ರಾಜಸ್ಥಾನದಲ್ಲಿ ಪಕ್ಷದ ಎಲ್ಲ ಹಂತದ ನಾಯಕರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಆಯಾ ಪ್ರದೇಶ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರೊಂದಿಗೆ ಚರ್ಚಿಸಿ ಅಲ್ಲಿನ ಸ್ಥಿತಿಗತಿ ಬಗ್ಗೆ ಅಭಿಪ್ರಾಯ ಸಂಗ್ರಹದೊಂದಿಗೆ ಗೆಲುವಿನ ಕಾರ್ಯತಂತ್ರ ರೂಪಿಸಲಾಗಿತ್ತು. ಕಾಂಗ್ರೆಸ್ ಸರಕಾರದ ಸುಳ್ಳು ಭರವಸೆ, ದುರಾಡಳಿತದಿಂದ ಬೇಸತ್ತ ಜನ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದಾರೆ. ರಾಜಸ್ಥಾನದ ಗೆಲುವು ಪಕ್ಷದ ಸಂಘಟಿತ ಯತ್ನ ಹಾಗೂ ಪರಿಶ್ರಮದ ಗೆಲುವಾಗಿದೆ. ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಮತ್ತಷ್ಟು ಶಕ್ತಿ ತುಂಬುವ ಜನತೆಯ ಸ್ಪಷ್ಟ ಜನಾದೇಶವೂ ಆಗಿದೆ.
ರಾಜಸ್ಥಾನದಲ್ಲಿ ಚುನಾವಣೆ ಉಸ್ತುವಾರಿಯಾಗಿ ಪಕ್ಷದ ಹೈಕಮಾಂಡ್ ನನ್ನನ್ನು ನೇಮಕ ಮಾಡಿತ್ತು. ತಾಲೂಕು-ಜಿಲ್ಲಾ ಮಟ್ಟದಿಂದ ಎಲ್ಲ ಹಂತದ ನಾಯಕರು, ಮುಖಂಡರು, ಮಾಜಿ ಮುಖ್ಯಮಂತ್ರಿ ವಸುಂಧರರಾಜೇ ಸಿಂಧಿಯಾ ಸೇರಿದಂತೆ ಪಕ್ಷದ ಮಾಜಿ ಸಚಿವರು, ಶಾಸಕರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಲ್ಲದೆ, ಪಕ್ಷದ ಗೆಲುವಿಗೆ ಅಗತ್ಯ ಅಂಶಗಳು-ಕಾರ್ಯತಂತ್ರ ಅಗತ್ಯವೋ ಆ ಬಗ್ಗೆ ಪ್ರಮುಖ ಕಾರ್ಯಕರ್ತರಿಂದಲೇ ಮಾಹಿತಿ ಸಂಗ್ರಹಿಸಿದ್ದೆವು. ಅದಕ್ಕೆ ಪೂರಕವಾಗಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂಬ ನೀಲನಕ್ಷೆಯೊಂದಿಗೆ ಚುನಾವಣಾ ಅಖಾಡಕ್ಕೆ ಧುಮಕಿದ್ದೆವು. ನಮ್ಮ ಯೋಜಿತ ಯತ್ನಗಳು ಫಲ ನೀಡಿವೆ, ರಾಜಸ್ಥಾನದ ಜನತೆ ಬಿಜೆಪಿ ಮೇಲೆ ವಿಶ್ವಾಸವಿಟ್ಟು ಮಹತ್ವದ ಬೆಂಬಲ ನೀಡಿದ್ದಾರೆ.
ಮುಖ್ಯವಾಗಿ ಪಕ್ಷ ಅಧಿಕಾರಕ್ಕೆ ಬಂದರೆ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳು, ಕೇಂದ್ರ ಸರಕಾರದ ಸಾಧನೆ ಕುರಿತು ಪರಿಣಾಮಕಾರಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ಹಲವು ರಾಷ್ಟ್ರೀಯ ನಾಯಕರು ಪ್ರಚಾರ ಕಾರ್ಯಕೈಗೊಂಡಿದ್ದು ಸಹ ಮತದಾರರ ಮೇಲೆ ತನ್ನದೇ ಆದ ಪ್ರಭಾವ ಬೀರುವಂತೆ ಮಾಡಿತು. ಜತೆಗೆ ಸಾಮಾಜಿಕ ಜಾಲತಾಣಗಳ ಮೂಲಕವೂ ಪರಿಣಾಮಕಾರಿ ಪ್ರಚಾರ ಕಾರ್ಯಕೈಗೊಂಡಿದ್ದು ಸಹ ಪಕ್ಷದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದೆ ಎನ್ನಬಹುದು.
ರಾಜಸ್ಥಾನದಲ್ಲಿ ನಾಯಕರಾದ ಜ್ಯೋತಿ ಮಿರ್ಧಾ, ವಿಶ್ವರೂಪ ಸಿಂಗ್ ಸೇರಿದಂತೆ ಹಲವು ನಾಯಕರು-ಮುಖಂಡರ ಬಿಜೆಪಿ ಸೇರ್ಪಡೆ ಪಕ್ಷದ ಗೆಲುವಿಗೆ ಮತ್ತಷ್ಟು ಬಲ ತುಂಬುವಂತೆ ಮಾಡಿತು. ಚುನಾವಣೆ ಗೆಲುವಿನ ನಿಟ್ಟಿನಲ್ಲಿ ಪಕ್ಷದ ಕಾರ್ಯತಂತ್ರ ಮತದಾರರ ಮನಮುಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿತು.
ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಂತೆ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಗೆಲುವು ತನ್ನದೇ ಎಂಬಂತೆ ಭಾವಿಸಿತ್ತು, ಬಿಂಬಿಸಿತ್ತು ಕೂಡ. ವಾಸ್ತವವೆಂದರೆ ಕಳೆದ ಬಾರಿ ವಿಧಾನಸಭೆ ಚುನಾವಣೆ ಸಂದರ್ಭ ನೀಡಿದ್ದ ಗ್ಯಾರಂಟಿ-ಭರವಸೆಗಳಲ್ಲಿ ಬಹುತೇಕವು ಅನುಷ್ಠಾನಗೊಂಡಿರಲಿಲ್ಲ.
ಜತೆಗೆ ರಾಜಸ್ಥಾನದ ನೆರೆಯ ರಾಜ್ಯ ಹಿಮಾಚಲಪ್ರದೇಶದಲ್ಲೂ ಕಾಂಗ್ರೆಸ್ ಚುನಾವಣೆ ವೇಳೆ ನೀಡಿದ್ದ ಗ್ಯಾರಂಟಿಗಳ ಅನುಷ್ಠಾನಕ್ಕೆ ವಿಫಲವಾಗಿರುವುದು, ಕರ್ನಾಟಕದಲ್ಲೂ ಗ್ಯಾರಂಟಿಗಳ ಅಸಮರ್ಪಕ ಜಾರಿ ಜತೆಗೆ ಮುಂಬರುವ ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿಗಳು ಕರ್ನಾಟಕದಲ್ಲಿ ಬಂದ್ ಆಗಲಿವೆ ಎಂಬ ಅನಿಸಿಕೆಯೂ ಗೆಲುವಿನ ಮೇಲೆ ಪರಿಣಾಮ ಬೀರಿದೆ.
ಅಷ್ಟಕ್ಕೂ ಜನರೂ ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಹಿಂದಿನ ವಿಧಾನಸಭೆ ಚುನಾವಣೆ ಸಂದರ್ಭ ನೀಡಿದ್ದ ಗ್ಯಾರಂಟಿಗಳನ್ನೇ ಐದು ವರ್ಷ ಅಧಿಕಾರ ನಡೆಸಿದರೂ ಅನುಷ್ಠಾನಗೊಳಿಸದೆ ಮತ್ತೂಮ್ಮೆ ಅಧಿಕಾರದ ಲಾಲಸೆಗಾಗಿ ನೀಡಿದ ಹೊಸ ಗ್ಯಾರಂಟಿಗಳನ್ನು ಮತದಾರರು ನಂಬಲಿಲ್ಲ ಎಂಬುದನ್ನು ಈ ಫಲಿತಾಂಶ ಸಾಕ್ಷೀಕರಿಸಿದೆ.
ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು, ರಾಜಸ್ಥಾನ ಚುನಾವಣಾ ಉಸ್ತುವಾರಿ