ಹುಬ್ಬಳ್ಳಿ: ಸಾಮಾಜಿಕ ಉದ್ಯಮಶೀಲತೆ, ಕೃಷಿ, ಕೌಶಲ ಇನ್ನಿತರ ಕ್ಷೇತ್ರಗಳಲ್ಲಿ ಕ್ರಾಂತಿಕಾರ ಬದಲಾವಣೆ, ಸಾಧನೆಗೆ ಮುಂದಾಗಿರುವ ದೇಶಪಾಂಡೆ ಪ್ರತಿಷ್ಠಾನ ದೇಶದ ಎಲ್ಲ ರಾಜ್ಯಗಳಲ್ಲಿ ತನ್ನ ಕಾರ್ಯ ಆರಂಭಿಸುವಂತಾಗಲಿ ಎಂದು ಮಸ್ಟೆಕ್ ಕಂಪೆನಿಯ ಅಶಾಂಕ್ ದೇಸಾಯಿ ಅಭಿಪ್ರಾಯಪಟ್ಟರು.
ದೇಶಪಾಂಡೆ ಪ್ರತಿಷ್ಠಾನದ ಅಭಿವೃದ್ಧಿ ಸಂವಾದದ ಕೊನೆ ಗೋಷ್ಠಿ ಭವಿಷ್ಯದ ಕಲ್ಪನೆ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ದೇಶಪಾಂಡೆ ಪ್ರತಿಷ್ಠಾನದ ಪ್ರೇರಣೆ ಹಾಗೂ ಸಾಧನೆಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಿವೆ. ಇದು ಕೇವಲ ಮೂರ್‍ನಾಲ್ಕು ರಾಜ್ಯಗಳಿಗೆ ಸೀಮಿತವಾಗದೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ಕಡೆಗೂ ಸೇವೆ ಸಿಗುವಂತಾಗಲಿ.
ಈ ನಿಟ್ಟಿನಲ್ಲಿ ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಗಂಭೀರವಾಗಿ ಚಿಂತನೆ ನಡೆಸಲಿ ಎಂದರು. ಭಾರತದಲ್ಲಿ ಅನೇಕ ಎನ್‌ಜಿಒಗಳಿಗೆ ನಿಧಿ ಸಂಗ್ರಹ ಹೇಗೆ ಎಂಬುದು ಗೊತ್ತಿಲ್ಲ. ದೇಣಿಗೆ ಹಾಗೂ ಸಾಮಾಜಿಕ ಸೇವೆಯ ಲಾಭ ನಾಗರಿಕರಿಗೆ ತಲುಪಬೇಕು. ವಿಶ್ವಾಸಪೂರ್ಣ ವ್ಯವಸ್ಥೆ ರೂಪುಗೊಳ್ಳಬೇಕು.
ಈ ನಿಟ್ಟಿನಲ್ಲಿ ಸಂಘಟಿತ ಹಾಗೂ ತಂಡ ರೂಪದ ಕಾರ್ಯ ನಿರ್ವಹಣೆ ಸಂಸ್ಕೃತಿ ಹೆಚ್ಚಬೇಕಿದೆ ಎಂದರು. ಸನಿನ ಕಾರ್ಪೋರೆಟ್‌ನ ಸುಂದರ ಕಾಮತ್ ಮಾತನಾಡಿ, ಭಾರತದಲ್ಲಿ ಮುಂದಿನ 5-10 ವರ್ಷಗಳಲ್ಲಿ ಉದ್ಯೋಗದ ಪ್ರಮಾಣ ಹೆಚ್ಚಬೇಕಾಗಿದೆ. ಮುಖ್ಯವಾಗಿ ಕೃಷಿ, ಗ್ರಾಮೀಣ ಆರ್ಥಿಕತೆ ಹೆಚ್ಚಳಕ್ಕೆ ಕೊಡುಗೆ ನೀಡಬೇಕಿದ್ದು, ಸವಾಲುಗಳಿಗೆ ಪರಿಹಾರ ಯ°ತದ ಸ್ವಯಂ ವಿಶ್ವಾಸ ವೃದ್ಧಿಸಬೇಕಾಗಿದೆ ಎಂದರು.
ನೆಕ್ಸ್ಟ್ಇನ್‌ನ ರಾಜೀವ್ ಪ್ರಕಾಶ ಮಾತನಾಡಿ, ಭಾರತದ ಉದ್ಯಮ ಸಾಧನೆ ವಿಶ್ವಾಸ ಮೂಡಿಸುತ್ತಿದೆ. ಅಭಿವೃದ್ಧಿ ಸಂವಾದ ಇದಕ್ಕೆ ಪೂರಕವಾಗಿದೆ. ನೆಕ್ಸ್ಟ್ ಇನ್ ಉದ್ಯಮದ ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ನಿಟ್ಟಿನಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ನವೋದ್ಯಮ ನಿಧಿ, ಮಾರ್ಗದರ್ಶಕರು, ಪರಿಣಾಮಕಾರಿ ತಂತ್ರಜ್ಞಾನ ಬಳಕೆ ಬಗ್ಗೆ ಹೆಚ್ಚು ಚರ್ಚೆಯಾಗಲಿ ಎಂದರು.
ಕಾಕತೀಯ ಸ್ಯಾಂಡ್‌ಬಾಕ್ಸ್‌ನ ರಾಜು ರೆಡ್ಡಿ ಮಾತನಾಡಿ, ಭಾರತದಿಂದ ಜಾಗತಿಕ ಮಾರುಕಟ್ಟೆಗೆ ಉತ್ಪನ್ನಗಳನ್ನು ರವಾನಿಸುವ ಉದ್ಯಮಗಳಿಗೆ ನೆರವು ನೀಡುತ್ತಿದ್ದೇವೆ. ಸಾಮಾಜಿಕ ಸವಾಲುಗಳಿಗೆ ಪರಿಹಾರಕ್ಕೆ ಉದ್ಯಮ ಉತ್ತಮ ವೇದಿಕೆಯಾಗಿದೆ. ಯುವ ಉದ್ಯಮಿಗಳು ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಗುರಿ ಹೊಂದಬೇಕು. 1980ರ ದಶಕದಲ್ಲಿ ಚೀನಾ ಹಾಗೂ ಭಾರತದ ತಲಾ ಆದಾಯ ಹೆಚ್ಚು ಕಡಿಮೆ ಸಮಾನವಾಗಿತ್ತು.
ಆದರೆ ಅನಂತರದಲ್ಲಿ ಚೀನಾ ತೀವ್ರ ಆರ್ಥಿಕಾಭಿವೃದ್ಧಿ ವೇಗ ಪಡೆಯಿತು. ಭಾರತೀಯರಲ್ಲಿ ಸಹಿಷ್ಣತೆ ಉದಾರವಾಗಿದೆ. ನೋಟುಗಳ ಅಮಾನ್ಯದಲ್ಲೂ ತೊಂದರೆಯಾದರೂ ಯಾರೊಬ್ಬರೂ ತಾಳ್ಮೆ ಕಳೆದುಕೊಳ್ಳಲಿಲ್ಲ ಎಂದರು. ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಗೋಷ್ಠಿ ನಿರ್ವಹಿಸಿದರು.