ಮೈಸೂರು: ಇಂದಿನ ಯುವಜನತೆ ದೇಶಕಂಡ ಮಹಾನ್ ನಾಯಕರ ಜೀವನದ ಹಾದಿ ಅನುಸರಿಸಿದರೆ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದು ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಸ್. ಶಿವರಾಜಪ್ಪ ಹೇಳಿದರು.
ದಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ಹಾಗೂ ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ದೇಶ ಕಂಡ ಮಹಾನ್ ನಾಯಕರಾಗಿದ್ದಾರೆ. ದಲಿತರ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅಂಬೇಡ್ಕರ್ ಕೊಡುಗೆಗಳು ಇಂದಿಗೂ ಜೀವಂತವಾಗಿದೆ. ಹೀಗಾಗಿ ಇಂದಿನ ಯುವಜನತೆ ಅಂಬೇಡ್ಕರ್ ಹಾಗೂ ಇನ್ನಿತರ ಮಹಾನ್ ನಾಯಕರ ಜೀವನದ ಹಾದಿಯಲ್ಲಿ ಸಾಗಿದರೆ ಉತ್ತಮ ಜೀವನ ನಡೆಸಬಹುದು ಎಂದರು.
ಸೋಮಾನಿ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಹೆಸರು ಗಳಿಸಿದ್ದು, ದೇಶಕಂಡ ಅನೇಕ ಮಹಾನ್ ವ್ಯಕ್ತಿಗಳ ಕಾರ್ಯಕ್ರಮಗಳನ್ನು ಆಯೋಜಿಸು ವುದರ ಜತೆಗೆ ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗುವಂತೆ ಮಾಡಿರುವುದು ಶ್ಲಾಘನೀಯವಾಗಿದೆ.
ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಶಿಸ್ತು, ಸಂಯಮ ಬೆಳೆಯುತ್ತದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಕಾಲೇಜಿನ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಐಇಟಿ ಅಧ್ಯಕ್ಷ ನಾಗರಾಜು, ಪುಟ್ಟಸ್ವಾಮಿ, ಮನೋಹರ್, ಮಹದೇವಯ್ಯ ಇತರರು ಹಾಜರಿದ್ದರು.