Advertisement

ನಿರೀಕ್ಷಿತ ಪ್ರಗತಿ ಕಾಣದ ಪಶ್ಚಿಮವಾಹಿನಿ ಯೋಜನೆ : ಅನುಷ್ಠಾನ ಹಂತದಲ್ಲೇ ಬಾಕಿ

10:17 AM Feb 15, 2020 | Hari Prasad |

ಉಡುಪಿ: ಕರಾವಳಿಯಲ್ಲಿ ಹೆಚ್ಚುತ್ತಿರುವ ಜಲಸಂಪನ್ಮೂಲ ಕೊರತೆ, ಬೇಸಗೆಯಲ್ಲಿ ಸಮುದ್ರ ತೀರದ ನದಿಗಳಲ್ಲಿ ಉಪ್ಪು ನೀರಿನ ಒರತೆಯಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಪಶ್ಚಿಮವಾಹಿನಿ ಯೋಜನೆ ಅನುಷ್ಠಾನಕ್ಕೆ ಬಂದು ಎರಡು ವರ್ಷಗಳಾದರೂ ಪೂರ್ಣವಾಗಿಲ್ಲ. ಅನುದಾನ ಲಭ್ಯತೆ ಆಧಾರದಲ್ಲಿ ಹಂತ ಹಂತವಾಗಿ ಕಾಮಗಾರಿ ನಡೆಯುತ್ತಿದ್ದು, ಈವರೆಗೆ ಕ್ರಮಿಸಿದ ಹಾದಿ ತೃಪ್ತಿಕರವಾಗಿಲ್ಲ.

Advertisement

ಯೋಜನೆಯಡಿ ಉಭಯ ಜಿಲ್ಲೆಗಳಲ್ಲಿ ಮೂರು ಹಂತಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಪ್ರಗತಿಯಲ್ಲಿದೆ. ದ.ಕ.ದಲ್ಲಿ 202 ಮತ್ತು ಉಡುಪಿಯಲ್ಲಿ 408 ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 2017-18ರಲ್ಲಿ ಸರಕಾರ ಯೋಜನೆ ರೂಪಿಸಿತ್ತು.
ಉಡುಪಿಯಲ್ಲಿ ಪ್ರಥಮ ಹಂತದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ 14 ಅಣೆಕಟ್ಟುಗಳ ನಿರ್ಮಾಣಕ್ಕೆ ಮಂಜೂರಾತಿ ದೊರ ಕಿದೆ. 52.60 ಕೋ.ರೂ. ವೆಚ್ಚದಲ್ಲಿ ಇವು ನಿರ್ಮಾಣವಾಗುತ್ತಿದ್ದು, 14 ಕಡೆ ಪ್ರಗತಿಯ ಹಂತದಲ್ಲಿವೆ.

3 ಕಡೆ ಅಂತಿಮ ಹಂತಕ್ಕೆ ತಲುಪಿದೆ. 6 ಕಡೆ ಮಂಜೂರಾತಿ ಸಿಗಲು ಬಾಕಿಯಿದೆ. ದ.ಕ.ದ 11 ಕಡೆಗಳಲ್ಲಿ ನಿರ್ಮಾಣಕ್ಕೆ 265.25 ಕೋ.ರೂ. ವೆಚ್ಚ ದಲ್ಲಿ ಮಂಜೂರಾತಿ ದೊರಕಿದ್ದು, ಪ್ರಗತಿ ಹಂತದಲ್ಲಿದೆ. ಮೂಡುಬಿದಿರೆಯ ನಿಡ್ಡೋಡಿಯಲ್ಲಿ ಮಾತ್ರ ಪೂರ್ಣಗೊಂಡಿದೆ. ಕಿಂಡಿ ಅಣೆಕಟ್ಟು ನಿರ್ಮಾಣ, ಪುನರ್‌ ನಿರ್ಮಾಣ ಮತ್ತು ವಿಯರ್‌ ನಿರ್ಮಾಣ ಸೇರಿರುವ ಯೋಜನೆಯಿದು.


ಯೋಜನೆಯ ಉದ್ದೇಶ

ಪಶ್ಚಿಮಾಭಿಮುಖವಾಗಿ ಹರಿದು ಅರಬಿ ಸಮುದ್ರ ಸೇರುವ ನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವುದು ಯೋಜನೆಯ ಉದ್ದೇಶ. 2017-18ರ ಬಜೆಟ್‌ನಲ್ಲಿ ಇದನ್ನು ಘೋಷಿಸಲಾಗಿತ್ತು. ಕೃಷಿ ಮತ್ತು ಕುಡಿಯುವ ಉದ್ದೇಶಗಳಿಗೆ ನೀರು ಒದಗಿಸುವ ಜತೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದೂ ಉದ್ದೇಶಗಳಲ್ಲಿ ಸೇರಿದೆ. ಉಪ್ಪು ನೀರು ತಡೆ ಅಣೆಕಟ್ಟುಗಳ ನಿರ್ಮಾಣದಿಂದ ಸಿಹಿ ನೀರಿನೊಂದಿಗಿನ ಲವಣಯುಕ್ತ ನೀರು ಸೇರುವುದನ್ನು ತಪ್ಪಿಸಬಹುದು. ಕಿಂಡಿ ಅಣೆಕಟ್ಟುಗಳಿಗೆ ಸೇತುವೆ ನಿರ್ಮಿಸುವುದರಿಂದ ರಸ್ತೆ ಸಂಪರ್ಕಕ್ಕೂ ಅನುಕೂಲಕರ.

ಸಣ್ಣ  ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ವೇಳೆ ಪಶ್ಚಿಮವಾಹಿನಿ ಯೋಜನೆಗೆ ಸಂಬಂಧಿಸಿ ಬಾಕಿ ಇರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮತ್ತೂಂದು ಬಾರಿ ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದು ತ್ವರಿತ ಕಾಮಗಾರಿಗೆ ಸೂಚಿಸುತ್ತೇನೆ.
 -ಜಿ. ಜಗದೀಶ್‌, ಜಿಲ್ಲಾಧಿಕಾರಿ, ಉಡುಪಿ

Advertisement

ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಪಶ್ಚಿಮವಾಹಿನಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಯಾವ ಹಂತಕ್ಕೆ ತಲುಪಿದೆ ಅನ್ನುವ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ಮಾಹಿತಿ ತರಿಸಿಕೊಂಡು ಯೋಜನೆ ಹಿಂದುಳಿಯಲು ಕಾರಣ ಕಂಡುಕೊಂಡು ವೇಗಕ್ಕೆ ಪ್ರಯತ್ನಿಸಲಾಗುವುದು.
 -ಎಂ.ಜೆ. ರೂಪಾ, ಎಡಿಸಿ, ದಕ್ಷಿಣ ಕನ್ನಡ

– ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next