ಮಾಗಡಿ: ಕುಣಿಗಲ್ನಿಂದ ಮಾಗಡಿಗೆ ರಾತ್ರಿ ವೇಳೆ ಸರ್ಕಾರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದ್ದು, ಕುಣಿಗಲ್ನಿಂದ ಮಾಗಡಿ ಮಾರ್ಗವಾಗಿ ಸರ್ಕಾರಿ ಬಸ್‌ಗಳನ್ನು ಮೀಸಲಿಡುವಂತೆ ಹಲವು ಬಾರಿ ಡಿಪೋ ವ್ಯವಸ್ಥಾಪಕರಿಗೆ, ಶಾಸಕರಿಗೆ ಹಾಗೂ ಜಿಪಂ ಪ್ರತಿನಿಧಿಗಳಿಗೆ ಲಿಖೀತ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಯಾಣಿಕರು ಸಾರಿಗೆ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂಕ್ತ ಕ್ರಮ ಕೈಗೊಂಡಿಲ್ಲ: ಮಾಗಡಿ ತಾಲೂಕಿನಲ್ಲಿ ಕುಣಿಗಲ್ ರಸ್ತೆಯಲ್ಲಿಯೇ ಡಿಪೋ ಇದ್ದು, ಕುಣಿಗಲ್ನಿಂದ ಮಾಗಡಿ ಮಾರ್ಗವಾಗಿ ಬಸ್‌ಗಳು ಚಲಿಸುತ್ತಿಲ್ಲ. ಈ ವಿಚಾರವಾಗಿ ಪ್ರಯಾಣಿಕರು ಜನಪ್ರತಿನಿಧಿಗಳಲ್ಲಿ ಅಳಲು ತೋಡಿಕೊಂಡರೂ, ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇನ್ನೆಷ್ಟು ದಿನ ಪ್ರಯಾಣಿಕರು ಈ ಸಮಸ್ಯೆ ಎದುರಿಸಬೇಕು ಎಂದು ನೂರಾರು ಪ್ರಯಾಣಿಕರ ಪ್ರಶ್ನೆಯಾಗಿದ್ದು, ಈ ಪ್ರಶ್ನೆಗಳಿಗೆ ಇಂದೇ ಜನಪ್ರತಿನಿಧಿಗಳು ಉತ್ತರ ನೀಡಬೇಕಿದೆ.
ಖಾಸಗಿ ಬಸ್ ಪ್ರಯಾಣ ಅನಿವಾರ್ಯ: ಕುಣಿಗಲ್ ತಾಲೂಕಿನಿಂದ ಮಾಗಡಿ ಸರ್ಕಾರಿ ಶಾಲೆ ಕಾಲೇಜುಗಳಿಗೆ ಅನೇಕ ವಿದ್ಯಾರ್ಥಿಗಳು ಹೋಗುತ್ತಿದ್ದು, ಖಾಸಗಿ ಬಸ್ಸಿನಲ್ಲಿಯೇ ಪ್ರಯಾಣಿಸುವ ಅನಿವಾರ್ಯತೆ ಒದಗಿದೆ. ಸರ್ಕಾರಿ ಬಸ್‌ಗಳನ್ನು ಮಾಗಡಿ ಮಾರ್ಗವಾಗಿ ಚಲಿಸುವಂತೆ ಶಾಸಕರಲ್ಲಿ ವಿದ್ಯಾರ್ಥಿಗಳೂ ಸಹ ಮನವಿ ಮಾಡಿದ್ದಾರೆ. ಆದರೆ, ವಿದ್ಯಾರ್ಥಿಗಳ ಮನವಿಗೂ ಕಿಮ್ಮತ್ತಿಲ್ಲದಂತಾಗಿದೆ. ಸರ್ಕಾರಿ ಬಸ್‌ಗಳು ಸಂಚರಿಸಿದರೆ, ವಿದ್ಯಾರ್ಥಿಗಳಿಗೆ ಮಾಸಿಕ, ವಾರ್ಷಿಕ ಬಸ್ ಪಾಸ್ ಸಿಗುತ್ತಿತ್ತು. ದಿನನಿತ್ಯ ಹಣನೀಡಿ, ಶಾಲಾ ಕಾಲೇಜಿಗೆ ಬರಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ.
ಮಾಗಡಿಯ ಸರ್ಕಾರಿ ಕಾಲೇಜಿಗೆ ಬಹುತೇಕ ರೈತಾಪಿ ಮಕ್ಕಳೇ ಹೋಗುತ್ತಿದ್ದು, ನಿತ್ಯವೂ ಸಾರಿಗೆಗೆ ಇವರಿಗೆ ಹಣ ನೀಡಿಲಾಗದೆ, ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಖಾಸಗಿ ಕಂಪನಿಗಳಲ್ಲಿ ಉದ್ಯೊಗ ಹರಸಿ ಹೋಗುತ್ತಿದ್ದಾರೆ. ಜೊತೆಗೆ ವಯೋವೃದ್ಧರಿಗೆ ಹಿರಿಯ ನಾಗರಿಕ ಯೋಜನೆಯಡಿ ಸೌಲಭ್ಯಗಳಿದ್ದು, ಖಾಸಗಿ ಬಸ್‌ಗಳಲ್ಲಿ ಅದನ್ನು ದಕ್ಕಿಸಿಕೊಳ್ಳಲಾಗುತ್ತಿಲ್ಲ.
ಹೆಚ್ಚಿನ ಹಣ ನೀಡಿ ಪ್ರಯಾಣ: ಕುಣಿಗಲ್ನಿಂದ ಮಾಗಡಿ ಕೇವಲ 22 ಕಿ.ಮೀ ಸಮೀಪವಿದೆ. ಬೆಳಗಿನ ವೇಳೆ ಒಂದೆರಡು ಬಸ್ ಸಂಚರಿಸುತ್ತಿವೆ. ಆದರೆ, ಕೇವಲ 22 ಕಿ.ಮೀಟರ್‌ಗೆ 30 ರೂಪಾಯಿಗಳನ್ನು ನೀಡಬೇಕಾಗಿದೆ ಎಂಬ ಆರೋಪ ಪ್ರಯಾಣಿಕರಿಂದ ಕೇಳಿ ಬರುತ್ತಿದೆ. ರಾಮನಗರಕ್ಕೆ 28 ರೂಪಾಯಿ ಇದ್ದು, ಕುಣಿಗಲ್ಗೆ ಏಕೆ 30 ರೂಪಾಯಿ ಎಂದು ಪ್ರಶ್ನಿಸಿದ್ದಾರೆ.