Advertisement
ಜಿಎಸ್‌ಟಿ ಕುರಿತು ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡುವ ಸಂಬಂಧ ಮಂಗಳವಾರ ಬಿಬಿಎಂಪಿ ವಿಶೇಷ ಸಭೆ ಕರೆಯಲಾಗಿತ್ತು. ಈ ವೇಳೆ ಸ್ಥಳೀಯಾಡಳಿತದ ಬಲವರ್ಧನೆಗಾಗಿ ಜಿಎಸ್‌ಟಿಯಲ್ಲಿ ಪಾಲಿಕೆಗೂ ಪಾಲು ಸಿಗಬೇಕು ಎಂಬ ಪ್ರಸ್ತಾಪವನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ಸಭೆಯ ಮುಂದಿಟ್ಟರು. ಆಡಳಿತ ಪಕ್ಷದ ಈ ಪ್ರಸ್ತಾವಕ್ಕೆ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಕೂಡ ದನಿಗೂಡಿಸಿದ್ದು ವಿಶೇಷವಾಗಿತ್ತು.
Related Articles
Advertisement
ಬಿಬಿಎಂಪಿಯಲ್ಲಿ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರಿಗೆ ಯಾವುದೇ ರೀತಿಯ ವಿನಾಯ್ತಿ ಸಿಗುವುದಿಲ್ಲ. ಕೆಲವು ನಾಗರಿಕ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳಿಗೆ ತುಸು ವಿನಾಯ್ತಿ ಸಿಗಬಹುದು. ಆದರೆ, ಸಾಮಗ್ರಿಗಳ ಖರೀದಿಗೆ ಜಿಎಸ್‌ಟಿ ಪಾವತಿ ಮಾಡಲೇಬೇಕಾಗುತ್ತದೆ ಎಂದರು.
ಹಿಂದಿನ ಕಾಮಗಾರಿಗಳಿಗಿಲ್ಲ ಜಿಎಸ್‌ಟಿ: ಒಂದು ವೇಳೆ ಪಾಲಿಕೆಯಲ್ಲಿ ಜುಲೈ 1ಕ್ಕಿಂತ ಮುನ್ನ ಕಾಮಗಾರಿಗಳನ್ನು ಕೈಗೊಂಡಿದ್ದರೆ, ಅದಕ್ಕೆ ಅಂದಿನ ಕಾನೂನು ಪ್ರಕಾರ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಬೇಕಿದ್ದರೆ ಅದನ್ನು ಜಿಎಸ್‌ಟಿ ವ್ಯವಸ್ಥೆಗೆ ಒಳಪಡಿಸಿಕೊಂಡು ತೆರಿಗೆಯನ್ನು ಪಾವತಿ ಮಾಡಲೂಬಹುದು ಎಂದ ಅವರು, ಜಿಎಸ್‌ಟಿ ವ್ಯವಸ್ಥೆಯಿಂದ ಗುತ್ತಿಗೆದಾರರಿಗೆ ಹೊರೆ ಆಗುವುದಿಲ್ಲ. ಮುಂದೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಪಾಲಿಕೆ ಯಾವುದಾದರೂ ಕಟ್ಟಡದಿಂದ ಬಾಡಿಗೆಗೆ ಸಂಗ್ರಹ ಮಾಡಿದರೆ ಆಗ ಜಿಎಸ್‌ಟಿ ಪಾವತಿ ಮಾಡಲೇಬೇಕು. ಜಾಹೀರಾತು ಪ್ರದರ್ಶನ, ಒಎಫ್ಸಿ ಕೇಬಲ್ ಅಳವಡಿಕೆಗೆ ಅನುಮತಿ ನೀಡಿರುವುದರಿಂದ ಕೇಬಲ್ ಅಳವಡಿಸಿದವರು ಹಾಗೂ ಜಾಹೀರಾತು ಫಲಕ ಪ್ರದರ್ಶಿಸಿದವರೇ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ನಾಗರಿಕರಿಗೆ ಅನುಕೂಲ ಮಾಡಿಕೊಡಲು ಈಜುಕೊಳ ನಿರ್ಮಾಣ, ರಂಗಮಂದಿರ, ಆಟದ ಮೈದಾನಗಳನ್ನು ನಿರ್ಮಿಸಿ ಅದರಿಂದ ಹಣ ಸಂಗ್ರಹ ಮಾಡಿದಲ್ಲಿ ಅದಕ್ಕೂ ಜಿಎಸ್‌ಟಿ ಅನ್ವಯ ಆಗಲಿದೆ. ಒಂದು ವೇಳೆ ಅವುಗಳನ್ನು ಉಚಿತವಾಗಿ ನೀಡುತ್ತಿದ್ದರೆ, ಅದನ್ನು ಜಿಎಸ್‌ಟಿ ಕೌನ್ಸಿಲ್ ಗಮನಕ್ಕೆ ತಂದಲ್ಲಿ ವಿನಾಯ್ತಿ ಸಿಗಲಿದೆ ಎಂದರು.
ನಿಯಮ ಉಲ್ಲಂಘಿಸಿ ಸಭೆ; ಆಕ್ಷೇಪಸಭೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಸೆಕ್ಷನ್ 10ರ ಪ್ರಕಾರ ಚುನಾವಣೆ ಘೋಷಣೆಯಾದ ಬಳಿಕ ಸಭೆ ಕರೆಯುವಂತಿಲ್ಲ. ಕೆಲವು ನಿರ್ಣಯಗಳನ್ನು ಅನುಮೋದನೆ ಪಡೆದುಕೊಳ್ಳಲೆಂದೇ ಸಭೆ ಕರೆಯಲಾಗಿದೆ ಎಂದು ಆರೋಪಿಸಿದರು. ಈ ವೇಳೆ ಮಾತನಾಡಿದ ಕಾನೂನು ಕೋಶದ ಮುಖ್ಯಸ್ಥರು, ತಿಂಗಳಿಗೆ ಒಂದರಂತೆ ಸಭೆ ಕರೆಯುವುದು ಪದ್ಧತಿ. ಅದರಂತೆ ಈ ಸಭೆ ಕರೆಯಲಾಗಿದೆ. ಈಗಾಗಲೇ ನೀತಿಸಂಹಿತೆ ಇರುವುದರಿಂದ ಯಾವುದೇ ನಿರ್ಣಯ ಕೈಗೊಳ್ಳುವಂತಿಲ್ಲ ಎಂದು ತಿಳಿಸಿದರು. ಇದಕ್ಕೆ ದನಿಗೂಡಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಸದಸ್ಯರಿಗೆ ಜಿಎಸ್‌ಟಿ ಬಗ್ಗೆ ಗೊಂದಲವಿದೆ. ಅದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಯಾವುದೇ ನಿರ್ಣಯ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.