Advertisement

ಪಂಚ ಸಾಲಿದ್ದರೆ, “ದ್ರೌಪದಿ’!

11:00 AM Sep 21, 2019 | mahesh |

ಅಮೆರಿಕದ ಸಿನ್‌ಸಿನಾಟಿಯಲ್ಲಿ ಇತ್ತೀಚೆಗೆ ನಡೆದ “ನಾವಿಕ-2019 ಸಮ್ಮೇಳನ’ದ ಸಾಹಿತ್ಯ ಗೋಷ್ಠಿಯಲ್ಲಿ “ಹನಿದೊರೆ’ ಎಚ್‌. ಡುಂಡಿರಾಜ್‌ ಮಾಡಿದ ಭಾಷಣದ ಆಯ್ದಭಾಗ…

Advertisement

ಹನಿಗವನ ಮತ್ತು ಚುಟುಕು ಇವುಗಳ ನಡುವೆ ವ್ಯತ್ಯಾಸವಿದೆಯೆ? ಅಥವಾ ಎರಡೂ ಒಂದೆಯೆ? ಇದು ಅನೇಕರು ಕೇಳುವ ಪ್ರಶ್ನೆ. ಗಾತ್ರದಲ್ಲಿ ಎರಡೂ ಒಂದೇ ಆದರೂ ವಿನ್ಯಾಸದಲ್ಲಿ ವ್ಯತ್ಯಾಸವಿದೆ. ಚುಟುಕಿಗೆ ನಿರ್ದಿಷ್ಟ ಛಂದಸ್ಸು ಮತ್ತು ಪ್ರಾಸ ವಿನ್ಯಾಸವಿದ್ದರೆ, ಹನಿಗವನ ನವ್ಯ ಕಾವ್ಯದ ಪ್ರಭಾವದಿಂದ ಮುಕ್ತ ಛಂದಸ್ಸಿನ ರಚನೆ.

ಚುಟುಕು, ಹನಿಗವನಗಳಲ್ಲಿ ಎಷ್ಟು ಸಾಲುಗಳಿರಬೇಕು? ಎರಡು ಸಾಲಿದ್ದರೆ, “ದ್ವಿಪದಿ’. ಮೂರಿದ್ದರೆ “ತ್ರಿಪದಿ’. ನಾಲ್ಕು ಸಾಲಿದ್ದರೆ, “ಚೌಪದಿ’. ಐದು ಸಾಲುಗಳಿದ್ದರೆ… “ಪಂಚಪದಿ’ ಅನ್ನುತ್ತೀರಾ? ಅಲ್ಲ! ವೈಎನ್‌ಕೆ ಅವರ ಪ್ರಕಾರ, ಐದು ಸಾಲಿದ್ದರೆ “ದ್ರೌಪದಿ’! ಮಿನಿಗವನ, ಮಿನಿಗವನಿನ ಹಾಗೆ! ಕುತೂಹಲ ಕೆರಳಿಸುವಷ್ಟು ಗಿಡ್ಡ. ಆದರೆ, ಮಾನ ಮುಚ್ಚುವಷ್ಟು ಉದ್ದ ಎನ್ನುವುದು ಇನ್ನೊಂದು ಸ್ವಾರಸ್ಯಕರ ವ್ಯಾಖ್ಯೆ. ಕಾವ್ಯವಿರುವುದು ಅದರ ಗಾತ್ರದಲ್ಲಿ ಅಲ್ಲ, ಪರಿಣಾಮದಲ್ಲಿ.

ಕೆಲವರು ಕವಿತೆ ಬರೆಯುವುದು ತುಂಬಾ ಕಷ್ಟ ಅನ್ನುತ್ತಾರೆ. ಒಂದು ಕೃತಿ ರಚಿಸುವುದೆಂದರೆ, ಅದೊಂದು ಹೆರಿಗೆಯ ಹಾಗೆ ಅನ್ನುವವರಿದ್ದಾರೆ. ಅವರಿಗೆ ನಾನು ಹೇಳಿದ್ದು-

ಬರೆಯುವುದೆಂದರೆ
ಹೆರಿಗೆಯ ಹಾಗೆ
ಏನಂತಿ?
ಹಾಗಾದರೆ, ನೀ
ಸಾಹಿತಿಯಲ್ಲ
ಬಾಣಂತಿ!
ಕವಿತೆ ಓದುವಾಗ, ಕವಿ ತುಂಬಾ ತಿಣುಕಿ ಬರೆದಿದ್ದಾನೆ ಅನ್ನಿಸಬಾರದು. ಎಲಾ! ಎಷ್ಟು ಸಹಜವಾಗಿ ಬರೆದಿದ್ದಾನಲ್ಲ, ನಾನೂ ಬರೆಯಬಹುದಾಗಿತ್ತು ಅನ್ನಿಸಬೇಕು. ಸಹಜವಾಗಿ ಬರೆದರೆ, ಕಾವ್ಯಮಯ. ಒತ್ತಾಯಕ್ಕೆ ಬರೆದರೆ ಕಾವ್ಯಮಾಯ! “ನಾನೃಷಿಃ ಕುರುತೇ ಕಾವ್ಯಂ’. ಅಡಿಗರು ಹೇಳುವಂತೆ, ರಾಮಾಯಣ ಬರೆಯಬೇಕಾದರೆ, ಚಿತ್ತ ಹುತ್ತಗಟ್ಟಬೇಕು. ಋಷಿಯಾಗದೆ ಕವಿತೆ ಬರೆಯಲು ಸಾಧ್ಯವಿಲ್ಲ. ಅದೇ ರೀತಿ, ಋಷಿಯಿಲ್ಲದವ ಕವಿಯಾಗಲಾರ ಅನ್ನುವುದೂ ನಿಜ. ನಾನು ಆ ಗುಂಪಿಗೆ ಸೇರಿದವನು.

Advertisement

ಹೆಣ್ಣು, ಹಣ್ಣು, ಕಣ್ಣು, ಮುಂತಾದ ಸಿನಿಮಾ ಹಾಡುಗಳ ಮಾಮೂಲಿ ಪ್ರಾಸಗಳು, ಓದುಗರ ಮೇಲೆ ವಿಶೇಷ ಪರಿಣಾಮ ಬೀರುವುದಿಲ್ಲ. ಅನಿರೀಕ್ಷಿತವಾದ ಮತ್ತು ಹೊಸದೆನ್ನಿಸುವ ಪ್ರಾಸಗಳಿರುವ ಕಿರುಗವನಗಳು ತತ್‌ಕ್ಷಣ ಓದುಗರ ಗಮನ ಸೆಳೆಯುತ್ತದೆ. ಉದಾ:

ಬಸ್ಸಲ್ಲಿ ಓಡಾಡಿ ಬೆನ್ನೋವಾ?
ಹಾಗಾದ್ರೆ ತಗೊಳ್ಳಿ ಇನ್ನೋವಾ!
ತಪ್ಪಾದ್ರೆ ಬರೀಬೇಕು ಹತ್ಸಲ
ಅಂತಾರೆ ನಂ ಮಿಸ್ಸು ವತ್ಸಲ!
ಪದಗಳನ್ನು ಒಡೆಯುವುದು ಹನಿಗವನಗಳಲ್ಲಿ ಕಂಡುಬರುವ ಇನ್ನೊಂದು ತಂತ್ರ. ಮೈಕಟ್ಟು ಅನ್ನುವ ಶಬ್ದವನ್ನು ಒಡೆದಾಗ ಏನಾಗುತ್ತದೆ ಅನ್ನುವುದನ್ನು ಕೇಳಿ-
ಮರುಳಾಗಬೇಡಿ ಗೆಳೆಯರೆ
ತರುಣಿಯರ ಮೈಕಟ್ಟಿಗೆ
ನೆನಪಿರಲಿ
ಮನಸ್ಸಿಲ್ಲದ ಮೈ
ಕಟ್ಟಿಗೆ!

Advertisement

Udayavani is now on Telegram. Click here to join our channel and stay updated with the latest news.

Next