ಹೊನ್ನಾವರ: ಯಕ್ಷಕಾಶಿ ಎಂದು ಕರೆಯಲ್ಪಡುವ, ಯಕ್ಷಗಾನ ಕಲಾಲೋಕದ ನಟರ ವಿಶ್ವವಿದ್ಯಾಲಯ ಗುಂಡಬಾಳ ಮುಖ್ಯಪ್ರಾಣ ಸನ್ನಿಧಿಯಲ್ಲಿ ಸೋತವನಿಗೂ ವಿರೋಚಿತ ಗೌರವ ಸಲ್ಲಿಸುವ ಸಂಪ್ರದಾಯ ಶತಮಾನಗಳಿಂದ ನಡೆದು ಬಂದಿದೆ.
ಈ ಘಟನೆಯನ್ನು ನೆನಪಿಸುವಂತೆ ಅನ್ಯಕೋಮಿನ ಹಬ್ಸಿ ಎಂದು ಕರೆಯುವ ಈ ದೈವವನ್ನು ವರ್ಷಕ್ಕೊಮ್ಮೆ ಆಹ್ವಾನಿಸಿ ಸೇವೆಗೆ ಅವಕಾಶ ಮಾಡಿಕೊಟ್ಟು ಮರಳಿಸಲಾಗುತ್ತಿದೆ. ಈ ಭಾಗದ ಅತ್ಯಂತ ಪುರಾತನ ಕ್ಷೇತ್ರಗಳಲ್ಲೊಂದಾದ ಗುಂಡಬಾಳದಲ್ಲಿ ಯಕ್ಷಗಾನದ ಸೇವೆ ನಡೆಯುವ ತಿಂಗಳಲ್ಲಿ ಹಬ್ಸಿಯ ಆವೇಶ ಮಾವಿನಕುರ್ವೆ ಪುರೋಹಿತ ಕುಟುಂಬಕ್ಕೂ, ವೀರಭದ್ರ ಆವೇಶ ಗುಂಡಬಾಳ ಕಾಮತ್ ಕುಟುಂಬಕ್ಕೂ, ಕೃಷ್ಣ ಆವೇಶ ಚಿಕ್ಕನಕೋಡಿನ ನಾಯಕ ಮನೆತನಕ್ಕೂ ಬರುತ್ತದೆ. ಹಬ್ಸಿ ರುದ್ರ ರಮಣೀಯ ಪ್ರವೇಶ, ಆರ್ಭಟ ನೋಡುಗರನ್ನು ದಂಗುಬಡಿಸುತ್ತದೆ. ಧರ್ಮದರ್ಶಿಗಳು ಬಣ್ಣ ಹಚ್ಚಿ, ಕಪ್ಪು ಬಟ್ಟೆಯನ್ನು, ಗೆಜ್ಜೆಯನ್ನು ತೊಡಿಸುತ್ತಾರೆ. ಉಪವಾಸ ಕೈಗೊಂಡ ಹಬ್ಸಿ ಪಾತ್ರಧಾರಿ ಮುಖ್ಯಪ್ರಾಣನಿಗೆ, ನಂತರ ಗಣಪತಿಗೆ ಆರತಿ ಎತ್ತಿ ವೇಷಧಾರಿಯನ್ನು ಎತ್ತಿಕೊಂಡೇ ತರುತ್ತಾರೆ. ಆಗ ಅಪರಿಚಿತ ಭಾಷೆಯಲ್ಲಿ ಅಲವಂಗ, ಮಲವಂಗ, ಗೋದಿರೋಟಿ ಖಾವುಂಗ, ಸಿದ್ಧಾಪುರನೆ ಆವುಂಗಾ ಎಂಬ ಘೋಷಣೆಗಳಾಗುತ್ತವೆ. ಹಬ್ಸಿ ಪೋಷಾಕುಗಳು ಉಡುಗೊರೆಯಾಗಿ ಬರುತ್ತವೆ.
ಪರಂಪರೆ ಮುಂದುವರಿಸಲು ಮಾವಿನಕುರ್ವೆ ಗೋಪಾಲಕೃಷ್ಣ ನಾಗಪ್ಪ ಭಟ್ ಹಬ್ಸಿ ಕಲಾವಿದರಾಗಿ ರಂಗಪ್ರವೇಶ ಮಾಡಿದ್ದಾರೆ. ಹಲವು ನಿಗೂಢ ಸಂಪ್ರದಾಯ, ಪರಂಪರೆಗಳನ್ನು ಉಳಿಸಿಕೊಂಡು ಬಂದಿರುವ ಗುಂಡಬಾಳ ಕ್ಷೇತ್ರದ ಆಡಳಿತ ಮಂಡಳಿ ತನ್ನ ಯಕ್ಷಗಾನ ಸಂಪ್ರದಾಯದಿಂದಾಗಿ ಕಲಾಲೋಕಕ್ಕೆ ನೂರಾರು ಕಲಾವಿದರನ್ನು ಕೊಟ್ಟಿದೆ, ಕೊಡುತ್ತಿದೆ. ಸರ್ಕಾರದ ಯಾವ ನೆರವಿಲ್ಲದೇ ನಿರಂತರವಾಗಿ ನಡೆಯುತ್ತ ಬಂದ ಯಕ್ಷಗಾನ ಪರಂಪರೆಯಿಂದಾಗಿ ಕೆರೆಮನೆ, ಕೊಂಡದಕುಳಿ, ಚಿಟ್ಟಾಣಿ, ಜಲವಳ್ಳಿ, ಯಾಜಿ, ಹುಡಗೋಡು, ಮೊದಲಾದ ಸುಪ್ರಸಿದ್ಧ ಮತ್ತು ಪ್ರಸಿದ್ಧ ಕಲಾವಿದರ ಹುಟ್ಟಿಗೆ ಕ್ಷೇತ್ರ ಕಾರಣವಾಗಿದೆ.
Advertisement
ಒಂದೇ ಸ್ಥಳದಲ್ಲಿ ಪ್ರತಿವರ್ಷ 150ಕ್ಕೂ ಹೆಚ್ಚು ಬಯಲಾಟ ಸೇವೆ ನಡೆಯುವ ಜಗತ್ತಿನ ಏಕೈಕ ರಂಗಸ್ಥಳ ಗುಂಡಬಾಳ. ಇಲ್ಲಿ ಆಟ ಆಡುವುದು, ಆಡಿಸುವುದು, ನೋಡುವುದು ಒಂದು ಸೇವೆ. ರಂಗಸ್ಥಳಕ್ಕೆ ಹೋಗಿ ಧೂಳನ್ನು ಹಣೆಗೆ ಹಚ್ಚಿಕೊಂಡು ಬಂದರೂ ಅದು ಸೇವೆ. ಭಾರತದ ಮೇಲೆ ಆಬಸೇನಿಯಾ ಜನಾಂಗವು ದಾಳಿಮಾಡಿ ಲೂಟಿ ಮಾಡುತ್ತಿದ್ದರು. ಈ ಜನಾಂಗ ಲೂಟಿ ಮಾಡುತ್ತಾ ಗುಂಡಬಾಳ ತಲುಪಿತ್ತು. ಈತನನ್ನು ಊರವರು ಒಟ್ಟಾಗಿ ಹತ್ಯೆಗೈದರು. ನಂತರ ಈ ದುಷ್ಟ ದೈವವಾಗಿ ಊರನ್ನು ಕಾಡಲು ತೊಡಗಿದ. ಆಗ ಊರ ಜನ ಮುಖ್ಯಪ್ರಾಣನಿಗೆ ಶರಣು ಬಂದರು. ಈ ದೈವದಿಂದ ಶಾಶ್ವತ ವಿಮೋಚನೆ ಪಡೆಯಲು ದೇವರ ಸಾನ್ನಿಧ್ಯದಲ್ಲಿ ಗೌರವದ ಸ್ಥಾನ ನೀಡಿ, ಅದನ್ನು ಶಮನಗೊಳಿಸಲಾಯಿತು.
Related Articles
Advertisement