Advertisement
ಭೋಜನಾನಂತರ ಕಲಾಪ ಆರಂಭವಾಗುತ್ತಿದ್ದಂತೆ ಶಾಸಕರ ಅಧ್ಯಕ್ಷತೆಯಲ್ಲಿರುವ ಪಶು ಭಾಗ್ಯ ಯೋಜನೆಯ ಫಲಾನುಭವಿಗಳ ಆಯ್ಕೆ ಸಮಿತಿಗೆ ಸರ್ಕಾರ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ, ಸಿ.ಎನ್.ಬಾಲಕೃಷ್ಣ, ಸಾ.ರಾ.ಮಹೇಶ್, ನಾಮಕರಣ ಸದಸ್ಯರಿಂದಾಗಿ ಶಾಸಕರ ಶಿಫಾರಸಿಗೆ ಗೌರವ ಇಲ್ಲದಂತಾಗಿದೆ ಎಂದು ಆರೋಪಿಸಿದರು.
Related Articles
Advertisement
ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಜಗದೀಶ್ ಶೆಟ್ಟರ್, ನಾಮನಿರ್ದೇಶನಗೊಂಡ ಸದಸ್ಯರು ಆಡಳಿತ ಪಕ್ಷದವರಾಗಿರುವುದರಿಂದ ಪ್ರತಿಪಕ್ಷದ ಶಾಸಕರು ಇರುವ ಕಡೆ ಮಾತ್ರ ಈ ಸಮಸ್ಯೆ ಇದೆ. ನಮ್ಮ ಶಾಸಕ ಯು.ಬಿ.ಬಣಕಾರ್ ಅವರ ಕ್ಷೇತ್ರದಲ್ಲಿ ನಾಮ ನಿರ್ದೇಶನಗೊಂಡ ಸದಸ್ಯರು, ನಾವು ನಾಲ್ವರಿದ್ದೇವೆ. ನೀವು ಒಬ್ಬರೇ ಇದ್ದೀರಿ. ಹೀಗಾಗಿ ಶೇ. 80ರಷ್ಟು ಫಲಾನುಭವಿಗಳ ಆಯ್ಕೆ ನಮಗೆ ಬಿಟ್ಟುಕೊಡಿ. ಶೇ. 20ನ್ನು ಮಾತ್ರ ನೀವು ಇಟ್ಟುಕೊಳ್ಳಿ ಎಂದು ಹೇಳುತ್ತಿದ್ದಾರಂತೆ. ಹೀಗಿರುವಾಗ ಶಾಸಕರಿಗೆ ಗೌರವ ಬರುವುದು ಹೇಗೆ ಎಂದು ಪ್ರಶ್ನಿಸಿದರು.
ವಿವಾದಕ್ಕೆ ಕಾರಣವಾದ ಹೇಳಿಕೆ: ಈ ಮಧ್ಯೆ ನಾಮನಿರ್ದೇಶಿತ ಸದಸ್ಯರ ಕುರಿತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ನಾಮನಿರ್ದೇಶಿತ ಸದಸ್ಯರು ಫಲಾನುಭವಿಗಳ ಪಟ್ಟಿಗೆ ಸಹಿ ಮಾಡಿದರೂ ನಂತರ ಉಪನಿರ್ದೇಶಕರ ಬಳಿ ಅದನ್ನು ತಡೆಹಿಡಿದು ವ್ಯಾಪಾರ ಮಾಡುತ್ತಿದ್ದಾರೆ ಎಂದಾಗ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಕೆ.ಎನ್.ರಾಜಣ್ಣ, ಸದಸ್ಯರ ಬಗ್ಗೆ ಆ ರೀತಿ ಮಾತನಾಡುವುದು ಸರಿಯಲ್ಲ. ಶಾಸಕರು ವ್ಯಾಪಾರ ಮಾಡುತ್ತಿದ್ದಾರೆ ಎಂದರೆ ಆಗ ನಮ್ಮ ಗೌರವ ಏನಾಗಬೇಕು? ಆದ್ದರಿಂದ ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪೀಕರ್ ಕೆ.ಬಿ.ಕೋಳಿವಾಡ ಮತ್ತು ಸಚಿವ ಎಚ್.ಕೆ.ಪಾಟೀಲ್ ಕೂಡ ದನಿಗೂಡಿಸಿದರು.ಆದರೂ ಪ್ರತಿಪಕ್ಷ ಸದಸ್ಯರು ಧರಣಿ ಮುಂದುವರಿಸುತ್ತಿದ್ದುದನ್ನು ಗಮನಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ, ಸಂಬಂಧಿಸಿದ ಸಚಿವರು ಬಂದ ನಂತರ ಅವರಿಂದ ಉತ್ತರ ಕೊಡಿಸುತ್ತೇನೆ. ಎಲ್ಲಾ ಸದಸ್ಯರು ತಮ್ಮ ಸ್ಥಾನಗಳಿಗೆ ಹಿಂತಿರುಗಿ ಎಂದು ಮನವಿ ಮಾಡಿದರು. ನಂತರ ಧರಣಿ ವಾಪಸ್ ಪಡೆಯಲಾಯಿತು.