“ಪಾರ್ಥಸಾರಥಿ’ ಎಂಬ ಚಿತ್ರವೊಂದು ಸದ್ದಿಲ್ಲದೇ ತಯಾರಾಗಿದೆ. ಈ ಚಿತ್ರವನ್ನು ರಾಬರ್ಟ್ ನವರಾಜ್ ನಿರ್ದೇಶಿಸಿದ್ದಾರೆ. ಜೊತೆಗೆ ನಿರ್ಮಾಣ ಕೂಡಾ ಇವರದ್ದೇ. ಮೂವತ್ತು ವರ್ಷಗಳಿಂದ ಗೋವಾದಲ್ಲಿ ನೆಲೆಸಿರುವ ರಾಬರ್ಟ್ ಸಿನಿಮಾ ಮೇಲಿನ ಪ್ರೀತಿಯಿಂದ “ಪಾರ್ಥಸಾರಥಿ’ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು.
ಸಂಗೀತ ನಿರ್ದೇಶಕ ವಿ.ಮನೋಹರ್ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಚುತ್ರದಲ್ಲಿ ರೇಣುಕ್ ಕುಮಾರ್ ನಾಯಕರಾಗಿ ನಟಿಸಿದಾರೆ. ನಾಯಕರಾಗಿ ಇವರಿಗೆ “ಪಾರ್ಥಸಾರಥಿ’ ಮೊದಲ ಚಿತ್ರ. ಈ ಹಿಂದೆ ಆಲಿಯಾ ಭಟ್ ಅವರೊಂದಿಗೆ ಹಿಂದಿ ಸಿನಿಮಾವೊಂದರಲ್ಲಿ ನಟಿಸಿದ ಅನುಭವವಿದೆ.
ಅನಾಥನಾಗಿ ಬೆಳೆದು ಜನರ ಪ್ರೀತಿಯಿಂದ ಮುಂದೆ ಪ್ರಾಮಾಣಿಕ ಐಪಿಎಸ್ ಆಧಿಕಾರಿಯಾಗುವ ಪಾತ್ರ ಅವರದಂತೆ. ನಟನೆ, ನೃತ್ಯದ ತರಬೇತಿ ಪಡೆದಿದ್ದಾಗಿ ಹೇಳಿಕೊಂಡರು ರೇಣುಕ್ ಕುಮಾರ್. ಅಕ್ಷತಾ ಈ ಚಿತ್ರದ ನಾಯಕಿ. ಈಗಾಗಲೇ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಅಕ್ಷತಾ ಇಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿನ ವರದಿ ಮಾಡುವ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳನ್ನು ಹೇಗೆ ನಿಭಾಹಿಸುತ್ತಾಳೆ ಎಂಬ ಅಂಶದೊಂದಿಗೆ ಅವರ ಪಾತ್ರ ಸಾಗುತ್ತದೆಯಂತೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರಾಬರ್ಟ್, “ಗೋವಾ ಕನ್ನಡಿಗರು ಸೇರಿಕೊಂಡು ನಿರ್ಮಾಣ ಮಾಡಿದ ಮೊದಲ ಕನ್ನಡ ಚಿತ್ರವಿದು ಎನ್ನಬಹುದು. ಇದು ಅನಾಥ ಹುಡುಗನ ಸಾಧನೆಯ ಕಥೆಯನ್ನು ಹೊಂದಿದೆ. ಅನಾಥ ಹುಡುಗರ ಬಗ್ಗೆ ಅಸಡ್ಡೆ ತೋರದೇ ಪ್ರೀತಿಯನ್ನು ತೋರಿಸಿದರೆ ಅವರು ಕೂಡಾ ಸಹ ಬುದ್ದಿವಂತರಾಗಿ ಸಾಧನೆ ಮಾಡುತ್ತಾರೆ. ಆ ತರಹದ ಹುಡುಗರ ಸ್ಫೂರ್ತಿಯಿಂದ ಈ ಚಿತ್ರ ಮಾಡಲಾಗಿದೆ. ಚಿತ್ರದಲ್ಲಿ ಪೊಲೀಸ್ ಇಲಾಖೆಯ ಕತೆ ಇದ್ದರೂ ಆಕ್ಷನ್‌ಗಿಂತ ಭಾವನೆಗಳಿಗೆ ಹೆಚ್ಚು ಒತ್ತುಕೊಡಲಾಗಿದೆ’ ಎಂದು ಹೇಳಿದರು.
ಮೈಸೂರು, ಬೆಂಗಳೂರು, ಉತ್ತರ ಕನ್ನಡ, ಮಂಗಳೂರು, ಗೋವಾ, ಗುಜರಾತ್, ರಾಜಸ್ಥಾನ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಮುಂದಿನ ತಿಂಗಳು ಚಿತ್ರ ಬಿಡುಗಡೆ ಮಾಡುವ ಆಲೋಚನೆ ನಿರ್ದೇಶಕರಿಗಿದೆ. ಚಿತ್ರಕ್ಕೆ ಹರ್ಷವರ್ಧನ್-ಎನ್. ರಾಘವೇಂದ್ರ ಅವರ ಸಂಭಾಷಣೆ, ವಿಕ್ಟರ್ ಲೋಗಿದಾಸನ್ ಸಂಗೀತ, ನೀಲೇಶ್ ಛಾಯಾಗ್ರಹಣವಿದೆ.