Advertisement

ಕಣ ರಂಗ: ರಸ್ತೆ ಮೇಲೆ ಧಾನ್ಯ ರಾಶಿ

09:58 AM Mar 10, 2020 | mahesh |

ಸುಗ್ಗಿ ಬಂದರೆ ರೈತರು ಹಿರಿ ಹಿರಿ ಹಿಗ್ಗುವರು. ಮಾಗಿದ ಬೆಳೆಯನ್ನು ಕೊಯ್ದು ಗೂಡು ಹಾಕಿ, ಪೂಜೆ ಮಾಡಿ, ತೆನೆ ಮುರಿದು, ಬಂಡಿಗೆ ತೊಟ್ಟಿಲು ಕಟ್ಟಿ ತರುತ್ತಾರೆ. ಊರ ಮಗ್ಗಲ ಹೊಲದಲ್ಲಿಯ ನೆಲ ಸ್ವತ್ಛ ಮಾಡಿ, ಮುಹೂರ್ತ ನೋಡಿ ಮೇಟಿ ನೆಟ್ಟು, ನೀರು ಹಾಕಿ ದನಕರುಗಳಿಂದ ತುಳಸಿ, ಬಡಮನಿಯಿಂದ ಬಡಿದು, ರೂಲು ಹಾಕಿ ಗಟ್ಟಿ ಮಾಡಿ ಕಣ ಮಾಡುತ್ತಾರೆ. ಸೆಗಣಿಯಿಂದ ಸಾರಿಸಿ ಸಜ್ಜುಗೊಳಿಸುತ್ತಾರೆ. ಹೊಲದಿಂದ ತಂದ ತೆನೆಗಳನ್ನು ತೆಳ್ಳಗೆ ಹರವಿ ಹಂತಿ ಕಟ್ಟುತ್ತಾರೆ. ಆದರೆ… ಆಧುನೀಕರಣದ ಗಾಳಿ ಹಳ್ಳಿಗೂ ಬೀಸಿ ಕಣ ಮಾಡಿ ರಾಶಿ ಮಾಡುವುದು ಕಣ್ಮರೆಯಾಗುತ್ತಿದೆ.

Advertisement

ಹೊಸ ವಿಧಾನ
ಕೆಲಸ ಸುಲಭ ಮಾಡಿಕೊಳ್ಳುತ್ತಿದ್ದಾರೆ. ರಸ್ತೆ ಮೇಲೆ ರಾಶಿ ಮಾಡುವ ಹೊಸ ವಿಧಾನವನ್ನು ಅವರು ಕಂಡುಕೊಂಡಿದ್ದಾರೆ. ಇಂದು ಊರ ಮುಂದೆ ಹಾಯುವ ಟಾರು ರಸ್ತೆಗಳೇ ಅದೆಷ್ಟೋ ರೈತರಿಗೆ ಕಣಗಳಾಗಿವೆ. ಟಾರು ರಸ್ತೆಯ ದಂಡೆಗೆ ಮೇವಿನ ಇಂಡಿಗೆಯ ದಿಂಡುಗಳನ್ನು ಕಟ್ಟುತ್ತಾರೆ. ಮುರಿದು ತಂದ ತೆನೆಗಳನ್ನು ನಡುವೆ ಹರವುತ್ತಾರೆ. ಮಗ್ಗಲು ಮಕ್ಕಳು ಮರಿಗಳೊಂದಿಗೆ ಕೊಡುತ್ತಾರೆ. ಒಮ್ಮೊಮ್ಮೆ ದಂಡೆಗುಂಟ ದಿಂಡುಗಲ್ಲುಗಳನ್ನು ಚೆಲ್ಲಿರುತ್ತಾರೆ. ಅಡ್ಡಾಡುವ ಗಾಡಿಗಳು ತೆನೆಯ ಮೇಲೆ ಹಾದು ಹೋಗಲಿ ಎಂಬುದೇ ಅದರ ಉದ್ದೇಶ. ಅಕಸ್ಮಾತ್‌ ವಾಹನ ಚಾಲಕ ವೇಗ ಕಡಿಮೆ ಮಾಡಿ, ಹಾರ್ನ್ ಹಾಕಿ ಮಗ್ಗಲು ಹಾಸಿ ಹೋದರೆ ಕುಂತವರೆಲ್ಲ ಕೆಂಗಣ್ಣು ಬೀರುತ್ತಾರೆ.

ರಸ್ತೆಯಲ್ಲಿ ವಾಹನಗಳ ಓಡಾಟದಿಂದಲೇ ಕಾಳುಗಳು ಬೇರ್ಪಡುತ್ತವೆ. ಆನಂತರ ಕಂಕಿಗಳನ್ನು ತೆಗೆದು ಕಾಳನ್ನು ತೂರಿದರೆ ರಾಶಿ ಮುಗಿದಂತೆಯೇ. ರಾಶಿಗಾಗಿ ರೈತರು ಕಣ ಮಾಡಬೇಕಾಗಿಲ್ಲ. ಎತ್ತು ಕಟ್ಟಬೇಕಾಗಿಲ್ಲ. ಹಂತಿ ಹೊಡೆಯಬೇಕಾಗಿಲ್ಲ. ರಸ್ತೆಗಳೇ ಕಣಗಳಾಗಿರುತ್ತವೆ. ಜೋಳ, ಸಜ್ಜೆ, ನವಣಿ, ನೆಲ್ಲು, ಕಡಲೆ, ತೊಗರಿ, ಹುರುಳಿ, ಅಗಸಿ, ಎಳ್ಳು, ಹೆಸರು, ಅಲಸಂದಿ… ಇತ್ಯಾದಿಗಳ ರಾಶಿಯನ್ನು ರಸ್ತೆಯ ಮೇಲೆಯೇ ಮಾಡುತ್ತಿದ್ದಾರೆ.

ಗಲೀಜು ನೈರ್ಮಲ್ಯ
ಹಿಂದಿನವರು ಕಣವನ್ನು ಬಹಳ ಜತನದಿಂದ ನೋಡಿಕೊಳ್ಳುತ್ತಿದ್ದರು. ಕಣದ ಸಮೀಪ ಬರುವವರು ತಮ್ಮ ಪಾದರಕ್ಷೆಗಳನ್ನು ದೂರದಲ್ಲಿಯೇ ಬಿಡುತ್ತಿದ್ದರು. ಪಾದರಕ್ಷೆಯ ಧೂಳು ಕಾಳಿನಲ್ಲಿ ಸೇರಬಾರದು ಎಂಬ ಉದ್ದೇಶವೇ ಇರಬೇಕು. ಇನ್ನೂ ಹಲವಾರು ನಿಯಮಗಳನ್ನು ಅವರು ಪಾಲಿಸುತ್ತಿದ್ದರು. ಹಂತಿ ನಡೆದಾಗ ಎತ್ತುಗಳ ಸಗಣಿ, ಮೂತ್ರ ಧಾನ್ಯದಲ್ಲಿ ಬೀಳದಂತೆ ಎಚ್ಚರಿಕೆ ವಹಿಸುತ್ತಿದ್ದರು. ಇಂಥ ಹಂತಿಯಿಂದ ಬಂದ ಕಾಳುಗಳು ನಿರ್ಮಲವಾಗಿರುತ್ತಿದ್ದವು. ಬಳಸಲು ಸಿದ್ಧವಾಗಿರುತ್ತಿದ್ದವು. ಇನ್ನು ರಸ್ತೆ ಮೇಲಿನ ರಾಶಿ ಸ್ಥಿತಿಯನ್ನು ನೋಡಿದರೆ ನಿರ್ಮಲವಾಗಿರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ರಸ್ತೆ ಮೇಲೆ ಅಡ್ಡಾಡುವ ಎತ್ತು, ಎಮ್ಮೆ, ಕತ್ತೆ, ಆಡು, ಕುರಿ, ಕೋಳಿ, ನಾಯಿ, ನರಿಗಳೂ ಸಹ ತಮ್ಮ ಗಂಜಲವನ್ನು ಅಲ್ಲಿ ಸುರಿದಿರುತ್ತವೆ. ವಾಹನಗಳ ಗಾಲಿಗಳ ಮೇಲಿನ ಗಲೀಜು, ರಸ್ತೆ ಮೇಲಿನ ಗಲೀಜು ಇವೆಲ್ಲದರಿಂದಾಗಿ ಆ ಕಾಳುಗಳಿಗೂ ಗಲೀಜು ಮೆತ್ತಿಕೊಳ್ಳುವುದು. ಟಯರಿನ ಸುಟ್ಟ ವಾಸನೆ, ಡಾಂಬರಿನ ದುರ್ಗಂಧ, ಸೈಲೆನ್ಸರ್‌ ಪೈಪು ಕಾರುವ ಕಪ್ಪು ಹೊಗೆಯಲ್ಲಿಯ ವಿಷ ಇವೆಲ್ಲವುಗಳ ಲೇಪನ ಕಾಳು ಕಡ್ಡಿಗಳಿಗೆ ಸಿಗುವುದು. ಅದನ್ನು ಸೇವಿಸಿದವರ ಆರೋಗ್ಯದ ಗತಿ ದೇವರೇ ಬಲ್ಲ!

ಕಾಳಿನಲ್ಲಿ ಕ್ಯಾನ್ಸರ್‌ಕಾರಕ ಅಂಶ
ರಸ್ತೆಯ ಡಾಂಬರು ಕಾಳುಗಳಿಗೆ ಡಾಂಬರಿನ ಲೇಪನ ಕೊಡಬಹುದು. ಅದು ಹೇಗೆಂದರೆ, ಉರಿಬಿಸಿಲಿನಲ್ಲಿ ಡಾಂಬರು ಮೆತ್ತಗಾಗಿರುತ್ತದೆ. ಆ ಸ್ಥಿತಿಯಲ್ಲಿ ವಾಹನ ಅದರ ಮೇಲೆ ಹರಿದಾಗ ಡಾಂಬರು ಕಾಳುಗಳಿಗೆ ಅಂಟಿಕೊಳ್ಳುವ ಸ್ಥಿತಿಯಲ್ಲಿ ಇರುತ್ತದೆ. ಡಾಂಬರು ಕ್ಯಾನ್ಸರ್‌ ತರುತ್ತದೆಂದು ನೂರಾರು ವರ್ಷಗಳ ಮೊದಲೇ ಖಚಿತವಾಗಿದೆ. ಹೀಗಾಗಿ ಧಾನ್ಯ ಕ್ಯಾನ್ಸರ್‌ಕಾರಕವೂ ಆಗುವ ಸಾಧ್ಯತೆ ಇರುತ್ತದೆ. ಇನ್ನಾದರೂ ರೈತರು ರಸ್ತೆಯಲ್ಲಿ ರಾಶಿ ಮಾಡುವುದನ್ನು ತಡೆದು ವಿದಾಯ ಹೇಳಿ, ಅನವಶ್ಯಕ ಅವಘಡಗಳನ್ನು ತಪ್ಪಿಸಲಿ !

Advertisement

ರಸ್ತೆ ಮೇಲೆ ರಾಶಿ ಮಾಡುವುದು ಕಾನೂನುಬಾಹಿರ. ರೈತರು ರಸ್ತೆಯ ಮೇಲೆ ರಾಶಿ ಮಾಡಲು ಬಳಸುವ ಯಂತ್ರೋಪಕರಣ, ಯಂತ್ರೋಪಕರಣದ ಬಿಡಿಭಾಗಗಳನ್ನು ಮತ್ತಿತರ ವಸ್ತುಗಳನ್ನು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಬಿಟ್ಟಿರುತ್ತಾರೆ. ಇದರಿಂದ ರಾತ್ರಿ ವೇಳೆಯಲ್ಲಷ್ಟೇ ಅಲ್ಲ, ಹಗಲಿನಲ್ಲಿಯೇ ರಸ್ತೆ ಸಂಚಾರಕ್ಕೆ ತೊಂದರೆಯುಂಟಾಗುತ್ತದೆ. ದ್ವಿಚಕ್ರ ವಾಹನಗಳು ಅದರ ಮೇಲೆ ಬರ್ರನೆ ಹೋದರೆ ಆಯ ತಪ್ಪಿ ಬೀಳುವ ಸಾಧ್ಯತೆ ಇರುತ್ತದೆ.

ಚಿತ್ರ ಲೇಖನ: ಡಾ. ಕರವೀರಪ್ರಭು ಕ್ಯಾಲಕೊಂಡ

Advertisement

Udayavani is now on Telegram. Click here to join our channel and stay updated with the latest news.

Next