ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗೌರಿಬಿದನೂರು, ದೊಡ್ಡಬಳ್ಳಾಪುರ ತಾಲೂಕುಗಳ ಜನರಿಗೆ ಅನುಕೂಲವಾಗುವಂತೆ ಹಿಂದೂಪುರದಿಂದ ಯಶವಂತಪುರದವರೆಗೆ ಮತ್ತೆ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಲಾಗಿದ್ದು,ಈ ರೈಲು ಪರೀಕ್ಷಾರ್ಥವಾಗಿ 10 ದಿನಗಳ ಕಾಲ ಸಂಚರಿಸಲಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದ್ದಾರೆ.
ಸೋಮವಾರ ಆರಂಭವಾಗಿರುವ ಹಿಂದೂಪುರ- ಯಶವಂತಪುರ ರೈಲು ಸಂಚಾರದ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರ ಸೇವೆಗೆ ರೈಲ್ವೆ ಇಲಾಖೆ ಮತ್ತೆ ಹಂತ ಹಂತವಾಗಿ ಚಾಲನೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗೌರಿಬಿದನೂರು, ತೊಂಡೇಬಾವಿ ಮತ್ತು ದೊಡ್ಡಬಳ್ಳಾಪುರದ ಮೂಲಕ 10 ದಿನಗಳ ಕಾಲ ಪರೀಕ್ಷಾರ್ಥವಾಗಿ ಹಿಂದೂಪುರ-ಯಶವಂತಪುರ ಪ್ಯಾಸೆಂಜರ್ ರೈಲು ಸಂಚರಿಸಲಿದೆ.
ವೇಳಾಪಟ್ಟಿ: ಹಿಂದೂಪುರದಿಂದ ಬೆಳಗ್ಗೆ 6 ಗಂಟೆಗೆ ಹೊರಡಲಿರುವ 6 ಗಂಟೆ 25 ನಿಮಿಷಕ್ಕೆ ಗೌರಿಬಿದನೂರು ತಲುಪಲಿದೆ. 6.41 ಕ್ಕೆ ತೊಂಡೇಬಾವಿ ತಲುಪಿ ನಂತರ 7ಗಂಟೆ 17 ನಿಮಿಷಕ್ಕೆ ದೊಡ್ಡಬಳ್ಳಾಪುರ ತಲುಪಲಿದೆ. 8 ಗಂಟೆ 25 ನಿಮಿಷಕ್ಕೆಯಶವಂತಪುರ ರೈಲು ನಿಲ್ದಾಣ ತಲುಪಲಿದೆ. ಇದೇ ರೈಲು ಮತ್ತೆ ಸಂಜೆ 6 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಿಂದ ಅದೇ ಮಾರ್ಗದಲ್ಲಿ ಹೊರಟು ರಾತ್ರಿ8 ಗಂಟೆ25 ನಿಮಿಷಕ್ಕೆ ಹಿಂದೂಪುರ ತಲುಪಲಿದೆ ಎಂದು ತಿಳಿಸಿದರು.
ಹಂತಹಂತವಾಗಿ ಸಂಚಾರ ಸೇವೆ :
ನೈರುತ್ಯ ರೈಲ್ವೆ ವಲಯದ ಹಿರಿಯ ವ್ಯವಸ್ಥಾಪಕ ಎ.ಎನ್. ಕೃಷ್ಣಾರೆಡ್ಡಿ ಮಾಹಿತಿ ನೀಡಿ ಲಾಕ್‌ಡೌನ್ ತೆರವುಗೊಂಡ ನಂತರಕೇಂದ್ರ ಸರ್ಕಾರದ ಆದೇಶದಂತೆ ನೈರುತ್ಯ ರೈಲ್ವೆ ಹಂತ ಹಂತವಾಗಿ ಸಂಚಾರ ಸೇವೆ ಆರಂಭಿಸುತ್ತಿದ್ದು, ಈ ಹಿಂದೆ ನೈರುತ್ಯ ವಲಯದಲ್ಲಿ ಕಾಯ್ದಿರಿಸಲ್ಪಡುವ ಆಯ್ದಕೆಲವು ರೈಲುಗಳಸಂಚಾರ ಸೇವೆ ಪುನರಾರಂಭಿಸಲಾಗಿತ್ತು. ಈಗಕಾಯ್ದಿರಿಸದಟಿಕೆಟ್ ಅಂದರೆ ಪ್ಯಾಸೆಂಜರ್ ರೈಲುಗಳ ಸಂಚಾರ ಸೇವೆಯನ್ನೂ10 ದಿನಗಳ ಕಾಲ ಪರೀಕ್ಷಾರ್ಥವಾಗಿ ಸೋಮವಾರ ದಿಂದ ಆರಂಭಿಸಲಾಗಿದೆ. ಇದರಿಂದ ರೈತರು, ಜನಸಾಮಾನ್ಯರು ಹಾಗೂ ಖಾಸಗಿ ಮತ್ತು ಸರ್ಕಾರಿ ನೌಕರರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಪರೀಕ್ಷಾರ್ಥವಾಗಿ ಸಂಚರಿಸುವ ರೈಲುಗಳ ಸೇವೆ ನೋಡಿಕೊಂಡು ನಂತರ ನಿಗದಿತ ಮಾರ್ಗಗಳಲ್ಲಿ ಸಂಚಾರ ಮುಂದುವರಿಸಲುಕ್ರಮಕೈಗೊಳ್ಳಲಾಗುವುದು. ಪರೀಕ್ಷಾರ್ಥ ಸಂಚರಿಸುವ ರೈಲು ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿಯೂ ಸಂಚರಿಸಲಿದೆ ಎಂದು ತಿಳಿಸಿದರು.