ಬದಿಯಡ್ಕ:ಸತತವಾದ ಮಣ್ಣು ಕುಸಿತ ಹಾಗೂ ರಸ್ತೆಯಲ್ಲುಂಟಾದ ಬಿರುಕಿನಿಂದಾಗಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡ ಬದಿಯಡ್ಕ-ಪೆರ್ಲ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಹರಿಸಲು ಬದಿಯಡ್ಕದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಯಿತು. ಇಲ್ಲಿನ ಜನರು ಸಂಚಾರ ಅವ್ಯವಸ್ಥೆಯಿಂದ ಕಷ್ಟ ಪಡುವಂತಾಗಿದ್ದು ಇದಕ್ಕೆ ಸೂಕ್ತ ಪರಿಹಾರ ಕಾಣುವ ನಿಟ್ಟಿನಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ನೇತƒತ್ವದಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಲಾಗಿತ್ತು.
ರಸ್ತೆ ತಡೆಯಿಂದಾಗಿ ಒಂದು ವಾರದಿಂದ ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ತೆರಳದೆ ಮನೆಯಲ್ಲೇ ಉಳಿಯುವಂತಾಗಿದೆ. ಈ ಸಮಸ್ಯೆಗೆ ಪರಿಹಾರವೆಂಬಂತೆ ಬೆಳಗ್ಗೆ 8ರಿಂದ 9.30ವರೆಗೆ ಹಾಗೂ ಸಂಜೆ 4ರಿಂದ 5ರ ವಗೆರೆ ಪ್ರತ್ಯೇಕ ವಾಹನ ಸೌಕರ್ಯ ಏರ್ಪಡಿಸಲು ತೀರ್ಮಾನಿಸಲಾಯಿತು. ಪೆರ್ಲದಿಂದ ಮಣ್ಣು ಕುಸಿದಿರುವ ಕರಿಂಬಿಲದ ವರೆಗೂ ಕರಿಂಬಿಲ ಇನ್ನೊಂದು ಬದಿಯಿಂದ ಬದಿಯಡ್ಕ ವರೆಗೂ ಬಸ್ಸುಗಳು ಸಂಚಾರ ನಡೆಸಲಿವೆ.
ಜು.29ರಿಂದ ದಿನಂಪ್ರತಿ ಕೆ.ಎಸ್.ಆರ್.ಟಿ.ಸಿ ಸೇರಿದಂತೆ ಎಲ್ಲಾ ಬಸ್ಸುಗಳೂ ಸಹಕರಿಸಲಿರುವುದಾಗಿ ಶಾಸಕರು ತಿಳಿಸಿದರು.
ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ದ್ವಿಚಕ್ರ ವಾಹನಗಳಿಗೆ ಸಂಚಾರಿಸಲು ಅನುಮತಿ ನೀಡಲಾಗುವುದು. ಮಳೆ ಕಡಿಮೆಯಾದ ಕೂಡಲೆ ಮಣ್ಣು ಸರಿಸಿ ರಸ್ತೆಯನ್ನು ಸಂಚಾರ ಯೋಗ್ಯವಾಗಿಸುವುದಾಗಿ ಅವರು ತಿಳಿಸಿದರು.
ಬದಿಯಡ್ಕ ಪಂಚಾಯತ್ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಕೆ.ಕೃಷ್ಣ ಭಟ್, ಜನಪ್ರತಿನಿಧಿಗಳಾದ ಶ್ಯಾಮ್‌ಪ್ರಸಾದ್ ಮಾನ್ಯ, ಅನ್ವರ್ ಓಝೋನ್, ಮುನೀರ್, ಮೊಹಮ್ಮದ್, ಮಾಜಿ ಪಂಚಾಯತ್ ಅಧ್ಯಕ್ಷ ಮಾಹಿನ್ ಕೇಳ್ಳೋಟ್, ವಿವಿಧ ಪಕ್ಷಗಳ ನೇತಾರರಾದ ಕುಂಜಾರ್ ಮುಹಮ್ಮದ್ ಹಾಜಿ, ಸುಧಾಕರನ್, ಜೀವನ್ ಥೋಮಸ್, ನವಜೀವನ ಪ್ರೌಢಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಮುನಿಯೂರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.