ಬೀದರ: ಎರಡನೇ ಅಲೆ ರೂಪದಲ್ಲಿ ಅಪ್ಪಳಿಸಿರುವ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಗುರುವಾರ ಕರುನಾಡು ಭಾಗಶಃ ಲಾಕ್‌ಡೌನ್ ಹೇರುವ ಮೂಲಕ ಶಾಕ್ ನೀಡಿದ್ದು, ಅದರಂತೆ ಗಡಿನಾಡು ಬೀದರ ಸಹ ಭಾಗಶಃ ಸ್ತಬ್ಧವಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಕೋವಿಡ್ ಕಠಿಣ ನಿಯಮ ಜಾರಿಗೊಳಿಸಿದ್ದು, ಕಳೆದ ಬಾರಿಯ ಲಾಕ್‌ಡೌನ್ ನೆನಪುಗಳು ಮರುಕಳಿಸಿದಂತಾಗಿದೆ.
ಕೋವಿಡ್ ಸಾವಿನ ರಣಕೇಕೆ ಜತೆಗೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಬೀದರನಲ್ಲಿ ಮೊದಲೇ ನೈಟ್ ಕರ್ಫ್ಯೂ ಜಾರಿಯಲ್ಲಿತ್ತು. ನಂತರ ಸೋಂಕಿನ ಆರ್ಭಟ ಅಧಿ ಕವಾಗುತ್ತಿದ್ದಂತೆ ಸರ್ಕಾರ ರಾಜ್ಯಾದ್ಯಂತ ಏ. 21ರಿಂದ ಮೇ 4ರವರೆಗೆ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಕಠಿಣ ನಿಯಮ ರೂಪಿಸಿತ್ತು. ಆದರೆ, ಗುರುವಾರ ಬೆಳಗ್ಗೆ ರಾಜ್ಯಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿ ಪರಿಷ್ಕರಿಸಿ ಸರ್ಕಾರ ಆದೇಶಿಸುತ್ತಿದ್ದಂತೆ ಇತ್ತ ಖಾಕಿ ಪಡೆ ರಸ್ತೆಗಿಳಿದು ವ್ಯಾಪಾರ-ವಹಿವಾಟು ಬಂದ್ ಮಾಡಿಸಿದೆ.
ಜಿಲ್ಲಾಡಳಿತದ ನಿರ್ದೇಶನದಂತೆ ಬೀದರ ನಗರ ಮತ್ತು ತಾಲೂಕು ಕೇಂದ್ರಗಳಲ್ಲಿ ಪೊಲೀಸ್ ಇಲಾಖೆ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದೆ. ಕಿರಾಣಿ, ಹಾಲು, ತರಕಾರಿ ಮತ್ತು ಮೆಡಿಕಲ್‌ನಂಥ ತುರ್ತು ಸೇವೆ ಹೊರತುಪಡಿಸಿ ಎಲ್ಲ ಬಗೆಯ ಅಂಗಡಿ-ಮುಂಗಟ್ಟು ಬಂದ್ ಮಾಡಿಸಿದೆ. ಗಾಂಧಿ ಗಂಜ್, ಮೋಹನ್ ಮಾರ್ಕೆಟ್, ಅಂಬೇಡ್ಕರ್ ವೃತ್ತ, ನಾಂದೇಡ್ ರಸ್ತೆ ಮತ್ತು ಓಲ್ಡ್ ಸಿಟಿ ಸೇರಿದಂತೆ ನಗರದ ಎಲ್ಲ ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನುತ್ತಿವೆ. ಹೋಟೆಲ್, ಬಾರ್- ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಕೊಡಲಾಗಿದೆ. ನಗರದ ಎಲ್ಲ ದೇವಸ್ಥಾನಗಳು, ಮಸೀದಿ, ಚರ್ಚ್ ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ಸಹ ಬಂದ್ ಮಾಡಲಾಗಿದ್ದು, ನಿತ್ಯ ಪೂಜೆ- ಪ್ರಾರ್ಥನೆಗಷ್ಟೇ ಅವಕಾಶ ನೀಡಲಾಗಿದೆ.
ಆಡಳಿತ ಟಫ್ ರೂಲ್ಸ್ ಜತೆಗೆ ಸೋಂಕಿನ ಭೀತಿಯಿಂದ ಸಾರ್ವಜನಕರ ಓಡಾಟ ಈಗ ತೀರ ಇಳಿಮುಖವಾಗಿದೆ. ಸಾರಿಗೆ ಬಸ್‌ಗಳ ಕಾರ್ಯಾಚರಣೆ ಹೊರತುಪಡಿಸಿದರೆ ಇತರ ವಾಹನಗಳ ಸಂಚಾರ ಕಡಿಮೆ ಇತ್ತು. ಹಾಗಾಗಿ ಅಘೋಷಿತ ಬಂದ್ ವಾತಾವರಣ ಕಂಡು ಬಂದಿದೆ. ಎಲ್ಲೆಡೆ ಪೊಲೀಸ್ ಮತ್ತು ಕೆಎಸ್‌ಆರ್‌ಪಿ ತುಕಡಿಗಳ ಗಸ್ತು ಹೆಚ್ಚಿಸಲಾಗಿದ್ದು, ವಿವಿಧೆಡೆ ಬ್ಯಾರಿಕೇಡ್ ಹಾಕಿ ಮಾರ್ಗಗಳನ್ನು ಮುಚ್ಚಿಸಲಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಸೆಮಿ ಲಾಕ್‌ಡೌನ್ ಪರಿಣಾಮ ಇನ್ನೂ ಬೀರದಿರುವುದು ಕಂಡು ಬಂದಿದೆ.
ಕರ್ಫ್ಯೂ ಜಾರಿಯಲ್ಲಿದ್ದರೂ ಸಾರಿಗೆ ಬಸ್ ಸಂಚಾರವಿದೆ. ಬೀದರ ಜಿಲ್ಲೆಯಲ್ಲಿ ಗುರುವಾರ 300 ಬಸ್‌ಕಾರ್ಯಾಚರಣೆ ನಡೆದಿದೆ. ನಿತ್ಯ ಬಸ್ ಗಳಿಗೆ ಸ್ಯಾರಿಟೈಸರ್, ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಬಸ್‌ಗಳಲ್ಲಿ ಮಾಸ್ಕ್ ಕಡ್ಡಾಯದೊಂದಿಗೆ ಶೇ.50 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಇಳಿಮುಖ ಆಗಿರುವುದರಿಂದ ಶುಕ್ರವಾರ ಕಡಿಮೆ ಬಸ್‌ಗಳನ್ನು ಓಡಿಸಲಾಗುವುದು.
ಚಂದ್ರಕಾಂತ ಫುಲೇಕರ್,
ವಿಭಾಗೀಯ ನಿಯಂತ್ರಣಾಧಿ ಕಾರಿ, ಎನ್‌ಈಕೆಆರ್‌ಟಿಸಿ, ಬೀದರ