ಕೊಚ್ಚಿ: ಕಳೆದ ಕೆಲ ದಿನಗಳಿಂದ ವಿಮಾನ ನಿಲ್ದಾಣಗಳಿಗೆ ನಿರಂತರವಾಗಿ ಹುಸಿ ಬಾಂಬ್ ಕರೆಗಳು ಬರುತ್ತಿದ್ದು, ಭೀತಿ ಮೂಡಿಸಿದೆ. ಈ ನಡುವೆ ಹುಸಿ ಬಾಂಬ್ ಕರೆ ಮಾಡಿದ ಪ್ರಯಾಣಿಕನೊಬ್ಬನನ್ನು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ(ಅ21) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಿಐಎಎಲ್ ಅಧಿಕಾರಿಗಳ ಪ್ರಕಾರ, ಮಧ್ಯಾಹ್ನ ವಿಸ್ತಾರಾ ವಿಮಾನದ ದ್ವಿತೀಯ ಲ್ಯಾಡರ್ ಪಾಯಿಂಟ್ ಚೆಕ್‌ನಲ್ಲಿ ಮುಂಬಯಿಗೆ ಹೊರಟಿದ್ದ ಪ್ರಯಾಣಿಕರೊಬ್ಬರಿಂದ ಮೌಖಿಕ ಬಾಂಬ್ ಬೆದರಿಕೆ ಬಂದಿತ್ತು.ನಾನು ಜೀವಂತ ಬಾಂಬ್ ಅನ್ನು ಸಾಗಿಸುತ್ತಿದ್ದೇನೆ” ಎಂದು ಪ್ರಯಾಣಿಕ ಹೇಳಿಕೆ ನೀಡಿದ್ದ.
ವಿಜಯ್ ಮಾಂಧಯನ್ ಎಂದು ಗುರುತಿಸಲಾದ ಪ್ರಯಾಣಿಕ ಕೊಚ್ಚಿಯಿಂದ ಮಧ್ಯಾಹ್ನ 3.50 ಕ್ಕೆ ಹೊರಡಬೇಕಿದ್ದ ವಿಮಾನವನ್ನು ಹತ್ತಬೇಕಿತ್ತು. ಅವರ ಸಾಮಾನು ಸರಂಜಾಮುಗಳನ್ನು ಪರಿಶೀಲಿಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ (BTAC) ರಚಿಸಲಾಯಿತು.ಯಾವುದೇ ವಸ್ತು ಪತ್ತೆಯಾಗದ ಕಾರಣ ವಿಮಾನ ಸಂಜೆ 4.19 ಕ್ಕೆ ಹೊರಟಿತು” ಎಂದು ಅಧಿಕಾರಿಗಳು ಹೇಳಿದ್ದಾರೆ.
ನೆಡುಂಬಶ್ಶೇರಿ ಪೊಲೀಸ್ ಠಾಣೆಯ ಅಧಿಕಾರಿಗಳ ತಂಡ ಕೂಡಲೇ ಸ್ಥಳಕ್ಕೆ ತಲುಪಿದ್ದು, ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.