Advertisement

ಪರಿಸರ ಗಣೇಶ ಉತ್ಸವಕ್ಕೆ ಪಾಲಿಕೆ ಕ್ರಮ

03:25 PM Jul 29, 2017 | |

ವಿಜಯಪುರ: ಈ ಬಾರಿಯ ಗಣೇಶ ಉತ್ಸವದಲ್ಲಿ ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮೂರ್ತಿಗಳ ಬಳಕೆಯನ್ನು ಪಾಲಿಕೆ ಸಂಪೂರ್ಣ ನಿಷೇ ಧಿಸಿದೆ. ಅಲ್ಲದೆ ಕೆರೆ-ಬಾವಿಗಳಿಗೆ ಇಂಥ ಮೂರ್ತಿಗಳನ್ನು ಎಸೆದು ಜಲ ಮೂಲಗಳನ್ನು ನಾಶ ಮಾಡಿದರೆ ಜೈಲಿಗೆ ಹಾಕುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಕೇವಲ ಆದೇಶ ಹೊರಡಿಸಿ ಕೈಕಟ್ಟಿ ಕುಳಿತುಕೊಳ್ಳದೆ ಅಗತ್ಯ ಮುಂಜಾಗ್ರತಾ ಕ್ರಮಕ್ಕೂ ಮುಂದಾಗಿದೆ.

Advertisement

ನಗರದಲ್ಲಿರುವ ಐತಿಹಾಸಿಕ ಜಲಮೂಲದ ಬಾವಡಿಗಳಲ್ಲಿ ಗಣೇಶ ಉತ್ಸವದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಇದರಿಂದ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳ ವಿಸರ್ಜನೆಯಿಂದ ಈ ಬಾವಿಗಳು ನಿರ್ಜೀವಗೊಂಡಿದ್ದವು. ಆದರೆ ಕೆಲ ತಿಂಗಳ ಹಿಂದೆ ಈ ಐತಿಹಾಸಿಕ ಬಾವಿಗಳ ಪುನಶ್ಚೇತನ ಕಾರ್ಯ ನಡೆದಿದ್ದು, ಅವು ಪುನರುಜ್ಜೀವನಗೊಂಡು ಜೀವಜಲ ಧುಮ್ಮಿಕ್ಕುತ್ತಿದೆ. ಇದರಿಂದ ಪಾರಂಪರಿಕ ಬಾವಿಗಳು ಮರುಜೀವ ಪಡೆದಿವೆ.

ಅಧಿಕಾರಿಗಳ ದಾಳಿ: ಇದರಿಂದಾಗಿ ಪಿಒಪಿ ಗಣೇಶ ಮೂರ್ತಿ ತಯಾರಿಕೆ, ಬಳಕೆ, ವಿಸರ್ಜನೆಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆಯಂತೆ ಸಂಪೂರ್ಣ ನಿಷೇಧಿಸಿದೆ. ಈ ಕುರಿತು ತಿಂಗಳ ಹಿಂದಿನಿಂದಲೇ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿರುವ ಮಹಾನಗರ ಪಾಲಿಕೆ, ಮಾಲಿನ್ಯಕ್ಕೆ
ಕಾರಣವಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ದಂಡ ವಿಧಿಸುವ ಹಾಗೂ ಜೈಲಿಗೆ ಹಾಕುವುದಾಗಿಯೂ ಎಚ್ಚರಿಸಿದೆ. ಅದಲ್ಲದೆ, ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್‌, ಪರಿಸರ, ಕಂದಾಯ ಇಲಾಖೆ ಅಧಿಕಾರಿಗಳ ತಂಡ ಕಟ್ಟಿಕೊಂಡು ಪಿಒಪಿ ಗಣೇಶ ಮೂರ್ತಿ ತಯಾರಿಕೆ ಹಾಗೂ ಸಂಗ್ರಹ ಕೇಂದ್ರಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.

ನಗರದ ಸೈನಿಕ ಸ್ಕೂಲ್‌ ಬಳಿಯ ಶಾಸ್ತ್ರೀ ನಗರದಲ್ಲಿ ಸುರೇಶ ಅಫ್ಜಲಪುರ ಎಂಬುವರ ಮನೆ ಮೇಲೆ ದಾಳಿ ನಡೆಸಿರುವ ಪಿಒಪಿ ರಾಸಾಯನಿಕ ಬಳಸಿ ತಯಾರಿಸಿದ 184 ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿದ್ದ
ವಿಜಯಪುರ ನಗರದ ಗಣೇಶ ಮೂರ್ತಿ ಉದ್ಯಮ ಮಂಕುಬಡಿದು ಕುಳಿತಿದೆ. 

ಮಹಾರಾಷ್ಟ್ರ ಗಡಿಯಲ್ಲಿ ನಿಗಾ: ವಿಜಯಪುರ ನಗರದಲ್ಲೇ 55 ಕುಟುಂಬಗಳು ಗಣೇಶ ಮೂರ್ತಿ ಮಾರಾಟವನ್ನೇ ಪರಂಪರಾಗತ ಉದ್ಯೋಗವಾಗಿಸಿಕೊಂಡಿವೆ. ಜಿಲ್ಲೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಲ್ಲಿ ಶೇ. 75ರಷ್ಟು ಪಿಒಪಿ ಮೂರ್ತಿಗಳು ನೆರೆಯ ಮಹಾರಾಷ್ಟ್ರದ ಹಲವು ನಗರಗಳಿಂದ ಜಿಲ್ಲೆಗೆ ಪ್ರವೇಶಿಸುತ್ತವೆ. ಹೀಗಾಗಿ ಜಿಲ್ಲೆಯ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾ ಇಡಲು ಮುಂದಾಗಿದೆ.
ಇತ್ತ ಪಾಲಿಕೆ ಅಧಿಕಾರಿಗಳು ಪರಿಸರದ ಹೆಸರಿನಲ್ಲಿ ಗಣೇಶ ಮೂರ್ತಿ ಉದ್ಯಮವನ್ನು ಮಾತ್ರ ನಿಯಂತ್ರಣದಲ್ಲಿ ಇಡಲು ಮುಂದಾಗುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತಪಡಿಸುತ್ತಿದೆ. ಪರಿಸರಕ್ಕೆ ಹಾನಿ ಆಗುವ ಎಲ್ಲ ಮೂರ್ತಿಗಳನ್ನು ಪಾಲಿಕೆ ನಿಷೇಧಿಸಿ, ಅಂಥ ಮಾರಾಟ ವ್ಯವಸ್ಥೆಯ ಮೇಲೂ ಸಂಪೂರ್ಣ
ನಿಯಂತ್ರಣ ಹೇರಬೇಕು. ಅಧಿಕಾರಿಗಳ ಕ್ರಮದಿಂದ ಗಣೇಶ ಮೂರ್ತಿ ತಯಾರಿಕೆ ಉದ್ಯಮವೇ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಮೂರ್ತಿ ತಯಾರಿಕರ ಸಂಘದ ಅಧ್ಯಕ್ಷ ರಮೇಶ ಸುಗಂ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.

Advertisement

ಹಳೆಯ ದಾಸ್ತಾನು: ಕಳೆದ ವರ್ಷ ಮಾರಾಟ ಆಗದೇ ಒಬ್ಬೊಬ್ಬ ವ್ಯಾಪಾರಿಗಳ ಬಳಿಯೂ ಲಕ್ಷಾಂತರ ರೂ. ಮೌಲ್ಯದ ಪಿಒಪಿ ಗಣೇಶ ಮೂರ್ತಿಗಳ ದಾಸ್ತಾನು ಇದೆ. ಹಿಂದಿನಂತೆ ಪರಿಸರ ಸ್ನೇಹಿ ಗಣೇಶ ಮೂರ್ತಿ ರೂಪಿಸಲು ಅಗತ್ಯ ಪ್ರಮಾಣದ ಮಣ್ಣು ಸಿಗುವುದಿಲ್ಲ. ರೈತರು ಗಣೇಶ
ಮೂರ್ತಿ ತಯಾರಿಕೆಗೆ ಮಣ್ಣು ನೀಡಲು ನೀಡಲು ಮುಂದಾಗುವುದಿಲ್ಲ. ಪಾಲಿಕೆ ಅಧಿಕಾರಿಗಳು ಗಣೇಶ ಮೂರ್ತಿ ತಯಾರಕರ ಸಮಸ್ಯೆ ಅರಿಯಬೇಕಿತ್ತು. ಇದಕ್ಕೆ ಪರಿಹಾರ ಕ್ರಮ ಕೈಗೊಂಡ ಬಳಿಕ ಪಿಒಪಿ ಗಣೇಶ ಮೂರ್ತಿ ತಯಾರಿಕೆ, ಮಾರಾಟ ನಿಷೇಧ ಹೇರಬೇಕಿತ್ತು ಎಂದು ನಾರಾಯಣ ಕಾಳೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪರಿಸರಕ್ಕೆ ಹಾನಿ ಮಾಡುವ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ, ಬಳಕೆ ನಿಷೇಧಿಸಿದ ಕುರಿತು ಸಾಕಷ್ಟು ಸಮಯದ ಮೊದಲೇ ಜಾಗೃತಿಗಾಗಿ ಮಾಹಿತಿ ನೀಡಿದ್ದೇವೆ. ಅದರ ಹೊರತಾಗಿ ನಿಷೇಧ ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದೇವೆ. ಹೀಗಾಗಿ
ಪರಿಸರಕ್ಕೆ ಹಾನಿಕಾರಕ ಗಣೇಶ ಮೂರ್ತಿ ತಯಾರಿಕಾ ಕೇಂದ್ರಗಳ ಮೇಲೆ ದಾಳಿ ನಿರಂತರ ನಡೆಯಲಿದೆ. ಪರಿಸರಕ್ಕೆ ಹಾನಿಕಾರಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ವ್ಯಕ್ತಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುತ್ತೇವೆ.
ಹರ್ಷಾ ಶೆಟ್ಟಿ ಮಹಾನಗರ ಪಾಲಿಕೆ ಆಯುಕ್ತ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next