ಕಾರ್ಕಳ: ಹಿರಿಯರ ಹೋರಾಟ, ಪರಿಶ್ರಮದ ಫಲವಾಗಿ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. 1984ರಲ್ಲಿ ಎರಡು ಲೋಕಸಭಾ ಸ್ಥಾನ ಪಡೆದಿದ್ದ ಪಕ್ಷ ಈಗ 300ಕ್ಕಿಂತಲೂ ಅಧಿಕ ಸ್ಥಾನ ಪಡೆಯುತ್ತ ಸಾಗಿರುವುದು ಹೆಮ್ಮೆಯ ವಿಚಾರ.
ಇದಕ್ಕೆ ಹಿರಿಯರು ಹಾಕಿದ ಬುನಾದಿಯೇ ಕಾರಣ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.
ಅವರು ಸೋಮವಾರ ಬಿಜೆಪಿಯ ಹಿರಿಯ ಮುಖಂಡರಾದ ಬೋಳ ಪ್ರಭಾಕರ್ ಕಾಮತ್ ಅವರಿಗೆ 80 ಮತ್ತು ಎಂ.ಕೆ. ವಿಜಯಕುಮಾರ್ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಸಂಜೆ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಬೋಳ ಪ್ರಭಾಕರ್ ಕಾಮತ್ ಮತ್ತು ಎಂ.ಕೆ. ವಿಜಯ ಕುಮಾರ್ ಅವರನ್ನು ಅಭಿನಂದಿಸುವ ಮೂಲಕ ಯುವಕರಿಗೆ ಪ್ರೇರಣೆ ಯಾಗುವುದರೊಂದಿಗೆ ಅಂದು ಹಿರಿಯರು ಪಕ್ಷಕ್ಕಾಗಿ ಶ್ರಮಿಸಿದ ಬಗೆಯನ್ನು ಮೆಲುಕು ಹಾಕಿದಂತಾಗುತ್ತದೆ. ಅವರ ಮಾಗದರ್ಶನ, ಸೂರ್ತಿ ಸದಾ ಸಂಘಟನೆಗಿರಲಿ ಎಂದು ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಪಕ್ಷವಿಂದು ಗ್ರಾ.ಪಂ.ನಿಂದ ಲೋಕಸಭಾ ಕ್ಷೇತ್ರದ ತನಕ ಬಲವರ್ಧನೆಗೊಳ್ಳುವಲ್ಲಿ ಹಿರಿಯ ಮುಖಂಡರಾದ ಪ್ರಭಾಕರ್ ಕಾಮತ್ ಮತ್ತು ಎಂ.ಕೆ. ವಿಜಯ ಕುಮಾರ್ ಕೊಡುಗೆ ಅಪಾರ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ, ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ನಾಗರಾಜ್ ಶೆಟ್ಟಿ, ಗಣೇಶ್ ಕಾರ್ಣಿಕ್, ಶಾಸಕರಾದ ರಘುಪತಿ ಭಟ್, ಆರಗ ಜ್ಞಾನೇಂದ್ರ, ದ.ಕ. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಕಾರ್ಕಳ ವಿಹಿಂಪ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಹಿರಿಯ ಮುಖಂಡರಾದ ಸೋಮಶೇಖರ್ ಭಟ್, ಗುಜ್ಜಾಡಿ ಪ್ರಭಾಕರ್ ನಾಯಕ್, ಜಗದೀಶ್ ಅಧಿ ಕಾರಿ ಉಪಸ್ಥಿತರಿದ್ದರು. ಅಭಿಮಾನಿಗಳು ಭಾಗವಹಿಸಿದರು.
ವಿಜಯಲಕ್ಷ್ಮೀ ಪ್ರಾರ್ಥಿಸಿ, ಮಣಿರಾಜ್ ಶೆಟ್ಟಿ ಸ್ವಾಗತಿಸಿದರು. ಸಂಗೀತಾ ಕುಲಾಲ್ ನಿರೂಪಿಸಿ, ರವೀಂದ್ರ ಕುಮಾರ್ ವಂದಿಸಿದರು.