Advertisement

ಕಳೆದು ಹೋದ ಸಮಯ ಮತ್ತೆ ಬಾರದು

10:38 PM Oct 11, 2020 | Karthik A |

ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೇ ಆದಂತಹ ಪ್ರಾಮುಖ್ಯತೆ ಇದೆ.

Advertisement

ಶಿಸ್ತು ಮತ್ತು ಸಮಯದ ಮಹತ್ವವನ್ನು ಯಾರು ಸರಿಯಾಗಿ ತಿಳಿದಿರುತ್ತಾರೆಯೋ ಅವರು ಜೀವನದಲ್ಲಿ ಸಾಧನೆ ಮಾಡಿ ಶ್ರೇಷ್ಠ ವ್ಯಕ್ತಿಯಾಗುತ್ತಾರೆ.

ಕೇವಲ ಸಮಯವನ್ನು ಯಾರು ಬೇಜವಬ್ದಾರಿಯಿಂದ ಕಾಲ ಹರಣ ಮಾಡಿ ಅಶಿಸ್ತಿನಿಂದ ಇರುತ್ತಾರೋ ಅವರು ಜೀವದುದ್ದಕ್ಕೂ ಗೋಗೆರೆಯುತ್ತಾ ಇರುತ್ತಾರೆ.

ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಂಡುಕೊಂಡಿದ್ದಾನೆ ಎಂದರೆ ಅದರ ಅರ್ಥ ಆ ವ್ಯಕ್ತಿ ಶಿಸ್ತುಬದ್ದ ಜೀವನದ ಜತೆಯಲ್ಲಿ ಸಮಯದ ಮಹತ್ವ, ಸಮಯದ ಸದ್ಭಳಕೆ ಹಾಗೂ ಸಮಯ ಉಪಯೋಗಿಸಿಕೊಳ್ಳುವ ಚಾಣಾಕ್ಷತೆ ಹೊಂದಿರುತ್ತಾನೆ. ಎಲ್ಲರಿಗೂ ಸಮಯ ಒಂದೆ ರೀತಿಯದ್ದಾಗಿರುತ್ತದೆ. ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಚಿಂತಕನಿಗೂ ಸಿಗುವಂತಹ ಸಮಯ 24 ಘಂಟೆಗಳು ಹಾಗೂ ಅತ್ಯಂತ ಕಟ್ಟ ಕಡೆಯ ಪ್ರಜೆಗೂ ಸಿಗುವಂತಹ ಸಮಯ 24 ಘಂಟೆಗಳು, ಆದಾಗ್ಯೂ, ಯಾವ್ಯಾವ ವ್ಯಕ್ತಿ ಹೇಗೆಲ್ಲ ಸಮಯ ಬಳಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವನ ಯಶಸ್ಸು, ಸಾಧನೆ, ಗುರಿ ನಿರ್ಧಾರವಾಗುತ್ತದೆ.

ಸಮಯದ ಬಗ್ಗೆ ನಮಗೆ ಎಲ್ಲವೂ ಗೊತ್ತು. ಆದರೆ, ಬಳಸಿಕೊಳ್ಳುವ ವಿಧಾನ ಮಾತ್ರ ಬದಲಾಗಬೇಕಿದೆ. ಸಮಯದ ಮಹತ್ವ ತಿಳಿ ಸುವ ಒಂದು ಕಥೆ ಹೀಗಿದೆ. ಅದೊಂದು ದೊಡ್ಡ ಬುಡಕಟ್ಟು ಜನಾಂಗದ ಪ್ರದೇಶ. ಆ ಪ್ರದೇಶದಲ್ಲಿ ಎಲ್ಲವೂ ಇದೆ. ಎಲ್ಲರೂ ಸುಃಖದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ, ಆ ಪ್ರದೇಶದಲ್ಲಿ ವಿಶಿಷ್ಟವಾದ ಮತ್ತು ಅಷ್ಟೇ ವಿಚಿತ್ರವಾದ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದರು.

Advertisement

ಯಾರು ಆ ಪ್ರದೇಶದ ರಾಜನಾಗಲೂ ಬಯಸುತ್ತಾರೆಯೋ ಅವರು ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಾಗಿತ್ತು. ಆ ನಿಯಮವೆನೆಂದರೆ ಯಾರು ರಾಜನಾಗುತ್ತಾನೋ ಅವನು ಎರಡು ವರ್ಷಗಳ ಕಾಲ ಆ ಪ್ರದೇಶದ ರಾಜನಾಗಿ ಎಲ್ಲ ವೈಭೋಗಗಳನ್ನು ಅನುಭವಿಸಬಹುದು. ಯಾವು ದೇ ಆಜ್ಞೆಗಳನ್ನು ಮಾಡಬಹುದು. ಆದರೆ, ಆ ಎರಡು ವರ್ಷದ ಅವಧಿ ಮುಗಿದ ಅನಂತರ ಆ ರಾಜನನ್ನು ಎಲ್ಲ ಬುಡಕಟ್ಟು ಜನಾಂಗದವರು ಕೂಡಿ ಹಡಗಿನಲ್ಲಿ ಕೂಡಿಸಿಕೊಂಡು ಹೋಗಿ ಅಲ್ಲಿಯ ಒಂದು ಭಯಾನಕ ಅರಣ್ಯದಲ್ಲಿ ತಿನ್ನಲು ಆಹಾರವಿಲ್ಲ ಹಣ್ಣುಗಳಿಲ್ಲ ಮನುಷ್ಯರಿರಲು ಅತ್ಯಂತ ಯೋಗ್ಯವಲ್ಲದ ಪ್ರದೇಶದಲ್ಲಿ ಬಿಟ್ಟು ಬಂದರೆ ಒಂದೆರಡು ದಿನಗಳಲ್ಲಿ ಆ ವ್ಯಕ್ತಿ ಸತ್ತೇ ಹೋಗುತ್ತಿದ್ದ. ಈ ನಿಯಮ ರಾಜನಾಗಿ ಅಧಿಕಾರದಿಂದ ಇಳಿದ ತಕ್ಷಣ ಪಾಲಿಸಬೇಕಾದ ಕಟ್ಟುನಿಟ್ಟಿನ ನಿಯಮವಾಗಿತ್ತು. ಹೀಗಾಗಿ, ಅಲ್ಲಿನ ರಾಜರಾದವರಿಗೆ ದೊಡ್ಡ ತಲೆನೋವಿನ ಜತೆಯಲ್ಲಿ ಪ್ರಾಣಭಯವೇ ಕಾಡುತ್ತಿತ್ತು.

ಕೆಲವು ವರ್ಷಗಳ ಅನಂತರ ಆ ಪ್ರದೇಶದಲ್ಲಿ ಶಿಸ್ತು ಬದ್ದ ಜೀವನ ನಡೆಸುತ್ತಿದ್ದ ಅತಿ ಸರಳ ಬಡ ವ್ಯಕ್ತಿ ರಾಜನಾಗಲು ಸಿದ್ಧ ಎಂದು ಮುಂದೆ ಬಂದ. ಆಗ ಎಲ್ಲರಲ್ಲೂ ಆಶ್ಚರ್ಯ. ಅದೇನೆ ಇದ್ದರೂ ಅವರ ನಿಯಮದಂತೆ ಆ ವ್ಯಕ್ತಿಯನ್ನು ಆ ಪ್ರದೇಶದ ರಾಜನನ್ನಾಗಿ ಮಾಡಿದರು. ಅವನು ಸಹ ಅಷ್ಟೇ ಹುಮ್ಮಸ್ಸಿನಿಂದ ಆ ಪ್ರದೇಶದ ರಾಜನಾದ. ಎಲ್ಲರ ಜತೆಯಲ್ಲೂ ಉತ್ತಮ ಒಡನಾಟ ಇಟ್ಟುಕೊಂಡಿದ್ದ. ಸುಸಂಸ್ಕೃತದಿಂದ ಎಲ್ಲರ ಜತೆಯಲ್ಲೂ ನಗುನಗುತ್ತಾ ಮಾತನಾಡುತ್ತಿದ್ದ. ಜನರು ಯಾವುದೇ ಕಷ್ಟ ಎಂದು ಬಂದರೂ ಅದನ್ನು ಕ್ಷಣಮಾತ್ರದಲ್ಲಿ ಬಗೆಹರಿಸುವ ಚಾಣಾಕ್ಷತೆ ಹೊಂದಿದ್ದ. ರಾಜನ ಆಸ್ಥಾನದಲ್ಲಿದ್ದ ಎಲ್ಲ ಧವಸ ಧಾನ್ಯಗಳನ್ನು ಬಡವರಿಗೆ ಹಂಚಿ ಬಿಡುತ್ತಿದ್ದ. ಎಲ್ಲ ಕಷ್ಟದ ಪರಿಸ್ಥಿತಿಯನ್ನೂ ನಿಭಾಯಿಸುತ್ತಿದ್ದ.

ಹೀಗಾಗಿ ಅವನು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಮುಂದೆ ಒಂದು ವರ್ಷದ ಅನಂತರ ಸೇನಾಧಿಕಾರಿ ಬಂದು ರಾಜರೇ ನಿಮ್ಮ ಅವಧಿ ಈಗಾಗಲೇ ಮುಗಿಯುತ್ತಾ ಬರುತ್ತಿದೆ. ಇನ್ನು ಒಂದೇ ವರ್ಷ ಬಾಕಿ ಇದೆ ಎಂದು ಹೇಳಿದಾಗಲೂ ನಗುತ್ತಲೇ ತನ್ನ ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದ. ಮುಂದೆ ಎರಡು ವರ್ಷವಾಯಿತು. ಹಾಗಾಗಿ, ಎಲ್ಲರಲ್ಲೂ ಇವರನ್ನು ಕಳೆದು ಕೊಳ್ಳಬಾರದೆಂಬ ಆಸೆ, ಅಯ್ಯೋ ಇಂತಹ ಪ್ರೀತಿಯ ರಾಜ ಹೋಗಿಬಿಡುತ್ತಾನಲ್ಲ ಎಂಬ ಭಯ ಬೇರೆ. ಆದರೆ, ಏನನ್ನೂ ಮಾಡಲೂ ಸಾಧ್ಯವಿಲ್ಲ. ಎಲ್ಲರು ಚಿಂತಾಕ್ರಾಂತರಾಗಿ ಆ ವ್ಯಕ್ತಿಯನ್ನು ಹಡಗಿನಲ್ಲಿ ಕರೆದುಕೊಂಡು ಹೋಗಿ ದಡ ತಲುಪಿಸಿದಾಗ ಅಲ್ಲೊೂಬ್ಬ ದುಃಖಭರಿತ ಕೂತೂಹಲದಿಂದ ಆ ವ್ಯಕ್ತಿಯನ್ನ ಪ್ರಶ್ನಿಸುತ್ತಾ ಹೇಳುತ್ತಾನೆ “ಅಲ್ಲ ನೀವು ಆಡಳಿತ ಮಾಡುವಾಗಲೂ ನಗುನಗುತ್ತಾ ಇದ್ದಿರಿ. ಈಗ ಅಧಿಕಾರ ಮುಗಿದ ತಕ್ಷಣವೂ ನಗುತ್ತಲೇ ಇದ್ದೀರಿ. ಏನು ಇದರ ಅರ್ಥ ಅಂತ ಕೇಳಿದಾಗ ಆ ವ್ಯಕ್ತಿ ಮತ್ತು ನಗುತ್ತಲೇ ಆ ಅರಣ್ಯ ಪ್ರದೇಶದ ಒಳಗಡೆ ಕರೆದುಕೊಂಡು ಹೋಗುತ್ತಾನೆ.

ಆವಾಗ ಎಲ್ಲರಿಗೂ ಆಶ್ಚರ್ಯ ಅಲ್ಲಿ ಭವ್ಯವಾದ ಅರಮನೆ ನಿರ್ಮಾಣವಾಗಿದೆ. ಅರಮನೆಯ ಸುತ್ತಲೂ ಕ್ರೂರ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ದೊಡ್ಡದಾದ ಕೋಟೆ ನಿರ್ಮಾಣವಾಗಿದೆ. ಒಳಗಡೆ ಹೋಗಿ ನೋಡಿದರೆ ರಾಜಮನೆತನದ ಭೋಗ ಜೀವನಕ್ಕೆ ಬೇಕಾದ ಎಲ್ಲ ಸಾಮಗ್ರಿಗಳು ಅಲ್ಲಿ ಇವೆ. ಧವಸ ಧಾನ್ಯದ ರಾಶಿ ರಾಶಿಯೇ ಇದೆ. ಅವನ ಜೀವನದುದ್ದಕ್ಕೂ ಏನೇನು ಬೇಕೋ ಅದೆಲ್ಲವೂ ಅಲ್ಲಿ ಇವೆ. ಎಲ್ಲರಿಗೂ ಆಶ್ಚರ್ಯ.

ಇದೆಲ್ಲ ಇಲ್ಲಿ ಹೇಗೆ ಸಾಧ್ಯ ಎಂದು ಕೇಳಿದಾಗ ಆ ವ್ಯಕ್ತಿ ಉತ್ತರಿಸುತ್ತಾನೆ. ಈ ಪ್ರದೇಶದಲ್ಲಿ ಆಗಿ ಹೋದ ಎಲ್ಲ ರಾಜರು ತಮ್ಮ ಎರಡು ವರ್ಷದ ಅವಧಿಯನ್ನು ವೈಭೋಗದಿಂದ ಅನುಭವಿಸಿ ಈ ಕಾಡಿಗೆ ಬಂದು ಸತ್ತು ಹೋಗುತ್ತಿದ್ದರು. ಆದರೆ, ನಾನು ನನ್ನ ಅಧಿಕಾರದ ಅವಧಿಯಲ್ಲಿ ನನಗೆ ಸಿಕ್ಕಂತಹ ಸಮಯ ಮತ್ತು ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಇಲ್ಲಿ ಎಲ್ಲ ಆಳುಗಳನ್ನು ತಂದು ಸುಂದರವಾದ ಅರಮನೆ ನಿರ್ಮಾಣ ಮಾಡಿ ಸುತ್ತಲೂ ಕೋಟೆ ಕಟ್ಟಿಸಿ ಎಲ್ಲ ಧವಸ ಧಾನ್ಯಗಳನ್ನು ತಂದು ಇಟ್ಟುಕೊಂಡಿದ್ದೇನೆ.

ಹೀಗಾಗಿ, ನನ್ನ ಎರಡು ವರ್ಷದ ಅವಧಿಯನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡಿದ್ದೇನೆ. ಆಗ ಎಲ್ಲರೂ ಅವನ ಸಮಯ ಪ್ರಜ್ಞೆ, ಸಮಯದ ಸದ್ಭಳಕೆಯ ಬಗ್ಗೆ ಕೊಂಡಾಡುತ್ತಾರೆ. ಮುಂದೆ ಅದೇ ಕಾಡಿನ ಪ್ರದೇಶವನ್ನು ಇವರ ರಾಜಧಾನಿಯನ್ನಾಗಿ ಮಾಡಿಬಿಡುತ್ತಾರೆ. ಇದರ ಅರ್ಥ ಇಷ್ಟೇ ಸಮಯದ ಮಹತ್ವ ಅರಿತು ಶಿಸ್ತಿನಿಂದ ಕೆಲಸ ಮಾಡಿದರೆ ಜೀವನದಲ್ಲಿ ಯಾವುದೇ ಸಾಧನೆಯನ್ನೂ ಮಾಡಬಹುದು.

 ವಿದ್ಯಾ ಶ್ರೀ ಬಿ., ಬಳ್ಳಾರಿ 

Advertisement

Udayavani is now on Telegram. Click here to join our channel and stay updated with the latest news.

Next