Advertisement

ಸಾರ್ವಜನಿಕರಿಗೆ ಪಾಸ್‌ ಪರದಾಟ

05:46 PM Mar 22, 2020 | Team Udayavani |

ಬೈಲಹೊಂಗಲ: ತಾಲೂಕಿನ ಸಾಣಿಕೊಪ್ಪ ಗ್ರಾಮದ ಬಳಿ ಬೆಳಗಾವಿ-ಸವದತ್ತಿ ಮಾರ್ಗದ ರಸ್ತೆಗೆ ನಿರ್ಮಿಸಲಾದ ಟೋಲ್‌ ನಾಕಾದಲ್ಲಿ ಮೂಲ ಸೌಕರ್ಯಗಳಿಲ್ಲದೇ ನಾಗರಿಕರು ನಿತ್ಯ ಪರದಾಡುವಂತಾಗಿದೆ.

Advertisement

ಕಳೆದ ಮೂರು ತಿಂಗಳ ತಿಂದೆ ನಿರ್ಮಾಣಗೊಂಡ ಬೆಳಗಾವಿ-ಸವದತ್ತಿ ರಸ್ತೆ ಮಧ್ಯೆ ಸಾಣಿಕೊಪ್ಪ ಬಳಿ ಟೋಲ್‌ ನಾಕಾ ನಿರ್ಮಿಸಬಾರದೆಂದು ನಾಗರಿಕರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದ ನಂತರವೂ ಪ್ರಾರಂಭಗೊಂಡ ಟೋಲ್‌ ನಾಕಾ ನಾನಾ ಸಮಸ್ಯೆಗಳನ್ನು ಎದುರಿಸಿ ಗೊಂದಲದ ಗೂಡಾಗಿ ಪರಿಣಮಿಸಿದೆ.

ಟೋಲ್‌ನಾಕಾ ಬಳಿ ಸಂಚರಿಸುವ ಹಲವು ವಾಹನ ಸವಾರರು ಸ್ಥಳೀಯವಾಗಿ ಬೆಳಗಾವಿಗೆ ಉದ್ಯೋಗಕ್ಕಾಗಿಸಂಚರಿಸುತ್ತಾರೆ. ಅಂಥವರಿಗೆ ಮಾಸಿಕ ಪಾಸ್‌ ನಿಗದಿಪಡಿಸಿದ್ದು, ನಿಗದಿತ ಪಾಸ್‌ಗಾಗಿ ಹಣ ಎಷ್ಟೆಂದು ಟೋಲ್‌ನಲ್ಲಿ ದರ ಪಟ್ಟಿಯ ನಾಮಫಲಕ ಅಳವಡಿಸ ದಿರುವುದರಿಂದ ನಾಗರಿಕರಿಗೆ ಸಮಸ್ಯೆಯಾಗಿದೆ. ಅಲ್ಲದೇ ಮಾಸಿಕ ಪಾಸ್‌ ಗಾಗಿ ಹಣ ಪಡೆಯುವ ಸಿಬ್ಬಂದಿ ನಾಗರಿಕರಿಗೆ ತಕ್ಷಣ ಪಾಸ್‌ ವಿತರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿವೆ.

ಪಾಸ್‌ ನೀಡಲು ಸಿಬ್ಬಂದಿ ಹಿಂದೇಟು: ಪಾಸ್‌ ನೀಡಿದ ರಸೀದಿ ಆ ಕೂಡಲೇ ನೀಡದೆ ನಾಳೆ ಕೊಡುತ್ತೇನೆಂದು ಸತಾಯಿಸುವ ಸಿಬ್ಬಂದಿ ಪ್ರತಿ ಬಾರಿ ವಾಹನದಲ್ಲಿ ಸಂಚರಿಸುವ ಚಾಲಕರು ಕೇಳಿದಾಗ ಬೆಳಗ್ಗೆ ಸಂಜೆ ಎನ್ನುತ್ತಲೇ ಕಾಲ ಕಳೆಯುತ್ತಾರೆ. ಓರ್ವ ಗ್ರಾಹಕರ ಪಾಸ್‌ ಮೂರು ದಿನವಾದವಾದರೂ ವಿತರಿಸದೆ ಪಾಸ್‌ನ್ನು ಸಿಬ್ಬಂದಿ ತಮ್ಮ ಮನೆಗೆ ಒಯ್ದ ಘಟನೆಗಳು ನಡೆಯುತ್ತಿವೆ. ಗ್ರಾಹಕರು ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿ ತಗಾದೆ ತೆಗೆದ ನಂತರ ಪಾಸ್‌ ವಿತರಿಸಲಾಗಿದೆ ಎಂದು ಗ್ರಾಹಕರು ದೂರಿದ್ದಾರೆ. ಮಾಸಿಕ ಪಾಸ್‌ ವಿತರಿಸಿದ ನಂತರ ಪಾಸ್‌ನಲ್ಲಿ ಪೆನ್ನಿನ ಮೂಲಕ ಮಾರ್ಕ್‌ ಮಾಡಲಾಗುತ್ತಿದ್ದು, ಈ ಪದ್ಧತಿಯನ್ನು ಕೈಬಿಟ್ಟು ಸೆನ್ಸರ್‌ ಮೂಲಕ ನೇರವಾಗಿ ವಾಹನ ಗುರುತಿಸಿ ವಾಹನ ಮುಂದೆ ಹೋಗುವಂತೆ ನೋಡಿಕೊಳ್ಳುವ ಪದ್ಧತಿ ಜಾರಿಯಾಗಬೇಕಿದೆ.

ಸೌಜನ್ಯಯುತ ವರ್ತನೆ ಬೇಕಿದೆ: ಸಿಬ್ಬಂದಿ ಗ್ರಾಹಕರೊಂದಿಗೆ ಒರಟುತನದಿಂದ ವರ್ತಿಸುವದರಿಂದ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದು, ಅವರಲ್ಲಿ ಸೌಜನ್ಯ, ಪ್ರಾಮಾಣಿಕತೆ ಮೂಡಿಸುವ ಅವಶ್ಯಕತೆಯಿದೆ. ಅಲ್ಲದೇ ಮೇಲಧಿಕಾರಿಗಳು ಸಿಬ್ಬಂದಿ ಮೇಲೆ ನಿಗಾವಹಿಸಿ ಉತ್ತಮ ಕಾರ್ಯ ನಿರ್ವಹಣೆಗೆ ಸೂಚಿಸುವ ಅಗತ್ಯವಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Advertisement

ಟೋಲ್‌ನಾಕಾ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಬಗ್ಗೆ ಹಾಗೂ ಸಿಬ್ಬಂದಿ ಒರಟುತನದ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಗತ್ಯ ಸೇವೆ ಒದಗಿಸುವ ಪ್ರಯತ್ನಿಸಲಾಗುವುದು. –ಮಲ್ಲಿಕಾರ್ಜುನ, ಸಾಣಿಕೊಪ್ಪ ಟೋಲ್‌ನಾಕಾ ವ್ಯವಸ್ಥಾಪಕರು

 

-ಸಿ.ವೈ. ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next