Advertisement

ರಂಗಾಯಣದ ಪರ್ವಕ್ಕೆ ಮನಸೋತ ಪ್ರೇಕ್ಷಕರು

12:46 PM Mar 13, 2021 | Team Udayavani |

ಮೈಸೂರು: ರಂಗಾಸಕ್ತರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಪರ್ವ ನಾಟಕ ನಗರದ ಕಲಾಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿತು.

Advertisement

ಮೈಸೂರು ರಂಗಾಯಣ ವತಿಯಿಂದ ಕಲಾ ಮಂದಿರದಲ್ಲಿ ಶುಕ್ರವಾರ ಬೆಳಗ್ಗೆ ಏರ್ಪಡಿಸಿದ್ದಖ್ಯಾತ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರ ಕಾದಂಬರಿಪರ್ವ ಆಧಾರಿತ ಪರ್ವ ನಾಟಕ ಪ್ರದರ್ಶನಕ್ಕೆ ಸಾಹಿತಿ ಎಸ್‌.ಎಲ್‌.ಭೈರಪ್ಪ ಚಾಲನೆ ನೀಡಿ, ಸಂಜೆ  6.30ರವರೆಗೂ ನಾಟಕವನ್ನು ವೀಕ್ಷಿಸಿದರು. ಬೃಹತ್‌ ಕಾದಂಬರಿಯನ್ನು ರಂಗರೂಪಗೊಳಿಸಿ, ನಾಟಕವನ್ನಾಗಿ ಮಾಡಿರುವುದು ಮೈಸೂರು ರಂಗಾ ಯಣಕ್ಕೆ ಒಂದು ಮೈಲಿಗಲ್ಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಕಲಾಮಂದಿರಕ್ಕೆ ಆಗಮಿಸಿ ನಾಟಕ ವೀಕ್ಷಿಸಿದರು. ನಾಟಕ ವೀಕ್ಷಣೆಗೆ ಇದ್ದ 850 ಸೀಟು ಗಳು ಭರ್ತಿಯಾಗಿದ್ದು ವಿಶೇಷ.

ಒಟ್ಟಾರೆ 10 ನಿಮಿಷದ 3 ಚಹಾ ವಿರಾಮ ಹಾಗೂ ಅರ್ಧ ಗಂಟೆಯ ಒಂದು ಊಟದ ವಿರಾಮದೊಂದಿಗೆ ಸಂಜೆ 7.50 ರವರೆಗೂ ನಡೆದ ನಾಟಕ ಪ್ರೇಕ್ಷಕರನ್ನು ಕೊನೆಯವರೆಗೂ ತನ್ನಲ್ಲಿ ಹಿಡಿದಿಟ್ಟುಕೊಳ್ಳುವಲ್ಲಿ ಸಫ‌ಲವಾಗಿದ್ದಲ್ಲದೇ, ಭಾರೀ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರ ಮನೋಜ್ಞ ಅಭಿನಯಕ್ಕೆ ಪ್ರೇಕ್ಷಕರು ಮನಸೋತು ಕರತಾಡನ ಮಾಡುವ ಮೂಲಕ ಕಲಾವಿದರನ್ನು ಮತ್ತಷ್ಟು ಪ್ರೋತ್ಸಾಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಂಡುಬಂದಿತು.

ಅಂತಾರಾಷ್ಟ್ರೀಯ ವಸ್ತ್ರವಿನ್ಯಾಸಕಾರ ಪ್ರಸಾದ್‌ ಬಿದ್ದಪ್ಪ ಅವರ ವಸ್ತ್ರ ವಿನ್ಯಾಸ, ವಿನ್ಯಾಸಕಿ ಸಂಕೀರ್ತಿಅವರ ವಸ್ತ್ರಪರಿಕರ ಮತ್ತು ಆಭರಣಗಳು, ಎಚ್‌.ಕೆ.ದ್ವಾರಾಕಾನಾಥ್‌ ಅವರ ರಂಗ ವಿನ್ಯಾಸ, ರವಿಮೂರೂರು ಅವರ ಸಂಗೀತ ನಿದೇರ್ಶನ ನಾಟಕಕ್ಕೆ ಮತ್ತಷ್ಟು ಮೆರುಗು ನೀಡಿತ್ತು. ರಂಗಾಯಣದ 12 ಹಿರಿಯ ಕಲಾವಿ ದರು, 25 ಹವ್ಯಾಸಿ ಕಲಾವಿದರುಹಾಗೂ 10 ಮಂದಿ ತಂತ್ರಜ್ಞರ ತಂಡ ನಾಟಕದಲ್ಲಿದ್ದಾರೆ. ಸಾಹಿತಿ ಪ್ರಧಾನ ಗರುದತ್‌, ನಟಿ ಸುಧಾ ಬೆಳವಾಡಿ, ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ರಂಗಾ ಯಣದ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರು ನಾಟಕ ವೀಕ್ಷಿಸಿದರು.

ಸಭಾಂಗಣ ಭರ್ತಿ: ನಾಟಕ ಪ್ರದರ್ಶನಕ್ಕೂ ಮುನ್ನ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಭೂಮಿಗೀತದಲ್ಲಿರುವಷ್ಟು ಅಚ್ಚುಕಟ್ಟಾದ ತಾಂತ್ರಿಕ ವ್ಯವಸ್ಥೆ ಕಲಾಮಂದಿರದಲ್ಲಿ ಇಲ್ಲ. ಹೆಚ್ಚು ಜನರು ಕೂರಲು ಅವಕಾಶವಾಗಲೆಂದುಕಲಾ ಮಂದಿರದಲ್ಲಿ ಮೊದಲ ಮೂರು ವಿಶೇಷ ಪ್ರದರ್ಶನವನ್ನು ಇಲ್ಲಿ ಏರ್ಪಡಿಸಿದ್ದೇವೆ. ಬೆಂಗಳೂರು, ಕೊಡಗು ಹಾಗೂ ವಿವಿಧ ಭಾಗಗಳಿಂದ ರಂಗಾಸಕ್ತರು ಆಗಮಿಸಿದ್ದು, ನಿರೀಕ್ಷೆಯಂತೆ ಸಭಾಂಗಣ ಭರ್ತಿಯಾಗಿದೆ. ನಮ್ಮ ಆರು ತಿಂಗಳ ಪ್ರಯತ್ನ ರಂಗದ ಮೇಲೆ ಬರುತ್ತಿದ್ದು, ಇದು ರಂಗಾಯಣಕ್ಕೆ ಹೊಸ ಮೈಲಿಗಲ್ಲು ಎಂದು ಹೇಳಿದರು.

Advertisement

ನೋಡುಗರಿಗೆ ಏಳೂವರೆ ಗಂಟೆ ಅವಧಿ ದೀರ್ಘ‌ ಎನಿಸದು: ಭೈರಪ್ಪ  :  ನಾಟಕದ ಮೊದಲನೆಯ ಭಾಗವಾದ “ಆದಿಪರ್ವ’ ವೀಕ್ಷಿಸಿದ ಬಳಿಕ ಮಾತನಾಡಿದ ಎಸ್‌. ಎಲ್‌.ಭೈರಪ್ಪ, ನನಗೆ ನಾಟಕ ನೋಡಿ ಬಹಳ ಸಂಸತವಾಗಿದೆ. ನನ್ನ ಮನಸ್ಸಿನಲ್ಲಿದ್ದ ಕಲ್ಪನೆಗಳನ್ನು ಯಥಾವತ್ತು ರಂಗದ ಮೇಲೆ ತರಲು ಸಾಧ್ಯವಾಗದಿದ್ದರೂ, ಕಾದಂಬರಿಯ ಮೂಲ ಆಶಯಕ್ಕೆ ಎಲ್ಲಿಯೂ ಧಕ್ಕೆ ಬಾರದಂತೆ ಅತ್ಯಂತ ಸುಂದರವಾಗಿ ಪ್ರಕಾಶ್‌ ಬೆಳವಾಡಿ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಕಲಾವಿದರ ನಟನೆಯೂ ನನಗೆ ಬಹಳ ಖುಷಿ ಕೊಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. “ಪರ್ವ’ ಕಾದಂಬರಿಯಲ್ಲಿ ನಾಟಕಕ್ಕೆ ಪೂರಕವಾಗುವ ಸಾಕಷ್ಟು ಅಂಶಗಳಿವೆ. ಅದರೊಂದಿಗೆ ತಮ್ಮ ಬುದ್ಧಿವಂತಿಕೆ, ಕಲಾ ನೈಪುಣ್ಯತೆ ಬಳಸಿ ತಂಡ ಉತ್ತಮ ಪ್ರಯತ್ನ ಮಾಡಿದೆ. ನಾಟಕದಲ್ಲಿ ನೋಡುವಂತಹ ಅಂಶಗಳು ಸಾಕಷ್ಟಿದ್ದು, ನೋಡುಗರಿಗೆ ಏಳೂವರೆ ಗಂಟೆಯ ಅವಧಿ ದೀರ್ಘ‌ ಎನಿಸುವುದಿಲ್ಲ ಎಂದರು.

25ರಿಂದ ಪರ್ವ ಪ್ರತ್ಯೇಕ ಸಂಚಿಕೆ ಪ್ರದರ್ಶನ :

ರಂಗಾಯಣದ ಭೂಮಿಗೀತದಲ್ಲಿ ಮಾ.25ರಿಂದ ಮೇ 30ರವರೆಗೆ ಪ್ರತಿ ಗುರುವಾರ, ಶುಕ್ರವಾರ ಹಾಗೂ ಶನಿವಾರ ಸಂಜೆ 6.30ಕ್ಕೆ ಪರ್ವ ರಂಗಪ್ರಸ್ತುತಿಯ 2.5 ಗಂಟೆ ಅವಧಿಯ ಒಂದೊಂದು ಸಂಚಿಕೆಗಳು ಪ್ರದರ್ಶನಗೊಳ್ಳಲಿವೆ. ಈ ಮೂರು ಸಂಚಿಕೆಗಳಿಗೆಆದಿ ಪರ್ವ, ಯುದ್ಧ ಪರ್ವ ಹಾಗೂ ನಿಯೋಗ ಪರ್ವ ಎಂದು ಹೆಸರಿಡಲಾಗಿದೆ. ಪ್ರತಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 6.30ರವರೆಗೂ ಸಂಪೂರ್ಣ ನಾಟಕಪ್ರದರ್ಶನಗೊಳ್ಳಲಿದೆ. ಸಂಚಿಕೆಗಳ ಪ್ರದರ್ಶನಕ್ಕೆ 100 ರೂ., ಭಾನುವಾರದ ಪ್ರದರ್ಶನಕ್ಕೆ 250 ರೂ. ಟಿಕೆಟ್‌ ದರ ನಿಗದಿಪಡಿಸಲಾಗಿದೆ.

ಸಕಾರಾತ್ಮಕ ಪ್ರತಿಕ್ರಿಯೆ: ಬೆಳವಾಡಿ :

ನಾಟಕ ನೋಡಿದ ಜನರ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ. ನಾನು ಕುಳಿತು ನಾಟಕ ನೋಡಿಲ್ಲ. ಕಲಾಮಂದಿರದ ಹೊರಭಾಗದಲ್ಲಿ ಓಡಾಡುತ್ತಿದ್ದೆ. ಎಸ್‌.ಎಲ್‌.ಭೈರಪ್ಪ ಅವರಿಗೆ ನಮ್ಮ ಪ್ರಯತ್ನಖುಷಿ ಕೊಟ್ಟಿದೆ ಎಂಬುದೇ ಸಂತಸದಸಂಗತಿ. ನಮ್ಮ ತಾಂತ್ರಿಕ ವರ್ಗದವರು,ಕಲಾವಿದರು ಒಂದು ವಾರದಿಂದ ನಿದ್ದೆಗಟ್ಟು ಪರಿಶ್ರಮದಿಂದ ಸತತ ಅಭ್ಯಾಸ ಮಾಡಿ ಈಗ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದನ್ನು ಕಂಡು ಬಹಳ ಖುಷಿಯಾಗಿದೆ ಎಂದು ಪರ್ವ ನಾಟಕ ನಿರ್ದೇಶಕ ಪ್ರಕಾಶ್‌ ಬೆಳವಾಡಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next