ಬೆಂಗಳೂರು: ವಿದೇಶಿ ಪೌರತ್ವಹೊಂದಿರುವವರ ಪಾಸ್‌ಪೋರ್ಟ್ ಮತ್ತು ಭಾರತೀಯ ಸಾಗರೋತ್ತರ ನಾಗರಿಕ(ಒಸಿಐ) ಕಾರ್ಡ್ ವಶಕ್ಕೆ ಪಡೆಯಲು ಬ್ಯಾಂಕ್‌ಗಳಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಯುನೈಟೆಡ್ ಕಿಂಗ್‌ಡಂನ ಪೌರತ್ವ ಹೊಂದಿರುವ ಕೋಶಿ ವರ್ಗೀಸ್ ಎಂಬವರು ತಮ್ಮ ಪಾಸ್‌ಪೋರ್ಟ್ ಮತ್ತು ಐಸಿಒ ಕಾರ್ಡ್ ಅನ್ನು ಅಂದಿನ ವಿಜಯ ಬ್ಯಾಂಕ್ ಪ್ರಸ್ತುತ ಬ್ಯಾಂಕ್ ಅಫ್ ಬರೋಡಾ ವಶಕ್ಕೆ ಪಡೆದಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರಿದ್ದು ಏಕಸದಸ್ಯ ನ್ಯಾಯಪೀಠ, ಬ್ರಿಟಿಷ್ ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ ಅನ್ನು ತಮ್ಮ ವಶದಲ್ಲಿ ಇಟ್ಟುಕೊಂಡ ಬ್ಯಾಂಕ್‌ನ ಕ್ರಮ ಕಾನೂನು ಬಾಹಿರ ಎಂದು ಹೇಳಿದೆ. ಅಲ್ಲದೆ 2022ರ ಅ. 17ರಿಂದ ತನ್ನ ವಶದಲ್ಲಿದ್ದ ಬ್ರಿಟಿಷ್ ಪಾಸ್ ಪೋರ್ಟ್ ಮತ್ತು ಒಸಿಐ ಅನ್ನು ದಾಖಲೆಗಳ ಪರಿಶೀಲನೆ ನಡೆಸಿ ದೂರುದಾರರಿಗೆ ಹಸ್ತಾಂತರಿಸುವಂತೆ ರಿಜಿಸ್ಟ್ರಿಗೆ ಸೂಚನೆ ನೀಡಿದೆ.
ಅರ್ಜಿದಾರರು ಗ್ರೇಟ್ ಬ್ರಿಟನ್‌ನ ನಾಗರಿಕರಾಗಿದ್ದು, 2017ರಿಂದ ಭಾರತದಲ್ಲಿ ನೆಲೆಸಲು ಒಸಿಐ ಪಡೆದಿದ್ದಾರೆ. ಈ ಒಸಿಐ ಕಾರ್ಡ್ ಅನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್‌ಆರ್‌ಒ) ಮೂಲಕ 1955ರ ನಾಗರಿಕ ಕಾಯ್ದೆಯಡಿ ವಿದೇಶಾಂಗ ವ್ಯವಹಾರ ಸಚಿವಾಲಯ ನೀಡಿದೆ. ಈ ಕಾರ್ಡ್ ಅನ್ನು ವಶಕ್ಕೆ ಪಡೆದುಕೊಳ್ಳುವ ಯಾವುದೇ ಅಧಿಕಾರ ಬ್ಯಾಂಕ್‌ಗೆ ಇಲ್ಲ. ಒಂದು ವೇಳೆ ಸ್ವಯಂಪ್ರೇರಿತವಾಗಿ ಬ್ಯಾಂಕ್‌ಗೆ ಹಸ್ತಾಂತರ ಮಾಡಿದರೂ ಬ್ಯಾಂಕ್ ಕಾರ್ಡ್‌ನ್ನು ಎಫ್ಆರ್ ಆರ್‌ಒಗೆ ಸಲ್ಲಿಸಬೇಕಿತ್ತು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ದೂರುದಾರರು ತಮ್ಮ ಪಾಸ್‌ಪೋರ್ಟ್ ಅನ್ನು ಯುಕೆಯಿಂದ ಪಡೆದಿದ್ದರೆ. ಈ ಪಾಸ್ ಪೋರ್ಟ್ ಅನ್ನು ವಶಕ್ಕೆ ಪಡೆದುಕೊಳ್ಳುವ ಅಧಿಕಾರ ಭಾರತದಲ್ಲಿ ಯಾರಿಗೂ ಇಲ್ಲ. ಆದರೆ ಬ್ಯಾಂಕ್ ನಾಲ್ಕು ವರ್ಷಗಳ ಕಾಲ ಒಸಿಐ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅನ್ನು ತನ್ನ ವಶದಲ್ಲಿ ಇಟ್ಟುಕೊಂಡಿರುವುದು ಕಾನೂನು ಬಾಹಿರ ಎಂದು ಕೋರ್ಟ್ ಹೇಳಿದೆ.
ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಲ್ಲಿ ವಶ 2019ರಲ್ಲಿ ಅಂದಿನ ವಿಜಯಾ ಬ್ಯಾಂಕ್ (ಪ್ರಸ್ತುತ ಬ್ಯಾಂಕ್ ಆಫ್ ಬರೋಡಾ)ಅರ್ಜಿದಾರರು ಸೇರಿದಂತೆ ಹಲವರ ವಿರುದ್ಧ ವಂಚನೆ, ಫೋರ್ಜರಿ ಸೇರಿದಂತೆ ವಿವಿಧ ಆರೋಪಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಲ್ಲಿ ಅರ್ಜಿದಾರ ಕೋಶಿ ವರ್ಗೀಸ್ ಅವರು 5.6 ಕೋಟಿ ರೂ.ಮೊತ್ತದ ಎರಡು ಗೃಹ ಸಾಲಗಳಿಗೆ ಸಂಬಂಧಿಸಿದ ಜವಾಬ್ದಾರಿ ವಹಿಸಿಕೊಂಡಿದ್ದರು. ಅದನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್, ಒಸಿಐ ಕಾರ್ಡ್ ಅನ್ನು 2018ರ ಅಕ್ಟೋಬರ್‌ನಲ್ಲಿ ಬ್ಯಾಂಕ್ ವಶಕ್ಕೆ ನೀಡಿದ್ದರು.