Advertisement

ವಿಭಜನೆಯ ಕತೆ: ಜಿಸ್ನೆ ಲಾಹೋರ್‌ ನಹಿಂ ದೇಖಾ ವೋ ಜನ್ಮ್ ಹೀ ನಹೀಂ

05:58 PM Nov 28, 2019 | mahesh |

ಎಲ್ಲರೂ ಅವಳನ್ನು ಇಷ್ಟ ಪಡುತ್ತಿದ್ದರು. ನಿಧಾನವಾಗಿ ಮಿರ್ಜಾನ ಮನೆಯವರು ಕೂಡ ಅವಳನ್ನು ಮಾಯಿ ಎಂದೇ ಕರೆಯುವಷ್ಟು ಆತ್ಮೀಯತೆ ಬೆಳೆಸಿ ಎಲ್ಲರೂ ಪ್ರೀತಿಯಿಂದ ಇರುವಾಗ , ಊರಿನವರೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದ ದೀಪಾವಳಿಯ ದೃಶ್ಯ ಮನಮುಟ್ಟುವಂತಿತ್ತು.

Advertisement

ಮಣಿಪಾಲದ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ವಿಭಾಗ ಆಯೋಜನೆಯಲ್ಲಿ ನಯಾ ಥಿಯೇಟರ್‌ ಭೋಪಾಲ್‌ ಪ್ರಸ್ತುತ ಪಡಿಸಿದ ಜಿಸ್ನೆ ಲಾಹೋರ್‌ ನಹಿಂ ದೇಖಾ ವೋ ಜನ್ಮ ಹೀ ನಹೀಂ ವಿಭಜನೆಯ ಇನ್ನೊಂದು ಕರಾಳ ಮುಖವನ್ನು ನಮ್ಮ ಮುಂದಿಡುತ್ತದೆ.

ಸಭೆಯ ಮಧ್ಯದಿಂದ ಒಂದಷ್ಟು ಜನರು ತಮ್ಮ ಸಾಮಾನುಗಳ ಜೊತೆಗೆ ಕುಟುಂಬದವರೊಂದಿಗೆ ಆತಂಕದಿಂದ ರಂಗಕ್ಕೆ ಬರುವ ದೃಶ್ಯದೊಡನೆ ಪ್ರಾರಂಭವಾಗುತ್ತದೆ.1947ರ ವಿಭಜನೆಯ ಅನಂತರ ಹಿಂದುಗಳು ಭಾರತಕ್ಕೆ ಮುಸ್ಲಿಮರು ಪಾಕಿಸ್ಥಾನಕ್ಕೆ ತೆರಳಿದಾಗ ಹಿಂದುರತನ್‌ ಲಾಲ್‌ ಜೋಹ್ರಿಯ ತಾಯಿ ಮನೆ ಹಾಗೂ ಲಾಹೋರ್‌ ಬಿಟ್ಟು ಭಾರತಕ್ಕೆ ತೆರಳಲು ನಿರಾಕರಿಸುತ್ತಾಳೆ. ಮಗನ ನಿರೀಕ್ಷೆಯಲ್ಲಿ ಅದೇ ಮನೆಯಲ್ಲಿರುತ್ತಾಳೆ . ಲಾಹೋರ್‌ನಲ್ಲಿರುವ ಎಲ್ಲ ಹಿಂದುಗಳನ್ನು ಓಡಿಸಿ ಅವರ ಮನೆಯನ್ನು ಬೇರೆಯವರಿಗೆ ವಹಿಸುವ ಪ್ರಕ್ರಿಯೆಯನ್ನು ಅಲ್ಲಿನ ಸರಕಾರ ಮಾಡುತಿತ್ತು. ಹಾಗೇ ರತನ್‌ ಮನೆಯನ್ನು ಸಿಕಂದರ್‌ ಮಿರ್ಜಾನ ಕುಟುಂಬಕ್ಕೆ ಕೊಟ್ಟಿದ್ದರು. ಅವರು ಆ ಮನೆಯಲ್ಲಿ ವಾಸ ಮಾಡಲು ಬಂದಾಗ ಮಿರ್ಜಾನ ಹೆಂಡತಿ ಹಿಂದುಗಳು ನೆಲೆಸಿದ ಮನೆ ಇಲ್ಲಿ ಹೇಗಿರುವುದು ಎಂಬ ಕಳವಳ ವ್ಯಕ್ತಪಡಿಸುತ್ತಾಳೆ. ಆ ಮನೆಯಲ್ಲಿ ರತನ್‌ ಜೋಹ್ರಿಯ ತಾಯಿ ಇರುವುದು ತಿಳಿದು ಅವಳನ್ನು ಓಡಿಸಲು ಪ್ರಯತ್ನಿಸುತ್ತಾರೆ. ಅದು ವಿಫ‌ಲವಾದಾಗ ಅವಳನ್ನು ಕೊಲ್ಲುವ ಸಂಚು ಮಾಡುತ್ತಾರೆ.

ವೃದ್ಧ ತಾಯಿ ಎಲ್ಲರನ್ನು ಪ್ರೀತಿಸುವ ಜೀವ. ತನ್ನ ಭಾಷೆ ಪಂಜಾಬಿಯಲ್ಲೇ ಮಾತನಾಡಿದರೂ ಮಾಯಿಗೆ ಲಾಹೋರ್‌ ಮೇಲೆ , ಅಲ್ಲಿನ ಜನರ ಮೇಲೆ ಅತೀವ ಅಭಿಮಾನ. ಊರಿನವರ ಸಂಕಟಕ್ಕೆ ಸಹಾಯ ಮಾಡುವವಳು. ಎಲ್ಲರೂ ಅವಳನ್ನು ಇಷ್ಟ ಪಡುತ್ತಿದ್ದರು. ನಿಧಾನವಾಗಿ ಮಿರ್ಜಾನ ಮನೆಯವರು ಕೂಡ ಅವಳನ್ನು ಮಾಯಿ ಎಂದೇ ಕರೆಯುವಷ್ಟು ಆತ್ಮೀಯತೆ ಬೆಳೆಸಿ ಎಲ್ಲರೂ ಪ್ರೀತಿಯಿಂದ ಇರುವಾಗ ,ಊರಿನವರೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದ ದೀಪಾವಳಿಯ ದೃಶ್ಯ ಮನಮುಟ್ಟುವಂತಿತ್ತು. ತನ್ನಿಂದ ಮಿರ್ಜಾ ಕುಟುಂಬಕ್ಕೆ ತೊಂದರೆ ಎಂದರಿತು ಮನೆ ಊರು ಬಿಡಲು ಸಿದ್ಧರಾಗುವ ಮಾಯಿ… ಅವಳನ್ನು ಪ್ರೀತಿಯಿಂದ ಕಟ್ಟಿ ಹಾಕುವ ಮಿರ್ಜಾ ಕುಟುಂಬ .

ಊರಲ್ಲಿರುವ ಗೂಂಡಾ ಧರ್ಮದ ನೆಪದಲ್ಲಿ ಪ್ರೀತಿ ವಿಶ್ವಾಸದ ಮಧ್ಯೆ ಹುಳಿ ಹಿಂಡಲು ಪ್ರಯತ್ನಿಸುತ್ತಾನೆ. ತನ್ನ ಮತ ಬಾಂಧವರನ್ನೇ ಕೊಂದು ರಕ್ತಪಾತ ಮಾಡುತ್ತಾನೆ.ಅತ್ಯಾಚಾರದಲ್ಲಿ ಕತೆ ಕೊನೆ ಗೊಳ್ಳುತ್ತದೆ .

Advertisement

ಮಾಯಿ ಕೊನೆಯುಸಿರು ಎಳೆದಾಗ ಮೌಲ್ವಿಗಳು ಅವರನ್ನು ಏಕೆ ಹಿಂದು ಪದ್ಧತಿಯಂತೆ ಸುಡಬೇಕು ಎಂದು ಮನವರಿಕೆ ಮಾಡುವುದು, ಗೂಂಡಾನ ಪ್ರತಿಭಟನೆ, ಊರಿನವರ ಒಗ್ಗಟ್ಟು, ದ್ವೇಷಕ್ಕೆ ಬೆಂಕಿ ಸುರಿದು ಮೌಲ್ವಿಯ ಹತ್ಯೆಯಲ್ಲಿ ಕೊನೆಗೊಳ್ಳುವುದು, ಕೊನೆಯಲ್ಲಿ ಮೌಲ್ವಿ ಹಾಗೂ ಮಾಯಿಯ ಅಂತ್ಯ ಸಂಸ್ಕಾರದ ತಯಾರಿ ಅವರವರ ಧರ್ಮಕ್ಕೆ ಅನುಸಾರವಾಗಿ ನಡೆದರೂ ಭುಗಿಲೆದ್ದ ಗೂಂಡಾನ ಪ್ರತೀಕಾರಕ್ಕೆ ಎಲ್ಲರೂ ತುತ್ತಾಗಿ ಮುಸ್ಲಿಮರೇ ಅವರೊಳಗೆ ಹೊಡೆದಾಡಿ ವೇದಿಕೆಯಲ್ಲಿ ಬರಿಯ ಹೆಣಗಳು ಉಳಿದುಕೊಳ್ಳುತ್ತವೆ. ಹಿಂದೂ ಧರ್ಮದ ಪ್ರತೀಕವಾಗಿ ಮಾಯಿಯ ಹೆಣ, ಮುಸ್ಲಿಂ ಧರ್ಮದ ಪ್ರತೀಕವಾಗಿ ಮೌಲ್ವಿಯ ಹೆಣ ತಮ್ಮ ದುರಂತದ ಕತೆ ಹೇಳುತ್ತಿದ್ದವು. ಇದರ ನಡುವೆ ಚಹಾದ ಅಂಗಡಿಗೆ ಚಹಾ ಕುಡಿಯಲಿಕ್ಕೆ ಬರುವ ಸಾಹಿತ್ಯ ಪ್ರೇಮಿ, ಅವನ ಮಾತು ಅದ್ಭುತವಾದ ಪಾಕಿಸ್ಥಾನಿ ಕವಿ ನಾಸಿರ್‌ ಕಾಜ್ಮಿ ಹಾಗು ಅಮೃತ ಪ್ರೀತಮ್‌ರವರ ಶಾಯರಿ ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತದೆ .

ಮಾಯಿ ಈ ಕಥೆಯ ಪ್ರಮುಖ ಪಾತ್ರ. ಮಮತೆ ಕರುಣೆ ಪ್ರೀತಿಯ ಸಾಕಾರಮೂರ್ತಿ. ತುಂಬಾ ಸುಂದರವಾಗಿ ನೈಜ ಅಭಿನಯ. ಮಿರ್ಜಾ ಅವನ ಹೆಂಡತಿ ಮಗಳು ಮಗ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶಾಯರಿ ಹೇಳುವವ ಓಹ್‌ ತುಂಬಾ ಸುಲಲಿತವಾಗಿ ಇಲ್ಲೇ ಪಕ್ಕದಲ್ಲಿ ನಮ್ಮೊಂದಿಗೆ ಕೂತು ಮಾತನಾಡುವ ಹಾಗೆ. ನಾಟಕದ ನಿರ್ದೇಶನ ಮಾಡಿದವರು ಹಾಗೂ ಗೂಂಡಾನ ಪಾತ್ರಕ್ಕೆ ಜೀವ ತುಂಬಿದ್ದರು . ಸುಮಾರು 500ಕ್ಕೂ ಮಿಕ್ಕಿದ ಪ್ರದರ್ಶನ ಕಂಡ ಈ ಹಿಂದಿ ನಾಟಕ ಬಹುಶಃ ಭಾಷೆಯ ಸರಳತೆಯಿಂದ ಮನಮುಟ್ಟಿತು ಎನ್ನಬಹುದು . ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ಕೊರತೆ, ತುರುಕಿಸಿದ ಹಾಗೆ ಇದ್ದ ಹಾಸ್ಯ ಬಿಟ್ಟರೆ ಉತ್ತಮ ಸಂದೇಶವನಿತ್ತ ನಾಟಕ .

ಧರ್ಮ ಹೇಗೆ ಮನುಷತ್ವಕ್ಕೆ ಬೆಲೆ ಕೊಡುತ್ತದೆ, ಎಲ್ಲರಿಗೂ ಅವರವರ ಧರ್ಮ ಅನುಸರಿಸುವ ಹಕ್ಕಿದೆ ಎನ್ನುವುದನ್ನು ಪ್ರತಿಪಾದಿಸುತ್ತದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಧರ್ಮಕ್ಕೆ ಯಾವ ರೀತಿಯ ಬಣ್ಣ ಬಳಿಯಲಾಗುತ್ತಿದೆ ಎನ್ನುವುದನ್ನು ಮನದಟ್ಟು ಮಾಡಿಸುತ್ತದೆ .

ಶಿಲ್ಪಾ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next