Advertisement

ಅಗತ್ಯ ದಾಖಲೆ ಸಲ್ಲಿಸಿದರೆ ಒಂದೇ ದಿನದಲ್ಲಿ ಪಾಸ್‌ ಲಭ್ಯ

11:31 AM Apr 12, 2020 | mahesh |

ವಿನಯ್, ಹಿರಿಯೂರು
ನನ್ನ ತಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ಶಂಕರ ಆಸ್ಪತ್ರೆಯಲ್ಲಿ ಅವರಿಗೆ ಕಿಮೋಥೆರಪಿ ಕೊಡಿಸಲು, ತಿಂಗಳಿಗೊಮ್ಮೆ ಹಿರಿಯೂರಿನಿಂದ ಹೋಗಬೇಕು. ಈಗ ಏ.16ರಂದು ಈ ಚಿಕಿತ್ಸೆ ಕೊಡಿಸಬೇಕಿದೆ. ಕನಿಷ್ಠ 1 ದಿನ ಮೊದಲೇ ನಾವು ಅಲ್ಲಿರಬೇಕು. ದಾರಿ ತೋರದಂತಾಗಿದೆ…
ಇದಕ್ಕಾಗಿ ನೀವು ಅನಗತ್ಯ ಗಾಬರಿಪಟ್ಟುಕೊಳ್ಳಬೇಡಿ. ಕಾಯಿಲೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಯಾವ ತಾರೀಖೀನಂದು ಕಿಮೋಥೆರಪಿಗೆ ಒಳಪಡಬೇಕು ಎನ್ನುವ ದಾಖಲೆಗಳನ್ನು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಿದರೆ, ಇಲ್ಲಿಂದ ನಿಮಗೆ ಬೆಂಗಳೂರು ಅಥವಾ ಯಾವುದೇ ಆಸ್ಪತ್ರೆಗೆ ತೆರಳಲು ಪಾಸ್‌ ನೀಡುತ್ತೇವೆ. ಈಗಾಗಲೇ ಪ್ರತಿದಿನವೂ ಮೂರ್ನಾಲ್ಕು ಜನ ಈ ರೀತಿಯ ಸಮಸ್ಯೆಗಳಿಗೆ ಪಾಸ್‌ ಪಡೆಯುತ್ತಿಲ್ಲಾರೆ. ಡೀಸಿ ಕಚೇರಿಗೆ ಬಂದು ಅರ್ಜಿ ಸಲ್ಲಿಸಿದರೆ, ಒಂದೇ ದಿನದಲ್ಲಿ ಪಾಸ್‌ ವ್ಯವಸ್ಥೆ ಆಗುತ್ತದೆ.
●ಆರ್‌. ವಿನೋತ್‌ ಪ್ರಿಯಾ, ಚಿತ್ರದುರ್ಗ ಜಿಲ್ಲಾಧಿಕಾರಿ

Advertisement

ಸಂತೋಷ್‌ ಜಾಬೀನ್‌, ಸುಲೇಪೇಟ
ಲಾಕ್‌ಡೌನ್‌ನಿಂದಾಗಿ ನಾಲ್ಕು ಗೋಡೆಗಳ ನಡುವೆ, ಕುಳಿತು ಮನಸ್ಸು ಜಡ್ಡುಗಟ್ಟಿದೆ. ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದ್ದೇನೆ. ಯಾವುದಕ್ಕೂ ಉತ್ಸಾಹ ಇಲ್ಲದಂತಾಗಿದೆ. ಚೈತನ್ಯವಾಗಿರಲು ಏನು ಮಾಡಬೇಕು?
ಕೋವಿಡ್ -19 ದಾಳಿಯಿಂದಾಗಿ ಇಂದು ಎಲ್ಲರ ದಿನಚರಿಯೂ ಅಸ್ತವ್ಯಸ್ತವಾಗಿದೆ. ನಮ್ಮ ಮನಸ್ಸಿಗೆ ಸರಿಯಾದಂಥ ಪ್ಲ್ರಾನ್‌ ಇದ್ದರೆ, ಅದಕ್ಕೆ ಸಮಾಧಾನ ಸಿಗುತ್ತದೆ. ಇಂದು ಇಂಥ ಕೆಲಸ ಮುಗಿಸ್ತೀನಿ, ಇಂಥ ಟೈಮಲ್ಲಿ ಹೀಗಿರ್ತೀನಿ ಎನ್ನುವ ಟಾಸ್ಕ್ ಅದಕ್ಕೆ ಕೊಟ್ಟುಬಿಡಿ. ಹೊರಗಿನ ಲೋಕ ಕಾಣಿಸದ ಕಾರಣಕ್ಕಾಗಿ ಆತ್ಮವಿಶ್ವಾಸದ ಕೊರತೆಯಾಗುತ್ತಿದೆ. ಬೆಳಗ್ಗೆ ಎದ್ದು ಯೋಗ, ಅಡುಗೆಗೆ ಸಹಾಯ ಮಾಡೋದು, ಮನೆಕೆಲಸ, ಕೈದೋಟದ ಪೋಷಣೆ, ಪತ್ರಿಕೆ ಓದೋದು, ಆಟಗಳು- ಇತ್ಯಾದಿ ಚಟುವಟಿಕೆಗಳಲ್ಲಿ ಮುಳುಗಿ. ಈಗಂತೂ ಇಂಟರ್ನೆಟ್‌ನ ಸೌಲಭ್ಯ ಅತಿದೊಡ್ಡ ಲಾಭ. ಅಲ್ಲಿಂದ ಹೊಸ ವಿಚಾರಗಳನ್ನು ಕಲಿಯಿರಿ. ಸ್ವಲ್ಪ ದಿನಗಳಲ್ಲಿ ಇದೇ ನಿಮ್ಮ ಲೈಫ್ಸ್ಟೈಲ್‌ ಆಗಿ ಮಾರ್ಪಾಡಾಗುತ್ತೆ. ನೆನಪಿರಲಿ, ಎಲ್ಲ ಸರಿಹೋದಂಥ ದಿನಗಳಲ್ಲಿ ಈ ರೀತಿ ಚಿಂತೆ ಮಾಡಿದವರು ಹಿಂದೆ ಬೀಳುತ್ತಾರೆ. ಈ ಅವಧಿಯಲ್ಲಿ ರಿಫ್ರೆಶ್‌ ಆದವರು ಮುಂದೆ ಸಾಗುತ್ತಾರೆ.
●ಪ್ರೀತಿ ಪೈ, ಮನೋವೈದ್ಯೆ

ಶ್ರೀಕಾಂತ ಜಿ.ಕೆ., ಬೆಂಗಳೂರು
ನಾನೊಬ್ಬ ಸಾಮಾನ್ಯ ದಿನಸಿ ವ್ಯಾಪಾರಿ. ಈಗಾಗಲೇ ನಮ್ಮ ಉಗ್ರಾಣದಲ್ಲಿದ್ದ ಸಂಗ್ರಹವೆಲ್ಲ ಖಾಲಿಯಾಗಿದೆ. ವಸ್ತುಗಳ ಉತ್ಪಾದನೆ ನಿಂತಿದೆ. ಅಂಗಡಿಗೆ ಬಂದ ಗ್ರಾಹಕರು ವಾಪಸ್‌ ಹೋಗುತ್ತಿದ್ದಾರೆ. ನನ್ನ ಮುಂದಿರುವ ದಾರಿಗಳೇನು?
ಇದೀಗಾಗಲೇ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸಮಸ್ಯೆ. ಬಹಳಷ್ಟು ಕಡೆಗಳಲ್ಲಿ ವಸ್ತುಗಳು ಖಾಲಿಯಾಗಿವೆ ಹಾಗೂ ಸಮರ್ಪಕವಾಗಿ ಅವುಗಳ ಪೂರೈಕೆ ನಡೆಯುತ್ತಿಲ್ಲ. ಕೊರೊನಾ ನಿಮಿತ್ತ ಈ ಲಾಕ್‌ಡೌನ್‌ ಸರಕಾರಿ ನಿಯಂತ್ರಣದಲ್ಲಿ ಇರುವ ಕಾರಣ, ನೀವು ಮತ್ತು ಇತರ ವರ್ತಕರು ಈ ಬಗ್ಗೆ ದೂರು ನೀಡಬೇಕು. ಗ್ರಾಹಕರೂ
ಫೋನ್‌ ಮಾಡಿ ದೂರು ನೀಡಿದರೆ ಉತ್ತಮ. ದಿನಪತ್ರಿಕೆ, ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಚಾರ ಅಗತ್ಯ. ಈಗಾಗಲೇ ಕೇಂದ್ರ ಸರಕಾರ ಕೃಷಿ ಉತ್ಪನ್ನ ಮತ್ತು ಜೀವನಾವಶ್ಯಕ ವಸ್ತುಗಳ ಸಾಗಣೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಒಂದೆರಡು ದಿನಗಳಲ್ಲಿ ಅಗತ್ಯ ವಸ್ತುಗಳ ಸಾಗಣೆಯ ಬಗ್ಗೆ ಸಕಾರಾತ್ಮಕ ಪಾಲಿಸಿಯನ್ನು ಘೋಷಿಸುವ ನಿರೀಕ್ಷೆಯಿದೆ. ಇದು ಅನಿವಾರ್ಯವಾಗಿ ನಡೆಯತಕ್ಕ ಕೆಲಸ.
●ಜಯದೇವಪ್ರಸಾದ ಮೊಳೆಯಾರ, ಆರ್ಥಿಕ ಚಿಂತಕ

ಕಾವ್ಯಶ್ರೀ ಮಾಗನೂರ್‌, ಬಾಗಲಕೋಟೆ
ಕೋವಿಡ್ -19ದ ಈ ಲಾಕ್‌ಡೌನ್‌ಗಳು, ಆತಂಕಗಳು ಮೇ 31ರ ವರೆಗೆ ಮುಂದುವರಿದರೆ, ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ್ಯವೇನು?
ಕೋವಿಡ್ -19ದ ಈ ವಿಪತ್ತು ನಮ್ಮ ದೇಶಕ್ಕಷ್ಟೇ ಸೀಮಿತವಾಗಿಲ್ಲ. ಜಗತ್ತಿನ 198 ರಾಷ್ಟ್ರಗಳು, ಶಾಲಾ- ಕಾಲೇಜುಗಳನ್ನು ಮುಚ್ಚಿವೆ. ಅಂದಾಜು 157 ಕೋಟಿ ವಿದ್ಯಾರ್ಥಿಗಳು ಇದರಿಂದ ಒಂದಲ್ಲಾ ಒಂದು ರೀತಿ ಬಾಧಿತರಾಗಿದ್ದಾರೆ. ಅದರಂತೆ ನಮ್ಮಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೂ ತೊಂದರೆಯಾಗಿದೆ. ಪರೀಕ್ಷೆಯ ಅಂತರ
ಹೆಚ್ಚಾಗಿದ್ದೇ ಇದಕ್ಕೆ ಕಾರಣ. ನಾವು ಓದಿದ್ದು ಮರೆತು ಹೋಗುತ್ತೆ ಅನ್ನೋ ಭಯ ವಿದ್ಯಾರ್ಥಿಗಳಿಗಿದೆ. ಎಸ್ಸೆಸ್ಸೆಲ್ಸಿ ಮಕ್ಕಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಸುವುದಕ್ಕಿಂತ, ಆಯಾ ಶಾಲಾ ಹಂತಗಳಲ್ಲಿಯೇ ಪರೀಕ್ಷೆ ಮುಗಿಸಲು ಸರ್ಕಾರ ಅವಕಾಶ ನೀಡಬೇಕು. ಆಯಾ ಊರಿನ ಮಕ್ಕಳು ಅಲ್ಲೇ ಬರೆಯುವುದರಿಂದ ಆತಂಕಗಳು ಕಡಿಮೆಯಾಗುತ್ತವೆ. ಒಂದು ಕೊಠಡಿಯಲ್ಲಿ 10-12 ಮಕ್ಕಳು ಹಾಕಿದಾಗ, ಸಾಮಾಜಿಕ ಅಂತರ ಕಾಪಾಡಿದಂತಾಗುತ್ತೆ. ಅದುವರೆಗೆ ಆಯಾ ಶಾಲಾ ಶಿಕ್ಷಕರು, ವಾಟ್ಸಾಪ್‌ಗ್ಳಲ್ಲಿ ಗ್ರೂಪ್‌ ಮಾಡಿಕೊಂಡು, ಕ್ಲಾಸ್‌ ಮಾಡಿ, ಮಕ್ಕಳ ಸಂಶಯಗಳನ್ನು ಬಿಡಿಸುವ ಕೆಲಸ ಮಾಡಬೇಕು. ಪಿಯುಸಿಯ ತರಗತಿಗಳು ಆರಂಭಗೊಳ್ಳುವುದು ಜುಲೈ ನಂತರ ಆಗಿರುವುದರಿಂದ, ಈ ಬಗ್ಗೆ ಪೋಷಕರು ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.
●ನಿರಂಜನ ಆರಾಧ್ಯ, ಶಿಕ್ಷಣ ತಜ್ಞ

ಇಡೀ ದೇಶವೇ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಹಲವರಿಗೆ ವಿವಿಧ ರೀತಿಯ ಸಂದೇಹಗಳು, ಕಷ್ಟಗಳು ಎದುರಾಗುತ್ತವೆ. ಅದರ ಬಗ್ಗೆ ವಿವಿಧ ಕ್ಷೇತ್ರದ ತಜ್ಞರು ಉದಯವಾಣಿ ಮೂಲಕ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು ನಮಗೆ ವಾಟ್ಸ್‌ಅಪ್‌ ಮಾಡಿ. 8861196369 ಕಳುಹಿಸಬೇಕಾದ ವಾಟ್ಸ್‌ ಆ್ಯಪ್‌ ಸಂಖ್ಯೆ

Advertisement
Advertisement

Udayavani is now on Telegram. Click here to join our channel and stay updated with the latest news.

Next