ಬೆಳಗಾವಿ: ಕರ್ನಾಟಕದ 30 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಜ್ಞಾನೇಶ್ವರ ಮುಳೈ ಹೇಳಿದರು.
ನಗರದ ಪ್ರಧಾನ ಅಂಚೆಕಚೇರಿಯಲ್ಲಿ ಮಂಗಳವಾರ ಪಾಸ್‌ಪೋರ್ಟ್ ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪ್ರತಿ ಜಿಲ್ಲೆಗೆ ಒಂದರಂತೆ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿರಬೇಕು ಎಂಬ ಗುರಿ ಹೊಂದಲಾಗಿದ್ದು ಈಗಾಗಲೇ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಈ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
ಇದುವರೆಗೆ ಬೆಂಗಳೂರಲ್ಲಿ ಎರಡು, ಮಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಮಾತ್ರ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಇದಕ್ಕೆ ಈಗ ಬೆಳಗಾವಿ ಜಿಲ್ಲೆ ಸೇರ್ಪಡೆಯಾಗಿದೆ ಎಂದು ಅವರು ಹೇಳಿದರು.
ಎರಡನೇ ಹಂತದಲ್ಲಿ ಮೈಸೂರು, ದಾವಣಗೆರೆ ಮತ್ತು ಹಾಸನ ಜಿಲ್ಲೆ ಮೂರನೇ ಹಂತದಲ್ಲಿ ಬೀದರ, ರಾಯಚೂರು, ಬಳ್ಳಾರಿ, ಗದಗ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ದೇಶದಲ್ಲಿ ಪ್ರಸ್ತುತ 32 ಪೂರ್ಣ ಪ್ರಮಾಣದ ಪಾಸ್‌ಪೋರ್ಟ್ ಕೇಂದ್ರಗಳಿದ್ದರೆ,142 ಸೇವಾ ಕೇಂದ್ರಗಳಿವೆ. ಈ ವರ್ಷದ ಮಾರ್ಚ್ ಅಂತ್ಯದೊಳಗೆ 251 ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ಇದರಲ್ಲಿ ಬೆಳಗಾವಿ 63 ನೇ ಕೇಂದ್ರವಾಗಿದೆ ಎಂದು ಅವರು ಹೇಳಿದರು.