ಹಾಸನ: ಬಸ್ ಚಾಲಕರು, ನಿರ್ವಾಹಕರು ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಬಸ್ ಹತ್ತಿಸದೆ ತೊಂದರೆ ಕೊಡುತ್ತಿದ್ದಾರೆಂದು ಅಖೀಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆ (ಎಐಡಿಎಸ್‌ಒ)ಆರೋಪಿಸಿದೆ.
ಕೆಲವು ಬಸ್‌ಗಳಿಗೆ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹತ್ತಿಸುತ್ತಿಲ್ಲ. ಕೆಲವು ನಿರ್ವಾ ಹಕರು ಪಾಸ್ ಹೊಂದಿರುವ ವಿದ್ಯಾರ್ಥಿಗಳು ಬಸ್ ಹತ್ತಿದರೆ ಪ್ರಯಾಣಿಕರಿಂದ ಹಣ ಸಂಗ್ರಹ ಆಗುವುದಿಲ್ಲ ಎಂದು ವಿದ್ಯಾರ್ಥಿಗಳು ಬಸ್‌ಗೆ ಕಾಯುತ್ತಿದ್ದರೂ ಬಸ್ ನಿಲ್ಲಿಸದೇ ಹೋಗುತ್ತಾರೆ ಎಂದು ಹಾಸನದ ಸೆಂಟ್ರಲ್ ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯವರಿಗೆ ವಿದ್ಯಾರ್ಥಿಗಳೊಂದಿಗೆ ಮನವಿ ಸಲ್ಲಿಸಿ ಅಳಲು ತೋಡಿಕೊಂಡಿದ್ದಾರೆ.
ಬಸ್ ಚಾಲಕರು ಮತ್ತು ನಿರ್ವಾಹಕರು ವಿದ್ಯಾರ್ಥಿಗಳು ಬಸ್ ಕಾಯುತ್ತಿದ್ದರೂ ಬಸ್ ನಿಲ್ಲಿಸದೇ ಅಸಡ್ಡೆ ತೋರುತ್ತಿರುವುದರಿಂದ ವಿದ್ಯಾರ್ಥಿಗಳು ಸಕಾಲದಲ್ಲಿ ತರಗತಿಗಳಿಗೆ ಹೋಗಲಾಗುತ್ತಿಲ್ಲ. ಸರ್ಕಾರ ನಿಗದಿಪಡಿಸಿರುವ ಹಣ ನೀಡಿ ಬಸ್‌ಪಾಸ್ ಮಾಡಿಸಿಕೊಂಡಿದ್ದರೂ ವಿದ್ಯಾರ್ಥಿಗಳು ಬಸ್‌ಗಳಲ್ಲಿ ಪ್ರಯಾಣಿಸುವಾಗ ಅವಮಾನ ಮಾಡುವ ಮತ್ತು ವಿದ್ಯಾರ್ಥಿಗಳ ಬಗ್ಗೆ ಅಸಡ್ಡೆ ತೋರುವ ನಿರ್ವಾಹಕರು ಮತ್ತು ಚಾಲಕರಿಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿ ಹೇಳಿ ಎಲ್ಲಾ ಬಸ್‌ಗಳಲ್ಲೂ ವಿದ್ಯಾರ್ಥಿಗಳು ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಮುಖ್ಯ ಮಾರ್ಗಗಳಾದ ಚನ್ನರಾಯಪಟ್ಟಣ – ಹಾಸನ, ಹೊಳೆನರಸೀಪುರ – ಹಾಸನ, ಸಕಲೇಶಪುರ – ಹಾಸನ, ಅರಕಲಗೂಡು – ಹಾಸನ ಮಾರ್ಗಗಳಲ್ಲಿ ಬಸ್‌ಪಾಸ್ ವಿದ್ಯಾರ್ಥಿ ಗಳು ಸಂಚರಿಸಲು ತೊಂದರೆಯಾಗುತ್ತಿದೆ ಎಂದು ದೂರಿರುವ ವಿದ್ಯಾರ್ಥಿಗಳು ಬಸ್ ನಿರ್ವಾಹಕರು, ಚಾಲಕರು ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಬಸ್ ಹತ್ತಿಸಲು ತೊಂದರೆ ಮುಂದುವರಿಸಿದರೆ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾದೀತು ಎಂದೂ ಎಚ್ಚರಿಕೆ ನೀಡಿದ್ದಾರೆ.
ನಿಲ್ದಾಣಾಧಿಕಾರಿಯವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಐಡಿಎಸ್‌ಒ ಜಿಲ್ಲಾ ಸಂಚಾಲಕ ಸುಭಾಷ್, ವಿದ್ಯಾರ್ಥಿಗಳ ಮುಖಂಡರಾದ ಅನಿಕೇತ್, ಶರತ್, ಚಂದನ, ಸಂಪ್‌ಕುಮಾರ್, ಹರ್ಷಿತ್, ಕಾವ್ಯ ಮತ್ತಿತತರರು ಹಾಜರಿದ್ದರು.