ಹೊಸದಿಲ್ಲಿ: ಸಂಸತ್‌ನಲ್ಲಿ ಪರಿಶೀಲನೆಯನ್ನೇ ನಡೆಸದೆ ಕ್ಷಿಪ್ರವಾಗಿ ಮಸೂದೆಗಳನ್ನು ಅಂಗೀಕರಿಸ ಲಾಗುತ್ತಿದೆ. ಇದು ಆತಂಕಕಾರಿ ಎಂದು ಆರೋಪಿಸಿ 17 ವಿಪಕ್ಷಗಳ ನಾಯಕರು ಶುಕ್ರವಾರ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ. ಸೂಕ್ತ ರೀತಿಯಲ್ಲಿ ಪರಿಶೀಲನೆ, ವಿಮರ್ಶೆ ನಡೆಯದೆ ಮಸೂದೆಗಳನ್ನು ಅಂಗೀಕರಿಸುವುದು ಸಂಪ್ರದಾಯ ಮೀರಿದಂತೆ ಆಗುತ್ತದೆ. ಸಭಾಪತಿ ಈ ಬಗ್ಗೆ ಮಧ್ಯಪ್ರವೇಶ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಟಿಎಂಸಿ, ಆರ್‌ಜೆಡಿ, ಟಿಡಿಪಿ, ಸಿಪಿಐ, ಸಿಪಿಎಂ ನಾಯಕರು ಪತ್ರಕ್ಕೆ ಸಹಿ ಹಾಕಿದ್ದಾರೆ. ’14ನೇ ಲೋಕಸಭೆಯಲ್ಲಿ ಶೇ.60ರಷ್ಟು ಮಸೂದೆಗಳನ್ನು ಸಂಸತ್‌ನ ಸ್ಥಾಯಿ ಸಮಿತಿಗಳಿಗೆ ನೀಡಲಾಗಿತ್ತು. 15ನೇ ಲೋಕಸಭೆಯಲ್ಲಿ ಶೇ. 71ರಷ್ಟನ್ನು ಸಮಿತಿಗಳ ಅಧ್ಯಯನ, ಪರಾಮರ್ಶೆಗೆ ನೀಡಲಾಗಿತ್ತು. 16ನೇ ಲೋಕಸಭೆ ಅವಧಿಯಲ್ಲಿ ಶೇ.26ರಷ್ಟು ಮಸೂದೆಗಳನ್ನು ಮಾತ್ರ ಸಮಿತಿಗಳ ಪರಿಶೀಲನೆ ನೀಡಲಾಗಿತ್ತು. 17ನೇ ಲೋಕಸಭೆ ಅಂದರೆ ಹಾಲಿ ಅವಧಿಯಲ್ಲಿ ಇದುವರೆಗೆ ಕೇವಲ 14ನ್ನು ಮಾತ್ರ ಸಂಸತ್ ಪರಾಮರ್ಶೆಗೆ ಒಳಪಡಿಸಲಾಗಿದೆ ಅಥವಾ ಸ್ಥಾಯಿ ಸಮಿತಿಗಳಿಗೆ ನೀಡಲಾಗಿದೆ’ ಎಂದು ಪತ್ರದಲ್ಲಿ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.