ಹುಬ್ಬಳ್ಳಿ: ಕೇವಲ ಆಪತ್ಕಾಲದಲ್ಲಿ ಮಾತ್ರವಲ್ಲ, ಸದಾ ಕಾಲ ದೇವರ ಸ್ಮರಣೆ ಮಾಡಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ಒಡೆಯರ ಸ್ವಾಮೀಜಿ ಹೇಳಿದರು. ಅಮರಗೋಳದ ವಿದ್ಯಾಧಿರಾಜ ಭವನದಲ್ಲಿ ಆಯೋಜಿಸಿದ್ದ ಚಾತುರ್ಮಾಸ್ಯದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕೇವಲ ಕಷ್ಟಕಾಲ ಬಂದಾಗ ದೇವರನ್ನು ಸ್ಮರಿಸಿದರೆ ಸಾಲದು. ದೇವರ ಕೃಪೆ ನಮ್ಮ ಮೇಲಿದ್ದರೆ ಯಾವುದೇ ಆತಂಕ ಪಡಬೇಕಾಗಿಲ್ಲ. ಸಮಾಜದಲ್ಲಿ ಕೆಲವು ಮೂಢನಂಬಿಕೆಗಳು ರೂಢಿಯಲ್ಲಿವೆ. ಅವುಗಳನ್ನು ದೂರವಿಟ್ಟು ಪರಂಪರೆಯನ್ನು ಮುಂದುವರಿಸಬೇಕು ಎಂದು ತಿಳಿಸಿದರು.
ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಯಾರೂ ಕೂಡ ಸಣ್ಣವರಲ್ಲ ಅಥವಾ ದೊಡ್ಡವರಲ್ಲ. ನಮಗೆ ಸಮಾಜ ಮುಖ್ಯ. ಕೈಗೆ ಸಣ್ಣ ಬೆರಳುಗಳೂ ಇರುತ್ತವೆ, ದೊಡ್ಡ ಬೆರಳುಗಳೂ ಇರುತ್ತವೆ. ಆದರೆ ಮುಷ್ಟಿಯಾದಾಗ ಹೆಚ್ಚಿನ ಸಾಮರ್ಥ್ಯ ಬರುತ್ತದೆ. ಸಮಾಜ ಬಾಂಧವರು ಒಗ್ಗಟ್ಟಾಗಿರಬೇಕು ಎಂದರು.
ನಮ್ಮ ಪರಂಪರೆ ಮುಂದುವರಿಯಬೇಕು. ಇಂದಿನ ಪೀಳಿಗೆಯವರು ಮುಂದಿನ ಪೀಳಿಗೆಯವರಿಗೆ ರಿಲೇಯಲ್ಲಿ ಬ್ಯಾಟನ್ ಹಸ್ತಾಂತರಿಸಿದಂತೆ ಪರಂಪರೆ, ಸಂಸ್ಕೃತಿಯನ್ನು ಹಸ್ತಾಂತರಿಸಬೇಕು. ನಮ್ಮ ಶ್ರೀಮಂತ ಸಂಸ್ಕೃತಿ ಉಳಿಸುವುದು ಅಗತ್ಯ ಎಂದು ತಿಳಿಸಿದರು. ಆರ್.ಎನ್. ನಾಯಕ, ದಿನೇಶ ನಾಯಕ, ಜಿ.ಎಸ್. ಕಾಮತ, ಆರ್.ಆರ್. ಕಾಮತ, ಸಂಜಯ ರಾಯ್ತೂರಕರ, ರಾಜನ್ ಕುಂಕಳೇಕರ, ವಿ.ಜಿ. ಪ್ರಭು, ಪ್ರಭಾಕರ ಕಾಮತ ಇದ್ದರು.
ಇದಕ್ಕೂ ಮೊದಲು ಉಣಕಲ್ ಕೆರೆಯಲ್ಲಿ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ಒಡೆಯರ ಸ್ವಾಮೀಜಿ ಹಾಗೂ ಶ್ರೀ ವಿದ್ಯಾಧೀಶ ತೀರ್ಥ ಶೀಪಾದ ಒಡೆಯರ ಸ್ವಾಮೀಜಿ ಅವರು ಮೃತ್ತಿಕಾ ವಿಸರ್ಜನೆ ಮಾಡಿದರು. ನಂತರ ಈಶ್ವರ ನಗರದ ವಿದ್ಯಾಧೀಶ ವಿದ್ಯಾರ್ಥಿ ನಿಲಯ ಕಟ್ಟಡದಿಂದ ವಿದ್ಯಾಧಿರಾಜ ಭವನದ ವರೆಗೆ ದಿಗ್ವಿಜಯೋತ್ಸವ ನಡೆಯಿತು. ಉಭಯ ಸ್ವಾಮೀಜಿಗಳನ್ನು ಅಲಂಕೃತ ರಥದಲ್ಲಿ ಕುಳ್ಳರಿಸಿ ವಾದ್ಯ ಘೋಷಗಳೊಂದಿಗೆ ವೈಭವದಿಂದ ಕರೆತರಲಾಯಿತು.
ಶ್ರೀಕೃಷ್ಣ ಸುವಾಸಿತ ಹಾಲು ಮಾರುಕಟ್ಟೆಗೆ: ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಮಿಲ್ಕ್ಸ್ ಸಂಸ್ಥೆಯ ನೂತನ ಸುವಾಸಿತ ‘ಮಸ್ಟ್’ ಹಾಲನ್ನು ಉಭಯ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಮಾರುಕಟ್ಟೆಗೆ ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಮುತ್ತು ಪೈ, ದಿನೇಶ್ ಪೈ, ವ್ಯವಸ್ಥಾಪಕ ನಿರ್ದೇಶಕ ಮಹೇಶ ಕಾಮತ ಮೊದಲಾದವರಿದ್ದರು.