ಹೊಸದಿಲ್ಲಿ: ದಿಲ್ಲಿ-ಗೋವಾ ವಿಮಾನದಲ್ಲಿ ಭಯೋತ್ಪಾದಕನಿದ್ದಾನೆ ಎಂದು ಹೇಳಿ ಪ್ರಯಾಣಿಕನೋರ್ವ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ವಿಮಾನ ಪ್ರಯಾಣಿಕರ ಆತಂಕಕ್ಕೆ ಕಾರಣವಾದ ವ್ಯಕ್ತಿಯನ್ನು ದಿಲ್ಲಿಯ ಓಕ್ಲಾ ನಿವಾಸಿ ಜಿಯಾ ಉಲ್ ಹಕ್ ಎಂದು ಗುರುತಿಸಲಾಗಿದೆ. ತಾನು ದಿಲ್ಲಿಯ ವಿಶೇಷ ದಳದ ಪೊಲೀಸ್ ಆಗಿದ್ದು, ವಿಮಾನದಲ್ಲಿ ಓರ್ವ ಉಗ್ರನಿದ್ದಾನೆ ಎಂದು ವಿಮಾನ ಸಿಬ್ಬಂದಿ ಬಳಿ ಹೇಳಿಕೊಂಡಿದ್ದ.
ವಿಮಾನ ಸಿಬ್ಬಂದಿ ಕೂಡಲೇ ಪೈಲಟ್ ಗೆ ಮಾಹಿತಿ ನೀಡಿದ್ದು, ಅವರು ಗೋವಾ ವಿಮಾನ ನಿಲ್ದಾಣದ ರಕ್ಷಣಾ ದಳಕ್ಕೆ ಮಾಹಿತಿ ಹಸ್ತಾಂತರಿಸಿದ್ದಾರೆ. ಸಂಜೆ 3.30ರ ಸುಮಾರಿಗೆ ವಿಮಾನ ಗೋವಾ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ಅಧಿಕಾರಿಗಳು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ.
ಇದನ್ನೂ ಓದಿ:ಸಮರ ಸನ್ನದ್ಧತೆ ವೀಡಿಯೋ ಹರಿಬಿಟ್ಟ ನೌಕಾಪಡೆ
ಗುರುವಾರ ಸಂಜೆ ಈ ಘಟನೆ ನಡೆದಿದ್ದು, ವಿಮಾನ ಗೋವಾದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಕ್ವಿಕ್ ಆಕ್ಷನ್ ಟೀಮ್ ಮತ್ತು ಬಾಂಬ್ ನಿಷ್ಕ್ರಿಯಾ ದಳ ಇಡೀ ವಿಮಾನವನ್ನು ಪರಿಶೀಲಿಸಿದ್ದಾರೆ. ಎಲ್ಲಾ ಪ್ರಯಾಣಿಕರನ್ನು ಮತ್ತು ಅವರ ಲಗೇಜ್ ಗಳನ್ನು ಕೂಡಾ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದು, ಯಾವುದೇ ಉಗ್ರ ಅಥವಾ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ವಿಮಾನದಲ್ಲಿ ಉಗ್ರನಿದ್ದಾನೆ ಎಂದು ಹೇಳಿದ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಆತನ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.