ಶಿರಸಿ: ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟ ಇದ್ದರೂ ಪ್ರಯಾಣಿಕರಿಗೆ ಸೇವೆ ತಪ್ಪಿಸಲು ಹಿಂದೇಟು ಹಾಕುವುದಿಲ್ಲ ಎಂದು ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಹೇಳಿದರು. ಅವರು ತಾಪಂ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ತೊಂದರೆ ಆಗಬಾರದು. ಸಂಸ್ಥೆಗೆ ಸಿಬ್ಬಂದಿ ಕೊರತೆ ಇದೆ. 2500 ಡ್ರೈವರ್, ಕಂಡಕ್ಟರ್ ನೇಮಕಾತಿ ಮಾಡಿಕೊಳ್ಳಬೇಕಿದೆ. 645 ಹೊಸ ಬಸ್ ಬರಲಿದ್ದು, ಜನೆವರಿಗೆ 200 ಹೊಸ ಬಸ್ ಬರುತ್ತದೆ. ಎಲ್ಲ ಏಳು ಜಿಲ್ಲೆಗೆ ಇದರ ಹಂಚಿಕೆ ಆಗಲಿದೆ. ಉಳಿದ ಹೊಸ ಬಸ್‌ಗಳು ಮಾರ್ಚ್ ಒಳಗೆ ಬರುತ್ತದೆ ಎಂದರು. ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ, ಉತ್ತರ ಕನ್ನಡದಲ್ಲಿ ಖಾಸಗಿ ಬಸ್ ಸೇವೆ ಇಲ್ಲ. ವಾಯುವ್ಯ ಸಾರಿಗೆ ಸೇವೆ ಸರಿಯಾಗಿ ಕೊಡಬೇಕು ಎಂದರು.
ಜೀವನ ಪೈ, ನಾರಾಯಣ ಗುರು ನಗರಕ್ಕೆ ಬಸ್ಸಿಲ್ಲ. ವರ್ಷದಿಂದ ರಜಾ ದಿನ ಬಸ್ ಬಿಡುತ್ತಿಲ್ಲ. ಜನ ಪ್ರತಿನಿಧಿಗೆ ಕೂಡ ಗೌರವ ಕೊಡಲ್ಲ ಎಂದು ದೂರಿದರು. ಬಂಡಲ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ಮಕ್ಕಳಿಗೆ ಅನುಕೂಲ ಆಗಲು ವಿದ್ಯಾರ್ಥಿ ಎಂದರೆ ನಿರ್ಲಕ್ಷ ಮಾಡಬಾರದು. ಸೌಜನ್ಯ ಮೀರಬಾರದು. ಗ್ರಾಮ ಸಭೆಗೂ ಬರಲ್ಲ. ಗತ್ತಿನ ಇಲಾಖೆ ಆಗಬಾರದು ಎಂದರು.
ಜಲಜಾಕ್ಷಿ ಹೆಗಡೆ ಆಲ್ಮನೆ, ಲಾಸ್ಟ್ಸ್ಟಾ ಪ್ ಅಂತ ಕರಕಂಡೇ ಹೋಕ್ತಾ ಇಲ್ಲ ಎಂದರು. ಪ್ರವೀಣ ಗೌಡ ರಾಗಿಹೊಸಳ್ಳಿ, ನಿಲ್ದಾಣ ಇದ್ದಲ್ಲಿ ವೇಗದೂತ ಬಸ್ಸುಗಳನ್ನು ನಿಲ್ಲಿಸಬೇಕು. ಶಿರಸಿ ಸಿಟಿಯಲ್ಲಿ ಹೆಚ್ಚು ಬಸ್ ಓಡಿಸಿ ಎಂದರು. ಮಂಜುಗುಣಿ ನಾರಾಯಣ ನಾಯ್ಕ, ಬಸ್ಸನ್ನು ವೇಳೆಗೆ ಬಿಡಬೇಕು ಎಂದರು.
ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೆರಮನೆ, ಬನವಾಸಿ ಬಸ್ ನಿಲ್ದಾಣದಲ್ಲಿ ಹೊಂಡ ಬಿದ್ದಿದೆ. ಕುಡಿಯುವ ನೀರು ಕೊಡಿಸಿ ಎಂದು ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಬಸ್‌ನ್ನು ಸೈಡ್ ಗೆ ನಿಲ್ಲಿಸುವುದಿಲ್ಲ. ಇದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದರು. ಸಂತೋಷ ಕುಮಾರ ಜೆ.ಆರ್., ಶಿರಸಿ ಹಳೆಬಸ್ ನಿಲ್ದಾಣ ಕತೆ ಏನಾಗಿದೆ ಎಂದು ಕೇಳಿದರು. ಟೆಂಡರ್ ಕರೆದರೂ ಆಗಿಲ್ಲ. ಹಳೆ ಕಟ್ಟಡ ತೆರವು ಆದರೂ ತೆರವಿಗೆ ಹಣ ಇಲ್ಲ ಎಂದು ಸುಬ್ರಾಯ ಹೆಗಡೆ ಹಲಸಿನಳ್ಳಿ ಹೇಳಿದರು. ಹೊಸ ಕಟ್ಟಡಕ್ಕಾಗಿ ಏನಾದರೂ ಮಾಡಬೇಕು ಎಂದು ಪಾಟೀಲ ಹೇಳಿದರು.
ರಾಘವೇಂದ್ರ ಹೆಗಡೆ, ಮಂಗಳೂರಿಗೆ, ಮೈಸೂರಿಗೆ ಸ್ಲಿಪರ್ ಕೋಚ್ ಬಿಡಬೇಕು, ಬೆಂಗಳೂರಿಗೆ ಎಸಿ ಬಸ್ ಬಿಡಬೇಕು ಎಂದೂ ಆಗ್ರಹಿಸಿದರು. ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ, ತಾಪಂ. ಸದಸ್ಯರಾದ ನರಸಿಂಹ ಬಕ್ಕಳ, ಜಿಪಂ ಸದಸ್ಯೆ ಉಷಾ ಹೆಗಡೆ, ತಾಪಂ ಇಓ ಎಫ್.ಜಿ. ಚಿನ್ನಣ್ಣನವರ್ ಇತರರು ಇದ್ದರು.