Advertisement

BJP: ಸಾಮಾಜಿಕ ಜಾಲತಾಣ ಬಳಕೆಗೆ ಬಿಜೆಪಿ ಒತ್ತು

11:14 PM Sep 10, 2023 | Team Udayavani |

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ, “ಶಂಖನಾದ’ ಅಭಿಯಾನಕ್ಕೆ ಚಾಲನೆ ನೀಡಿದೆ.

Advertisement

ದೇಶಾದ್ಯಂತ ಆರಂಭವಾಗಿರುವ ಈ ಅಭಿಯಾನಕ್ಕೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಶಂಖ ಊದುವ ಮೂಲಕ ಚಾಲನೆ ನೀಡಿದರು.
ಪಕ್ಷದ ಕಾರ್ಯಕರ್ತರಷ್ಟೇ ಅಲ್ಲದೆ, ಪಕ್ಷದ ಚಿಂತನೆಗಳೊಂದಿಗೆ ಹೆಜ್ಜೆ ಹಾಕುತ್ತಿರುವ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಅಂಥವರಿಗೆ ಪಕ್ಷದ ವಿಚಾರಗಳನ್ನು ಪರಿಣಾಮಕಾರಿಯಾಗಿ ತಿಳಿಸುವುದು ಮತ್ತು ಕೇಂದ್ರ ಸರಕಾರದ ಸಾಧನೆಗಳನ್ನು ಮನೆ-ಮನಗಳಿಗೆ ಮುಟ್ಟಿಸುವುದು ಅಭಿಯಾನದ ಮುಖ್ಯ ಉದ್ದೇಶ.

ಜಾಗೃತಿ ಸಮಾವೇಶಗಳ ಆಯೋಜನೆ
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಸಾಮಾಜಿಕ ಮಾಧ್ಯಮ ಸಮಿತಿ ರಚಿಸಿ, ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಈಗ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್‌, ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಮ್‌ ಮೂಲಕ ಹೆಚ್ಚು ಜನರನ್ನು ತಲುಪುವುದು ಇದರ ಧ್ಯೇಯವಾಗಿದ್ದು, ಇದರೊಂದಿಗೆ ಬೂತ್‌ ಮಟ್ಟದಿಂದಲೂ ಇರುವ ವಾಟ್ಸ್‌ಆಪ್‌ ಗ್ರೂಪ್‌ಗ್ಳನ್ನು ಜಾಗೃತಗೊಳಿಸಿ ಮುಂದಿನ ಏಳೆಂಟು ತಿಂಗಳು ಸಕ್ರಿಯವಾಗಿ ಇರುವಂತೆ ನೋಡಿಕೊಳ್ಳಲು ಮುಂದಾಗಿದೆ.

ವಿನಾಕಾರಣ ಪ್ರಕರಣ ದಾಖಲು
ರಾಜ್ಯದ ಕಾಂಗ್ರೆಸ್‌ ಸರಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವವರ ವಿರುದ್ಧ ಅನಗತ್ಯ ಪ್ರಕರಣ ದಾಖಲಿಸಿ, ಪೊಲೀಸರ ಮೂಲಕ ಕಿರುಕುಳ ಕೊಡಲಾಗುತ್ತಿದೆ. ಇಂಥವರಿಗೆ ಕಾನೂನಿನ ನೆರವು ನೀಡುವುದು ಮತ್ತು ಧೈರ್ಯ ತುಂಬುವುದು “ಶಂಖನಾದ’ದ ಮತ್ತೂಂದು ಉದ್ದೇಶ. ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಅಭಿಯಾನ ಸಹಕಾರಿಯಾಗಲಿದೆ ಎಂದು ರಾಜ್ಯ ಬಿಜೆಪಿ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಸಂಚಾಲಕ ವಿಕಾಸ್‌ ಪುತ್ತೂರು ತಿಳಿಸಿದ್ದಾರೆ.

ಕಾಂಗ್ರೆಸ್‌ಗಿಂತ ಹೆಚ್ಚು ಅನುಯಾಯಿಗಳು
ಕಳೆದ ಚುನಾವಣೆ ಸಂದರ್ಭದಲ್ಲಿ ನಟಿ ರಮ್ಯಾ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸಮೂಹ ಮಾಧ್ಯಮ ವೇದಿಕೆಯಲ್ಲಿ ಪಕ್ಷವನ್ನು ಬೆಂಬಲಿಸುವವರ ಸಂಖ್ಯೆ ಕೊಂಚ ಏರಿಕೆ ಆಗಿತ್ತು. ಕೆಲವು ನಕಲಿ ಖಾತೆಗಳ ಮೂಲಕ ಅನುಯಾಯಿಗಳನ್ನು ಹೆಚ್ಚಿಸಿಕೊಂಡ ಆರೋಪವೂ ಇತ್ತು. ಚುನಾವಣೆ ಬಳಿಕ ರಮ್ಯಾ ನೇಪಥ್ಯಕ್ಕೆ ಸರಿದರು. ಇದಾದ ಬಳಿಕ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಫಾಲೋವರ್ಸ್‌ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಿಲ್ಲ. ಬಿಜೆಪಿ ತನ್ನ ಬೆಂಬಲಿಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದು, ಲೋಕಸಭೆ ಚುನಾವಣೆ ವೇಳೆಗೆ ಈ ಪ್ರಮಾಣವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಗುರಿ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next