Advertisement
ಜಿಲ್ಲೆಯ ಕೂಡಲಸಂಗಮದಲ್ಲಿ ನಡೆದ ಶರಣ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಲಿಂಗಾಯತ ಒಂದು ಸ್ವತಂತ್ರ ಧರ್ಮ. ಇದನ್ನು ನಾನಾಗಲಿ ಅಥವಾ ಮತ್ಯಾರೋ ಹುಟ್ಟು ಹಾಕಿದ್ದಲ್ಲ. 12ನೇ ಶತಮಾನದಲ್ಲೇ ಬಸವಣ್ಣನವರು ಹುಟ್ಟು ಹಾಕಿದ್ದಾರೆ. ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂಬುದಕ್ಕೆ ನನ್ನ ಬಳಿ ಇರುವಷ್ಟು ದಾಖಲೆ ಇನ್ಯಾರ ಬಳಿಯೂ ಇರಲು ಸಾಧ್ಯವಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಅಣಿಯಾಗುವ ಮುಂಚೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಎಲ್ಲವನ್ನೂ ಖಾತ್ರಿ ಮಾಡಿಕೊಂಡೇ ಹೋರಾಟಕ್ಕೆ ಮುಂದಾಗಿದ್ದೆ. ಸುಮ್ಮನೆ ಹೋರಾಟ ನಡೆಸಿಲ್ಲ. 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಹುಟ್ಟಿಕೊಂಡಿದೆ. ಆದರೂ, ನನ್ನ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ನಡೆಸಲಾಯಿತು. ಲಿಂಗಾಯತ ಧರ್ಮವನ್ನು ನಾವು ಹುಟ್ಟು ಹಾಕಿದ್ದೇವಾ? ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗಬೇಕು ಎಂಬ ನಮ್ಮ ಆಶಯಕ್ಕೆ ರಾಜ್ಯದಲ್ಲಿ ಯಶಸ್ಸು ಸಿಕ್ಕಿದೆ ಎಂದರು.
Related Articles
Advertisement
ಕೂಡಲಸಂಗಮದಲ್ಲಿ ನಡೆದ ಶರಣ ಮೇಳದಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸಿದ ಎಂ.ಬಿ. ಪಾಟೀಲ ಮತ್ತು ನಮ್ಮ ಹೋರಾಟದ ಒತ್ತಾಯಕ್ಕೆ ಸ್ಪಂದಿಸಿದ ಆಗಿನ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯದಲ್ಲಿ ದೊಡ್ಡ ಅಪಪ್ರಚಾರ ನಡೆಸಿದರು. ಇದಕ್ಕೆ ನಮ್ಮ ಲಿಂಗಾಯತರೂ ಬಲಿಯಾದರು ಎಂದರು.
ಲಿಂಗಾಯತರು ಜಾತಿವಾದಿಗಳಲ್ಲ. ಮಾನ ವತಾವಾದಿಗಳು. ಆದರೆ, ವೀರಶೈವವಾದಿಗಳು ತಮ್ಮ ಹೆಸರು ಮತ್ತು ಪಲ್ಲಕ್ಕಿ ಉಳಿಸಿಕೊಳ್ಳಲು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವಿರೋಧ ಮಾಡುತ್ತಿದ್ದಾರೆ. ನಾವು ಪ್ರತ್ಯೇಕ ಧರ್ಮ ಹೋರಾಟ ವಿಷಯದಲ್ಲಿ ರಾಜ್ಯದಲ್ಲಿ ಈಗಾಗಲೇ ಯಶಸ್ಸು ಕಂಡಿದ್ದೇವೆ. ಪ್ರತ್ಯೇಕ ಧರ್ಮ ಹೋರಾಟಕ್ಕೆ ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿಯ ವರದಿಯೇ ನಮಗೆ ದೊಡ್ಡ ಅಸ್ತ್ರ. ರಾಜ್ಯ ಸರ್ಕಾರದಿಂದ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಆಗಿದ್ದು, ಕೇಂದ್ರದಲ್ಲೂ ಹೋರಾಟ ಮುಂದುವರಿದಿದೆ. ಆದರೆ, ಲಿಂಗಾಯತ ಕೋಟಾದಡಿ ಟಿಕೆಟ್ ಪಡೆದು ಗೆದ್ದವರು ಇಂದು ಲಿಂಗಾಯತ ಧರ್ಮದ ಮಾತು ಎತ್ತುತ್ತಿಲ್ಲ. ಪ್ರತ್ಯೇಕ ಧರ್ಮಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಕುರಿತು ಚಿಂತನೆ ನಡೆದಿದೆ ಎಂದರು.
ಪ್ರತ್ಯೇಕ ಧರ್ಮ ಹೋರಾಟ, ರಾಜ್ಯದಲ್ಲಿ ಯಶಸ್ವಿಯಾಗಲು ಗೃಹ ಸಚಿವ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ ಹಾಗೂ ಬಸವರಾಜ ಹೊರಟ್ಟಿ ಕಾರಣ. ಎಂ.ಬಿ. ಪಾಟೀಲರೇ ನಮ್ಮ ಲಿಂಗಾಯತ ನಾಯಕ ಎಂದು ಈಚೆಗೆ ದೆಹಲಿಯಲ್ಲಿ ನಡೆದ ಹೋರಾಟದ ವೇಳೆ ನಾವು ಸಂಕಲ್ಪ ಮಾಡಿದ್ದೇವೆ. ಇದನ್ನು ಅವರು ಒಪ್ಪಿಕೊಳ್ಳಬೇಕು ಎಂದರು.