Advertisement

ಪಶು ಸಂಜೀವಿನಿ: ದಕ್ಷಿಣ ಕನ್ನಡ ಜಿಲ್ಲೆಗೆ 9 ವಾಹನ 

10:59 PM Dec 04, 2022 | Team Udayavani |

ಬಂಟ್ವಾಳ: ಜಾನುವಾರುಗಳ ತುರ್ತು ಚಿಕಿತ್ಸೆಗಾಗಿ ರಾಜ್ಯ ಸರಕಾರವು ಪ್ರತೀ ತಾಲೂಕುಗಳಿಗೆ “ಪಶು ಸಂಜೀವಿನಿ ತುರ್ತು ಚಿಕಿತ್ಸಾ ವಾಹನ’ವನ್ನು ನೀಡಲು ಯೋಜಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಈಗಾಗಲೇ 9 ವಾಹನಗಳು ಆಗಮಿಸಿವೆ. ಉಡುಪಿ ಜಿಲ್ಲೆಗೆ ಇನ್ನಷ್ಟೇ ಆಗಮಿಸಬೇಕಿವೆ.

Advertisement

108 ಆ್ಯಂಬುಲೆನ್ಸ್‌ ಮಾದರಿಯಲ್ಲೇ ಈ ವಾಹನಗಳು ಕಾರ್ಯನಿರ್ವಹಿಸಲಿದ್ದು, 1962 ಸಂಖ್ಯೆಗೆ ಕರೆ ಮಾಡಿದಾಗ ತಾಲೂಕಿನ ವ್ಯಾಪ್ತಿಯಲ್ಲಿ ರೈತರ ಮನೆ ಬಾಗಿಲಿಗೇ ತೆರಳಿ ಚಿಕಿತ್ಸೆ ನೀಡಲಿವೆ. ಕೇಂದ್ರ ಪುರಸ್ಕೃತ ಯೋಜನೆ ಇದಾ ಗಿದ್ದು, ರಾಜ್ಯ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ವಾಹನದ ನಿರ್ವಹಣೆ ಮಾಡಲಿದೆ.

ಜಾನುವಾರುಗಳು ಕಾಯಿಲೆಗೆ ತುತ್ತಾ ದಾಗ ಪಶು ಆಸ್ಪತ್ರೆ/ಚಿಕಿತ್ಸಾ ಕೇಂದ್ರಕ್ಕೆ ಕರೆತರುವುದು ಕಷ್ಟವಾಗಿರುವುದರಿಂದ ಅವುಗಳು ಇರುವಲ್ಲಿಗೇ ತೆರಳಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಈ ಮೊಬೈಲ್‌ ಕ್ಲಿನಿಕ್‌ ವ್ಯವಸ್ಥೆಯನ್ನು ಸರಕಾರ ಜಾರಿಗೆ ತಂದಿದೆ. ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗೂ ಈ ವಾಹನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮೂವರು ಸಿಬಂದಿ:

ರಾಜ್ಯದ ಎಲ್ಲ 275 ತಾಲೂಕುಗಳಿಗೂ ಇಲಾ ಖೆಯು ಒಂದೊಂದು ವಾಹನ ನೀಡಲಿದ್ದು, ಪ್ರತೀ ವಾಹನಗಳಲ್ಲಿ ಒಬ್ಬರು ವೈದ್ಯರು, ಒಬ್ಬರು ಕಂಪೌಂಡರ್‌/ಇನ್‌ಸ್ಪೆಕ್ಟರ್‌ ಹಾಗೂ ಒಬ್ಬರು ಡ್ರೈವರ್‌ ಕಂ ಅಟೆಂಡರ್‌ ಸೇರಿ ಒಟ್ಟು ಮೂವರು ಸಿಬಂದಿ ಇರುತ್ತಾರೆ. ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಕೆಲಸ ಅವಧಿಯಾಗಿರುತ್ತದೆ. ವಾಹನಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ಸಿಬಂದಿಯ ನೇಮಕವಾಗಲಿದ್ದು, ಇದಕ್ಕಾಗಿ ಟೆಂಡರ್‌ ಕರೆಯಲಾಗಿದೆ. ಅದು ಅಂತಿಮಗೊಂಡ ಬಳಕವಷ್ಟೇ ಸಿಬಂದಿಯ ನೇಮಕವಾಗಬೇಕಿದೆ.

Advertisement

ಒಂದು ವಾಹನಕ್ಕೆ 17 ಲ.ರೂ.:

ದ.ಕ. ಜಿಲ್ಲೆಗೆ ತುಮಕೂರಿನಿಂದ ವಾಹನಗಳು ಬಂದಿದ್ದು, ಒಂದು ವಾಹನಕ್ಕೆ 17 ಲಕ್ಷ ರೂ. ನಿಗದಿ ಮಾಡಲಾಗಿದೆ. ಅದನ್ನು ಚಿಕಿತ್ಸೆಗೆ ಪೂರಕವಾಗಿ ವಿನ್ಯಾಸಗೊಳಿಸಿರುವುದಕ್ಕೆ ಹೆಚ್ಚುವರಿ ವೆಚ್ಚ ತಗಲಲಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ 4 ತಾಲೂಕುಗಳು ಸೇರಿದಂತೆ ಜಿಲ್ಲೆಗೆ ಒಟ್ಟು 9 ವಾಹನಗಳು ಬಂದಿದ್ದು, ಅವುಗಳ ಆರ್‌ಸಿ ಇನ್ನಷ್ಟೇ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳ ಹೆಸರಿಗೆ ನೋಂದಣಿಯಾಗಬೇಕಿದೆ.

ಜಿಲ್ಲೆಯ 5 ಹಳೆಯ ತಾಲೂಕುಗಳ ವಾಹನ:

ಗಳನ್ನು ಹಿಂದಿನ ಮೊಬೈಲ್‌ ವೆಹಿಕಲ್‌ನ ಡ್ರೈವರ್‌ಗಳನ್ನು ಹಾಕಿಕೊಂಡು ಚಾಲನೆ ಮಾಡುವುದಕ್ಕೆ ಅವಕಾಶವಿದ್ದು, ಹೊಸ ತಾಲೂಕುಗಳಾದ ಉಳ್ಳಾಲ, ಕಡಬ, ಮೂಲ್ಕಿ ಹಾಗೂ ಮೂಡುಬಿದಿರೆಗೆ ಸಂಬಂಧಪಟ್ಟ ಸಿಬಂದಿ ಆಗಮಿಸಿದ ಬಳಿಕವೇ ಕಾರ್ಯಾಚರಣೆಯ ಸ್ಥಿತಿಗೆ ಬರಲಿದೆ.

ದ.ಕ. ಜಿಲ್ಲೆಗೆ 9 ವಾಹನಗಳು ಬಂದಿದ್ದು, ಹಳೆಯ ತಾಲೂಕುಗಳ ವಾಹನಗಳು ಹಿಂದಿನ ಮೊಬೈಲ್‌ ವಾಹನದ ಚಾಲಕರ ಮೂಲಕ ತಾತ್ಕಾಲಿಕವಾಗಿ ಕಾರ್ಯಾಚರಿಸಲಿವೆ. ಆದರೆ ಹೊಸ ತಾಲೂಕುಗಳ ವಾಹನಗಳಿಗೆ ಹೊಸದಾಗಿ ಸಿಬಂದಿ ಆಗಮಿಸಿದ ಬಳಿಕವೇ ಕಾರ್ಯಾಚರಿಸಬೇಕಿದೆ.ಡಾ| ಅರುಣ್‌ಕುಮಾರ್‌ ಶೆಟ್ಟಿ ಎನ್‌.ಉಪನಿರ್ದೇಶಕ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ದ.ಕ.

ಉಡುಪಿ ಜಿಲ್ಲೆಯ ಹೊಸ ತಾಲೂಕುಗಳು ಸೇರಿ ಒಟ್ಟು 7 ತಾಲೂಕುಗಳಿಗೆ ಹಾಗೂ 1 ಪಾಲಿಕ್ಲಿನಿಕ್‌ ಸೇರಿ ಒಟ್ಟು 8 ವಾಹನಗಳು ನಿಗದಿಯಾಗಿದೆ. ಆದರೆ ಏಜೆನ್ಸಿ ನಿಗದಿಯಾಗದೆ ನಮ್ಮ ಜಿಲ್ಲೆಗೆ ತುರ್ತು ಚಿಕಿತ್ಸಾ ವಾಹನಗಳು ಬಂದಿಲ್ಲ. 6 ಬಳ್ಳಾರಿಯಲ್ಲಿ ಹಾಗೂ 2 ಬೆಂಗಳೂರಿನಲ್ಲಿ ಬಾಕಿಯಾಗಿವೆ.ಡಾ| ಶಂಕರ್‌ ಶೆಟ್ಟಿ, ಉಪನಿರ್ದೇಶಕ, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಉಡುಪಿ

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next