಮೊದಲು ಬಿಹಾರ ಆಡಳಿತ ಸೇವೆಯಲ್ಲಿ ಅಧಿಕಾರಿಯಾಗಿದ್ದರು. ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ಪ್ರಯಾಣವು 1969ರಲ್ಲಿ ಪ್ರಾರಂಭವಾಯಿತು. ಅವರು ಸಂಯುಕ್ತ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಹಾರ ವಿಧಾನಸಭೆಯನ್ನು ಮೊದಲ ಬಾರಿ ಪ್ರವೇಶಿಸಿದ್ದರು. ಪಾಸ್ವಾನ್ ತುರ್ತುಪರಿಸ್ಥಿತಿಯ ಸಂಪೂರ್ಣ ಅವಧಿಯನ್ನು ಜೈಲಿನಲ್ಲಿ ಕಳೆದಿದ್ದರು. ತುರ್ತು ಪರಿಸ್ಥಿತಿ ಮುಗಿದ ಬಳಿಕ ಪಾಸ್ವಾನ್ ಜನತಾದಳ ಸೇರಿದರು. ಜನತಾದಳ ಟಿಕೆಟ್‌ನಲ್ಲಿ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಹಾಜಿಪುರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.

ವಿ.ಪಿ.ಸಿಂಗ್‌ ಸರಕಾರದಲ್ಲಿ ಮೊದಲ ಬಾರಿ ಸಚಿವ
1977ರ ದಾಖಲೆಯ ವಿಜಯದ ನಂತರ ರಾಮ್ ವಿಲಾಸ್ ಪಾಸ್ವಾನ್ 1980 ಮತ್ತು 1989 ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಜಯಗಳಿಸಿದರು. ವಿ.ಪಿ.ಸಿಂಗ್ ಅವರ ಸರಕಾರದಲ್ಲಿ ಮೊದಲ ಬಾರಿಗೆ ಸಂಪುಟ ಸೇರಿದ ಅವರು ಯಶಸ್ವಿಯಾಗಿ ಖಾತೆಯನ್ನು ನಿಭಾಯಿಸಿದ್ದರು. ವಿಶ್ವನಾಥ್ ಪ್ರತಾಪ್ ಸಿಂಗ್ ಅವರ ಸರಕಾದಲ್ಲಿ ಅವರನ್ನು ಮೊದಲ ಬಾರಿಗೆ ಕ್ಯಾಬಿನೆಟ್ ಮಂತ್ರಿಯನ್ನಾಗಿ ಮಾಡಲಾಯಿತು. ಮುಂದಿನ ಹಲವು ವರ್ಷಗಳವರೆಗೆ ಪಾಸ್ವಾನ್‌ ರೈಲ್ವೇ ಇಲಾಖೆಯಿಂದ ಟೆಲಿಕಾಂ ಮತ್ತು ಕಲ್ಲಿದ್ದಲು ಇಲಾಖೆಯ ವರೆಗಿನ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು.

Advertisement

ತಮ್ಮ ರಾಜಕೀಯ ಪ್ರಯಾಣದಲ್ಲಿ ಅವರು ಬಿಜೆಪಿ, ಕಾಂಗ್ರೆಸ್, ಆ‌ರ್‌ ಜೆಡಿ ಮತ್ತು ಜೆಡಿಯು ಜತೆ ಹಲವು ಸಂದರ್ಭದಲ್ಲಿ ಮೈತ್ರಿ ಮಾಡಿಕೊಂಡು ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದರು. ನರೇಂದ್ರ ಮೋದಿ ನೇತೃತ್ವದ ಎರಡೂ ಕೇಂದ್ರ ಸರಕಾರಗಳಲ್ಲಿ ಪಾಸ್ವಾನ್ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿದ್ದಾರೆ.

ಡಾ. ಮನಮೋಹನ್‌ ಸಿಂಗ್‌ ಸಂಪುಟದಲ್ಲಿ ಸಚಿವ
2002ರ ಗೋಧ್ರಾ ಗಲಭೆಯ ಬಳಿಕ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‌ಡಿಎ ತೊರೆದಿದ್ದರು. ಬದಲಾದ ರಾಜಕೀಯದ ಹಿನ್ನೆಲೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಎನ್‌ಡಿಎ ಒಕ್ಕೂಟದೊಂದಿಗಿನ ಸಂಬಂಧವನ್ನು ಮುರಿದುಕೊಂಡರು. ಅನಂತರ ಪಾಸ್ವಾನ್ ಅವರು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಗೆ ಸೇರಿದರು. ಡಾ. ಮನಮೋಹನ್ ಸಿಂಗ್ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿದ್ದರು. ಆದರೆ 2014 ರ ಚುನಾವಣೆಯಲ್ಲಿ ಪಾಸ್ವಾನ್ ಮತ್ತೊಮ್ಮೆ ಯುಪಿಎ ತೊರೆದು ಎನ್‌ಡಿಎಗೆ ಸೇರ್ಪಡೆಯಾದರು. 2014 ಮತ್ತು 2019ರಲ್ಲಿ ರಚನೆಗೊಂಡ ನರೇಂದ್ರ ಮೋದಿ ನೇತೃತ್ವದ ಸರಕಾರಗಳಲ್ಲಿ ಅವರಿಗೆ ಪ್ರಮುಖ ಖಾತೆಗಳನ್ನು ನೀಡಲಾಯಿತು.

ಎರಡು ಮದುವೆಯಾಗಿದ್ದರು
ಪಾಸ್ವಾನ್ ಅವರ ವೈಯಕ್ತಿಕ ಜೀವನ ತಮ್ಮ ರಾಜಕೀಯ ಜೀವನದಲ್ಲಿ ಎಲ್ಲೂ ಸದ್ದು ಮಾಡೇ ಇಲ್ಲ. ಪಾಸ್ವಾನ್ ಎರಡು ಮದುವೆಗಳನ್ನು ಮಾಡಿಕೊಂಡಿದ್ದಾರೆ. ಮೊದಲ ಹೆಂಡತಿಯಿಂದ ಇಬ್ಬರು ಹೆಣ್ಣು ಮಕ್ಕಳಿದ್ದರೆ, ಎರಡನೇ ಹೆಂಡತಿಗೆ ಚಿರಾಗ್ ಪಾಸ್ವಾನ್ ಮತ್ತು ಓರ್ವ ಪುತ್ರಿ ಇದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅವರ ಮೊದಲ ಪತ್ನಿ ಈಗಲೂ ತಮ್ಮ ಹಳ್ಳಿಯಾದ ಶಹರ್ಬನ್ನಿಯಲ್ಲಿ ವಾಸಿಸುತ್ತಿದ್ದಾರೆ ಎಂದು ದೈನಿಕ್‌ ಭಾಸ್ಕರ್‌ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next