ಸಾಮಾನ್ಯವಾಗಿ ಹೀರೋಗಳು ಅಂದ್ರೆ ತೆರೆಮೇಲೆ ಮಿಂಚುವುದಕ್ಕಷ್ಟೇ ಸೀಮಿತ. ಮಾಸ್ ಲುಕ್‌ನಲ್ಲಿ, ಖಡಕ್ ಡೈಲಾಗ್ಸ್‌ನಲ್ಲಿ ಪ್ರೇಕ್ಷಕರ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸ್ಟಾರ್ ನಟರಿಗೆ ಬರವಣಿಗೆ, ಸಾಹಿತ್ಯ, ಕಥೆ – ಕವಿತೆ ಕಡೆಗೆ ಒಲವು-ಆಸಕ್ತಿ ಅಷ್ಟಕ್ಕಷ್ಟೆ. ಇದು ನಮ್ಮ ಸ್ಟಾರ್ ಬಗ್ಗೆ ಜನಸಾಮಾನ್ಯರಲ್ಲಿ, ಚಿತ್ರರಂಗದಲ್ಲಿ ಇರುವ ಸಾಮಾನ್ಯ ಅಭಿಪ್ರಾಯ.
ಆದರೆ ಇಂಥ ಅಭಿಪ್ರಾಯಕ್ಕೆ ಅಪವಾದ ಎಂಬಂತೆ ಕೆಲವು ತಾರೆಯರು ತೆರೆಮರೆಯಲ್ಲಿ ಸಾಹಿತ್ಯಾಸಕ್ತರಾಗಿರುವ, ಸ್ವತಃ ಸಾಹಿತಿಗಳಾಗಿರುವ, ಒಂದಷ್ಟು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಉದಾಹರಣೆಗಳು ಅಪರೂಪಕ್ಕೊಮ್ಮೆ ಅಲ್ಲೊಂದು, ಇಲ್ಲೊಂದು ಸಿಗುತ್ತದೆ ಎನ್ನುವುದು ಸಮಾಧಾನಕರ ಸಂಗತಿ.
ಈಗ ಇದ್ದಕ್ಕಿದ್ದಂತೆ ಯಾಕೆ ಸ್ಟಾರ್‌ಗಳ ಸಾಹಿತ್ಯಾಸಕ್ತಿಯ ಬಗ್ಗೆ ಮಾತು ಅಂತೀರಾ? ಅದಕ್ಕೂ ಒಂದು ಕಾರಣವಿದೆ. ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ, ನಾಯಕ ನಟನಾಗಿ ಮಿಂಚಿ ಸೈ ಎನಿಸಿಕೊಂಡ ನಟ ಧನಂಜಯ್ ಈಗ, ತಾನು ಗೀತ ಸಾಹಿತ್ಯವನ್ನೂ ಬರೆಯಬಲ್ಲೆ ಎಂಬುದನ್ನು ತೋರಿಸಿದ್ದಾರೆ.
ಹೌದು, ನಟ ಧನಂಜಯ್ ಸದ್ಯ ಬಿಡುಗಡೆಗೆ ರೆಡಿಯಾಗಿರುವ ಹರಿಪ್ರಿಯಾ, ಸುಮಲತಾ ಅಂಬರೀಶ್ ಮುಖ್ಯಭೂಮಿಕೆಯಲ್ಲಿರುವ “ಡಾಟರ್ ಆಫ್ ಪಾರ್ವತಮ್ಮ’ ಚಿತ್ರದ ಹಾಡೊಂದಕ್ಕೆ ಸಾಹಿತ್ಯವನ್ನು ರಚಿಸಿದ್ದಾರೆ. “ಜೀವಕ್ಕಿಲ್ಲಿ ಜೀವಬೇಟೆ ಪಾಪಿ ಯಾರೋ ಇಲ್ಲಿ….’ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿಗೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದು, ಕಾರ್ತಿಕ್ ಚೆನ್ನೋಜಿ ರಾವ್, ನಾರಾಯಣ ಶರ್ಮ, ಮಿಧುನ್ ಮುಕುಂದನ್ ಮೂವರು ಈ ಹಾಡಿಗೆ ಧ್ವನಿಯಾಗಿದ್ದಾರೆ.
ಚಿತ್ರದ ಪ್ರೀ-ಕ್ಲೈಮ್ಯಾಕ್ಸ್‌ನಲ್ಲಿ ಬರುವ, ಚಿತ್ರದ ಸನ್ನಿವೇಶ ಮತ್ತು ಕಂಟೆಂಟ್ ಎರಡನ್ನೂ ಹೇಳುವ ಹಾಡು ಇದಾಗಿದ್ದು, ಇಂದು ಸಂಜೆ 5 ಗಂಟೆಗೆ “ಪಿಆರ್‌ಕೆ ಆಡಿಯೋ’ ಯು-ಟ್ಯೂಬ್‌ನಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಇನ್ನು ಚಿತ್ರದ ಹಾಡಿಗೆ ಧನಂಜಯ್ ಅವರಿಂದ ಸಾಹಿತ್ಯ ಬರೆಸಲು ಕಾರಣವನ್ನು ಬಿಚ್ಚಿಡುವ ನಿರ್ದೇಶಕ ಶಂಕರ್, “ಈ ಹಿಂದೆ ಧನಂಜಯ್ ಅಭಿನಯದ ಜೆಸ್ಸಿ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಅವರೊಂದಿಗೆ ಕೆಲಸ ಮಾಡುವಾಗ ಅವರ ಸಾಹಿತ್ಯದ ಆಸಕ್ತಿಯನ್ನು ಹತ್ತಿರದಿಂದ ಗಮನಿಸಿದ್ದೆ.
ಅವರು ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಸಾಕಷ್ಟು ಪುಸ್ತಕಗಳನ್ನು ಓದುತ್ತಿದ್ದರು. ಹಾಗಾಗಿ ನಮ್ಮ ಚಿತ್ರದಲ್ಲಿ ಹಾಡು ಬರೆಸುವ ಯೋಚನೆ ಬಂದು. ನಾವು ಕೇಳಿದಾಗ ಅವರೂ ಕೂಡ ಖುಷಿಯಿಂದ ಬರೆಯಲು ಒಪ್ಪಿಕೊಂಡರು. ಅಂತಿಮವಾಗಿ ನಾವಂದುಕೊಂಡಿದ್ದಕ್ಕಿಂತ ಚೆನ್ನಾಗಿ ಹಾಡನ್ನು ಬರೆದಿದ್ದಾರೆ’ ಎನ್ನುತ್ತಾರೆ.
ಒಟ್ಟಾರೆ ಧನಂಜಯ್ ಬರೆದಿರುವ ಹಾಡು ಹೇಗಿದೆ ಎಂಬ ಕುತೂಹಕ್ಕೆ ಇಂದು ಸಂಜೆ ವೇಳೆಗೆ ತೆರೆ ಬೀಳಲಿದ್ದು, ಧನಂಜಯ್ ಹಾಡು ಎಷ್ಟರ ಮಟ್ಟಿಗೆ ಕೇಳುಗರ ತಲೆದೂಗಿಸುತ್ತದೆ, ಕೇಳುಗರು ಎಷ್ಟು ಮಾರ್ಕ್ಸ್ ಕೊಡುತ್ತಾರೆ ಅನ್ನೋದು ಗೊತ್ತಾಗಲಿದೆ. ಅಂದಹಾಗೆ, ಚಿತ್ರ ಮೇ 24 ರಂದು ತೆರೆಕಾಣುತ್ತಿದೆ.