Advertisement

ಬಿಬಿಎಂಪಿ ಚುನಾವಣೆ ಒಂದು ವರ್ಷ ಮುಂದೂಡಲು ಪಕ್ಷಾತೀತ ಕಸರತ್ತು!

12:50 AM Jan 02, 2020 | Lakshmi GovindaRaj |

ಬೆಂಗಳೂರು: ಈ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ನಡೆಯಬೇಕಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಒಂದು ವರ್ಷ ಮುಂದೂಡುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ. ನಗರದ ಶಾಸಕರು ಪಕ್ಷಾತೀತವಾಗಿ ಬಿಬಿಎಂಪಿ ಚುನಾವಣೆ ಮುಂದೂಡಲು ಬಯಸಿದ್ದು ಆಡಳಿತಾರೂಢ ಬಿಜೆಪಿ ಶಾಸಕರ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೂ ಒತ್ತಡ ತರಲು ಕಾರ್ಯತಂತ್ರ ರೂಪಿಸಿದ್ದಾರೆ.

Advertisement

ಬಿಬಿಎಂಪಿ ವಾರ್ಡ್‌ ಪುನರ್‌ ವಿಂಗಡನೆಯಲ್ಲಿ ವಿಳಂಬ ಮಾಡುವುದು ಹಾಗೂ ಆಡಳಿತ ದೃಷ್ಟಿಯಿಂದ ಪಾಲಿಕೆ ತ್ರಿಭಜನೆ ಮಾಡುವ “ಅಸ್ತ್ರ’ ಮುಂದಿಟ್ಟುಕೊಂಡು ಚುನಾವಣೆ ಮುಂದೂಡಿಕೆ ಮಾಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಈಗಾಗಲೇ ಪಾಲಿಕೆಯ ವಾರ್ಡ್‌ ಪುನರ್‌ ವಿಂಡಗಣೆ ಕಾರ್ಯ ಪೂರ್ಣಗೊಳ್ಳಬೇಕಿತ್ತಾದರೂ ಇನ್ನೂ ಪ್ರಾರಂಭದ ಹಂತದಲ್ಲಿದೆ ಎಂದು ಹೇಳಲಾಗಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ವಾರ್ಡ್‌ ಪುನರ್‌ ವಿಂಗಡಣೆಗಾಗಿ ಸಾರ್ವಜನಿಕ ಆಕ್ಷೇಪ ಸ್ವೀಕರಿಸಲು ಪುರಭವನದಲ್ಲಿ ಸಭೆ ಕರೆಯಲಾಗಿತ್ತಾದರೂ ಮುಂದೂಡಲಾಗಿತ್ತು. ರಾಜ್ಯ ಬಜೆಟ್‌ ಹಾಗೂ ಬಿಬಿಎಂಪಿ ಬಜೆಟ್‌ ನಂತರ ಬಿಬಿಎಂಪಿ ಮೂರು ಪಾಲಿಕೆಗಳಾಗಿ ವಿಭಜನೆ ಮಾಡುವ ಪ್ರಯತ್ನಕ್ಕೆ ಚಾಲನೆ ಸಿಗಲಿದೆ. ಬಿ.ಎಸ್‌.ಪಾಟೀಲ್‌ ನೇತೃತ್ವದ ಸಮಿತಿ ನೀಡಿರುವ ವರದಿಯಲ್ಲಿ ಆಡಳಿತ ದೃಷ್ಟಿಯಿಂದ ಪಾಲಿಕೆಯನ್ನು ಮೂರು ಪಾಲಿಕೆಗಳಾಗಿ ವಿಭಜನೆ ಮಾಡುವ ಶಿಫಾರಸು ಸಹ ಇದ್ದು ಆ ಬಗ್ಗೆ ಶಾಸಕರು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಚುನಾವಣೆ ಒಂದು ವರ್ಷ ಮುಂದೂಡಿದರೆ ಬಿಬಿಎಂಪಿ ಆಡಳಿತದಲ್ಲಿ ಶಾಸಕರು ನೇರವಾಗಿ ಮಧ್ಯಪ್ರವೇಶಿಸಬಹುದು. ವಾರ್ಡ್‌ ಮಟ್ಟದ ಅಧಿಕಾರಗಳಿಂದ ಹಿಡಿದು ಆಯುಕ್ತರವರೆಗೆ ತಮ್ಮ ಮಾತು ಕೇಳುತ್ತಾರೆ. ರಾಜ್ಯ ಸರ್ಕಾರದಿಂದ ಬಿಬಿಎಂಪಿ ಮೂಲಕ ವಿಶೇಷ ಅನುದಾನ ಬಿಡುಗಡೆ ಮಾಡಿಸಿಕೊಂಡು ತಮ್ಮ ನಿರ್ದೆಶನದಡಿಯೇ ಟೆಂಡರ್‌ ಮತ್ತಿತರ ಪ್ರಕ್ರಿಯೆ ನಡೆಯುವಂತೆ ಮಾಡುವುದು ಶಾಸಕರ ಉದ್ದೇಶ.

ಈ ವಿಚಾರದಲ್ಲಿ ನಗರದ ಎಲ್ಲ ಶಾಸಕರು ಪಕ್ಷಾತೀತವಾಗಿ ಒಗ್ಗಟ್ಟಾಗಿದ್ದಾರೆ. ಈಗಾಗಲೇ ಒಂದೆರಡು ಸುತ್ತಿನ ಮಾತುಕತೆಯೂ ಈ ಬಗ್ಗೆ ನಡೆದಿದ್ದು, ಒಂದು ವರ್ಷ ಮುಂದೂಡಿಕೆಗೆ ಏನೆಲ್ಲಾ ಮಾರ್ಗಗಳಿವೆ ಎಂಬುದರ ಬಗ್ಗೆ ಸಮಾಲೊಚನೆ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Advertisement

ಕಸರತ್ತು: ನಗರಾಭಿವೃದ್ಧಿ ಇಲಾಖೆ ವಾರ್ಡ್‌ ಪುನರ್‌ ವಿಂಗಡಣೆ ಮಾಡಿ ರಾಜ್ಯ ಚುನಾವಣಾ ಆಯೋಗಕ್ಕೆ ಕೊಡಬೇಕು. ಈಗ ವಾರ್ಡ್‌ ಪುನರ್‌ ವಿಂಗಡಣೆ ಕಾರ್ಯ ಆರಂಭಿಸಲಾಗಿದೆಯಾದರೂ ಇನ್ನೂ ಸಾರ್ವಜನಿಕರ ಆಕ್ಷೇಪಕ್ಕೆ ಅವಕಾಶ ಕೊಡಬೇಕಾಗಿದೆ. ಆ ನಂತರವಷ್ಟೇ ಆಯೋಗಕ್ಕೆ ತಲುಪಿಸಬೇಕು.

ಈ ಮಧ್ಯೆ, ವಾರ್ಡ್‌ ಪುನರ್‌ ವಿಂಗಡಣೆಯಿಂದ ಜಯನಗರ, ಪದ್ಮನಾಭನಗರ, ಶಿವಾಜಿನಗರ, ಗಾಂಧಿನಗರ, ರಾಜಾಜಿನಗರ ವಿಧಾನಸಭೆ ಕ್ಷೇತ್ರಗಳ ವಾರ್ಡ್‌ಗಳು ಕಡಿಮೆಯಾಗಿ ಸರ್ವಜ್ಞನಗರ, ಸರ್‌.ಸಿ.ವಿ.ರಾಮನ್‌ನಗರ, ಕೆ.ಆರ್‌.ಪುರಂ, ಯಲಹಂಕ, ಬೆಂಗಳೂರು ದಕ್ಷಿಣ ಸೇರಿದಂತೆ ಬೇರೆ ವಿಧಾನಸಭೆ ಕ್ಷೇತ್ರಗಳ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಲಿದೆ.

ಶಾಸಕರು ತಾವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಅನುಕೂಲವಾಗುವಂತೆ ವಾರ್ಡ್‌ಗಳ ಸೇರ್ಪಡೆ, ಆ ವಾರ್ಡ್‌ಗಳಿಗೆ ಬಡಾವಣೆಗಳ ಸೇರ್ಪಡೆಗೂ ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಕೆಲವೆಡೆ ವಾರ್ಡ್‌ ಪುನರ್‌ ವಿಂಗಡಣೆ ಅಧಿಕಾರಿಗಳ ಮೇಲೂ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದೆಯೂ ಮುಂದೂಡಲಾಗಿತ್ತು : ಪಾಲಿಕೆ ಚುನಾವಣೆ ಮುಂದೂಡಿಕೆ ಹೊಸದಲ್ಲ. ವಾರ್ಡ್‌ಗಳ ಸಂಖ್ಯೆಯನ್ನು 100ರಿಂದ 198 ವಾರ್ಡ್‌ಗಳಿಗೆ ಹೆಚ್ಚಿಸಿದಾಗ 2006ರಿಂದ 2010ರವರೆಗೆ ಚುನಾವಣೆ ನಡೆದಿರಲಿಲ್ಲ. ಆಡಳಿತಾಧಿಕಾರಿಗಳನ್ನು ನೇಮಿಸಲಾಗಿತ್ತು. ಅದಕ್ಕೂ ಮುನ್ನ 1978ರಿಂದ 1983ರವರೆಗೂ ಪಾಲಿಕೆಗೆ ಚುನಾವಣೆ ನಡೆದಿರಲಿಲ್ಲ. ಕೆಎಂಸಿ ಕಾಯ್ದೆ ಹಾಗೂ 74 ನೇ ತಿದ್ದುಪಡಿ ಪ್ರಕಾರ ಅವಧಿ ಮುಗಿಯುತ್ತಲೇ ಚುನಾವಣೆ ನಡೆಸಬೇಕು. ಆದರೆ, ಬೇರೆ ಬೇರೆ ಕಾರಣಗಳನ್ನು ನೀಡಿ ಮುಂದೂಡುವ ತಂತ್ರ ಶಾಸಕರದ್ದು ಎಂದು ಹೇಳಲಾಗಿದೆ.

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next