Advertisement

ಬತ್ತದ ಉತ್ಸಾಹ ; ಭತ್ತದ ತಳಿ ಸಂರಕ್ಷಣೆಗೆ

12:11 AM Feb 09, 2020 | Sriram |

ಆಧುನಿಕತೆಯ ನಾಗಾಲೋಟದಲ್ಲಿ ಪಾರಂಪರಿಕ ಕೃಷಿ, ತಳಿಗಳ ವೈವಿಧ್ಯತೆಗಳನ್ನು ನಾವು ಬಹುತೇಕ ಮರೆತು ಬಿಟ್ಟಿದ್ದೇವೆ. ಆದರೆ ಇಲ್ಲೊಬ್ಬರು ಸಾಂಪ್ರದಾಯಿಕ ಕೃಷಿ ಮಹತ್ವವನ್ನು ಸಾರುವುದರೊಂದಿಗೆ ಅಪರೂಪದ ಭತ್ತದ ತಳಿ ಸಂರಕ್ಷಣೆಗೆ ಟೊಂಕಕಟ್ಟಿದ್ದಾರೆ.

Advertisement

ಬಾಬುಲಾಲ್‌ ದಹಿಯಾ (72) ಅವರು ಮಧ್ಯಪ್ರದೇಶದ ಸತ್ನ ಜಿಲ್ಲೆಯ ಮೈಹಾರ್‌ ಎಂಬ ಪುಟ್ಟ ಗ್ರಾಮದಲ್ಲಿ ಕೃಷಿಯ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುತ್ತಿರುವ ರೈತ. ಅವರು ಅಪ್ರತಿಮ ಕಲಾಪ್ರೇಮಿಯೂ ಹೌದು. ಆದರೆ ಇವರಿಗೆ ಹೆಸರು ಪ್ರಖ್ಯಾತಿ ತಂದು ಕೊಟ್ಟಿದ್ದು ಕೃಷಿ ಕ್ಷೇತ್ರ. ಕಳೆದ 15 ವರ್ಷಗಳಿಂದ ಕೇವಲ 2 ಎಕ್ರೆ ಜಾಗದಲ್ಲಿ 110 ವಿಭಿನ್ನ ಬಗೆಯ ದೇಸೀ ಭತ್ತದ ತಳಿಗಳ ಸಂರಕ್ಷಣೆಯೊಂದಿಗೆ ಬೆಳೆಯನ್ನೂ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಕಲೆಯಿಂದ ಪ್ರಕೃತಿಯ ಮಡಿಲಿಗೆ
ಬಾಬುಲಾಲ್‌ಗೆ ಕಥೆ, ಬರವಣಿಗೆ, ಹಾಡು ವುದು ಎಂದರೆ ಅಚ್ಚುಮೆಚ್ಚು. ಬಾಲ್ಯದಿಂದಲೇ ಅತ್ಯಂತ ಕ್ರಿಯಾಶೀಲರಾಗಿದ್ದ ಇವರಿಗೆ ಸಾಹಿತ್ಯದ ಕುರಿತು ಎಲ್ಲಿಲ್ಲದ ಒಲವು. ಅವರಲ್ಲಿನ ಬರಹದ ನೈಪುಣ್ಯತೆ ನವಭಾರತ್‌ ಟೈಮ್ಸ್‌ ನ ಹೆಸರಾಂತ ಅಂಕಣಕಾರನ್ನಾಗಿ ಮಾಡಿತ್ತು. ಜಾನಪದ ಕಲೆ ಬಗ್ಗೆ ಇರುವ ಒಲವು ಸಾಂಪ್ರ ದಾಯಿಕ ಕೃಷಿಯನ್ನು ಉಳಿಸಬೇಕು ಎನ್ನುವ ಕಡೆ ಹೊರಳಿತ್ತು. ದೇಶಿಯ ಸಂಸ್ಕೃತಿಯ ಮತ್ತೂಂದು ಭಾಗವಾಗಿರುವ ವೈವಿಧ್ಯಮಯ ಸಾಂಪ್ರದಾಯಿಕ ಬೆಳೆಗಳನ್ನು ರಕ್ಷಿಸಬೇಕೆಂಬ ಅವರ ಹಂಬಲ ಕಾರ್ಯರೂಪ ಪಡೆದುಕೊಂಡಿತ್ತು. ಅದರ ಫ‌ಲವಾಗಿ ಇಂದು ಬಾಬು ಲಾಲ್‌ 2 ಎಕ್ರೆ ಭೂಮಿಯಲ್ಲಿ 110ಕ್ಕೂ ಹೆಚ್ಚು ದೇಶಿಯ ಭತ್ತದ ಬೆಳೆಗಳನ್ನು ಬೆಳೆದಿದ್ದಾರೆ.

6 ಎಕ್ರೆಗಳಲ್ಲಿ 100 ಬಗೆಯ
ದ್ವಿದಳ ಧಾನ್ಯಗಳು
6 ಎಕ್ರೆಗ‌ಳಲ್ಲಿ, ಬಾಬುಲಾಲ್‌ 100 ಬಗೆಯ ದ್ವಿದಳ ಧಾನ್ಯಗಳು ಮತ್ತು ತರಕಾರಿಗಳನ್ನು ಬೆಳೆದಿದ್ದಾರೆ. 2005ರಿಂದ ವಿವಿಧ ಬಗೆಯ ತಳಿ ಗಳನ್ನು ಸಂಗ್ರಹಿಸುತ್ತಾ ಬಂದಿರುವ ಬಾಬು ಲಾಲ್‌ ದೇಶದ ಮೂಲೆ ಮೂಲೆಗೂ ತೆರಳಿ ಅಲ್ಲಿನ ಸಾಂಪ್ರದಾಯಿಕ ಬೆಳೆಗಳ ಬಗ್ಗೆ ತಿಳಿದುಕೊಳ್ಳುವುದರೊಂದಿಗೆ ಅವುಗಳ ಬೀಜಗಳನ್ನು ಸಂಗ್ರಹಿಸಿ ತಮ್ಮ ಜಮೀನಿನಲ್ಲಿ ಬೆಳೆಯುವ ಮೂಲಕ ಅವುಗಳ ಸಂರಕ್ಷಣೆಯಲ್ಲಿ ತೊಡಗಿದ್ದಾರೆ.

ರಾಸಾಯನಿಕ ಬಳಕೆಯಿಲ್ಲ
ಸುಮಾರು 8 ಎಕ್ರೆಗಳಲ್ಲಿ ಕಳೆದ 15 ವರ್ಷಗಳಿಂದ ಕೃಷಿ ಮಾಡುತ್ತಿರುವ ಬಾಬುಲಾಲ್‌ ಇದುವರೆಗೂ ಯಾವುದೇ ರಾಸಾಯನಿಕಗಳನ್ನು ಸಿಂಪಡಿಸುತ್ತಿಲ್ಲ. ಸಂಪೂರ್ಣ ಸಾವಯವ ವಿಧಾನದಲ್ಲೇ ಅವರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವರ ಅಪ್ರತಿಮ ಕೃಷಿ ಕಾರ್ಯಕ್ಕೆ ಪದ್ಮಶ್ರೀ ಪ್ರಶಸ್ತಿಯೂ ಸಿಕ್ಕಿದೆ.

Advertisement

ನಿರಂತರವಾಗಿ ಸಂರಕ್ಷಿಸುತ್ತೇನೆ
ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳಿದ್ದವು. ಈಗ ಅವುಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಇವುಗಳ ಪೈಕಿ ಸದ್ಯ ನಾನು 110 ಪ್ರಭೇದಗಳನ್ನು ಸಂಗ್ರಹಿಸಿದ್ದೇನೆ. ಮುಂಬರುವ ದಿನಗಳಲ್ಲಿ ಈ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ಇರಾದೆ ನನ್ನಲ್ಲಿದ್ದು, ನಿರಂತರವಾಗಿ ಬೆಳೆಗಳನ್ನು ಸಂರಕ್ಷಿಸುತ್ತೇನೆ.
– ಬಾಬುಲಾಲ್‌

-ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next