ಪವನ್ ಒಡೆಯರ್ ನಿರ್ದೇಶನದ “ಗೋವಿಂದಾಯ ನಮಃ’ ಚಿತ್ರದ ಮೂಲಕ ಚಂದನವನಕ್ಕೆ ನಾಯಕ ನಟಿಯಾಗಿ ಪರಿಚಯವಾದ ಚೆಲುವೆ ಪಾರುಲ್ ಯಾದವ್. ಮೊದಲ ಚಿತ್ರದಲ್ಲೇ ಕನ್ನಡ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾದ ಪಾರುಲ್ ಯಾದವ್ ಇದೀಗ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ಹೌದು, ಹಿಂದಿಯ “ಕ್ವೀನ್’ ಚಿತ್ರವನ್ನು ದಕ್ಷಿಣ ಭಾರತದ ಭಾಷೆಗಳಿಗೆ ರಿಮೇಕ್ ಮಾಡುವ ಮೂಲಕ ಪಾರುಲ್ ನಿರ್ಮಾಪಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಹಿಂದಿಯ “ಕ್ವೀನ್’ ರಿಮೇಕ್ ಕನ್ನಡದಲ್ಲಿ “ಬಟರ್ ಫ್ಲೈ’ ಹೆಸರಿನಲ್ಲಿ ತೆರೆಗೆ ಬರುತ್ತಿದ್ದು, ಈ ಚಿತ್ರದಲ್ಲಿ ಸ್ವತಃ ಪಾರುಲ್ ಯಾದವ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ತೆಲುಗಿನಲ್ಲಿ ತಮನ್ನಾ ಭಾಟಿಯಾ, ಅಭಿನಯಿಸುತ್ತಿದ್ದರೆ ತಮಿಳು ಮತ್ತು ಮಲೆಯಾಳಂನಲ್ಲಿ ಕಾಜೋಲ್ ಅಗರವಾಲ್ ಈ ಚಿತ್ರಗಳ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸದ್ಯ ಕನ್ನಡದ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆ ಮಾಡಲು ಪಾರುಲ್ ಯಾದವ್ ತೀರ್ಮಾನಿಸಿದ್ದಾರೆ.
ಈ ಬಗ್ಗೆ ಮಾತನಾಡುವ ಪಾರುಲ್ ಯಾದವ್, ಸದ್ಯ ಸಿನಿಮಾದ ರಿಲೀಸ್‌ಗೆ ಬೇಕಾದ ಕೆಲಸಗಳಲ್ಲಿ ನಿರತರಾಗಿದ್ದೇವೆ. ಇನ್ನುಕನ್ನಡ ಮತ್ತು ಮಲಯಾಳಂ ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದ್ದು, ಉಳಿದಂತೆ ತಮಿಳು ಮತ್ತು ತೆಲುಗು ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ಗಾಗಿ ಕಾಯುತ್ತಿದ್ದೇವೆ. ಈ ಭಾಷೆಗಳ ಸರ್ಟಿಫಿಕೇಟ್ ಸಿಕ್ಕ ಕೂಡಲೇ ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಮಾಡುತ್ತೇವೆ’ ಎಂದು ಹೇಳಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ “ಕ್ವೀನ್’ ರಿಮೇಕ್ ರಿಲೀಸ್ ಆಗಿರಬೇಕಿತ್ತು. ಆದರೆ ಕೆಲ ತಾಂತ್ರಿಕ ಅಡ್ಡಿಗಳು, ಥಿಯೇಟರ್ ಪ್ರಾಬ್ಲಿಂ, ಅದಾದ ನಂತರ ಕೋವಿಡ್ 19 ಅಡ್ಡಿಯಿಂದಾಗಿ ಸಿನಿಮಾ ರಿಲೀಸ್ ತಡವಾಗುತ್ತಿದೆ ಅನ್ನೊದು ಪಾರುಲ್ ಮಾತು.
ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಮಾತನಾಡುವ ಪಾರುಲ್ ಯಾದವ್, ಈ ಸಿನಿಮಾ ರಿಲೀಸ್ ಆದ ನಂತರ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಹೊಸ ನಿರ್ಮಾಪಕರ ಜೊತೆಗೆ ಕೆಲಸ ಮಾಡಲಿದ್ದೇನೆ. ಅಲ್ಲದೆ ಈ ಸಿನಿಮಾಗಳ ಚಿತ್ರಗಳ ನಿರ್ಮಾಣದಲ್ಲಿ ಕೂಡ ನಾನು ಕೈ ಜೋಡಿಸುತ್ತಿದ್ದೇನೆ. ಅಷ್ಟೇ ಅಲ್ಲದೆ ನಾನು ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದೇನೆ’ ಎಂದಿದ್ದಾರೆ.
ಇದೊಂದು ಹಿರೋಯಿನ್ ಒರಿಯೆಂಟೆಡ್ ಸಿನಿಮಾವಾಗಿರಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತದೆ. ಸದ್ಯ ಸಿನಿಮಾದ ಸ್ಕ್ರಿಪ್ಟ್ ನನ್ನ ಕೈಯಲ್ಲಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎನ್ನುತ್ತಾರೆ ಪಾರುಲ್ ಯಾದವ್.