ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ, ವೃತ್ತಿರಂಗಭೂಮಿಯ ಹಿರಿಯ ನಟಿ ಮಾಲತಿ ಸುಧೀರ್, ತಮ್ಮ ಕಲಾಪಯಣದ ಅನುಭವ ಹಂಚಿಕೊಂಡರು. ಆ ಮಾತುಗಳ ಆಯ್ದ ಭಾಗ ಇಲ್ಲಿದೆ…
ಗುಬ್ಬಿ ವೀರಣ್ಣ ಅವರ ಕಂಪನಿಯ ನಾಟಕ ನಡೀತಿತ್ತು. ರಾಮಾಯಣ ಕುರಿತಾದ ನಾಟಕ. ಅಂದು ರಾಮನ ಪಾತ್ರ ಮಾಡುವವನಿಗೆ ಬಹಳ ಆದರಾತಿಥ್ಯ. ಒಳ್ಳೆಯ ಪರ್ಸನಾಲಿಟಿ ಇರಬೇಕು ಅಂತೆಳಿ, ಅವನೂ ಹಾಗೇ ತಯಾರಾಗಿರುತ್ತಿದ್ದ. ಅವನು ಮೇಕಪ್‌ಗೆ ಬರುವ ವೇಳೆಗೆ, ಕನ್ನಡಿಯೆದುರು, ಒಂದು ಲೋಟದಲ್ಲಿ ಹಾಲು, ಎರಡು ದೊಡ್ಡ ದೊಡ್ಡ ಬಾಳೆಹಣ್ಣುಗಳನ್ನು ಸಿದ್ಧಮಾಡಿ ಇಡಬೇಕಿತ್ತು. ಅದನ್ನೆಲ್ಲ ಇಟ್ಟಿಲ್ಲ ಅಂದ್ರೆ, ಕನ್ನಡಿ ನೋಡ್ಕೊಳ್ತಾ ಟೈಂಪಾಸ್ ಮಾಡ್ತಾ, ಕೂತಿರಿತ್ತಿದ್ದ. ಅವನಿಗೆ ತಾನು ರಾಮನ ಪಾರ್ಟ್ ಮಾಡೋನು ಅನ್ನೋ ಗತ್ತು ಇತ್ತು.
ಅಂದು ರಾಮನ ಪಾರ್ಟ್ ಮಾಡುವವನೇನೋ ಬಂದಿದ್ದ. ಆದರೆ, ಆಂಜನೇಯ ಪಾತ್ರಧಾರಿ ಬಂದಿರಲಿಲ್ಲ. ವೀರಣ್ಣನವರು, “ಏಯ್, ಅವನೆಲ್ಲಿದ್ದಾನೆ ಅಂತ ನೋಡ್ರೋ’- ಎಂದು ಸೂಚಿಸಿ, ಹುಡುಕಿಸಿದರೂ, ಆತ ಕಾಣಿಸಲಿಲ್ಲ. ಸಮಯ ಮೀರಿತ್ತು. ಅವನು ಮಾತ್ರ ಬಂದೇ ಇಲ್ಲ. ಯಾರೋ ಒಬ್ಬ ಬಂದು, ಅವನು ಇಂಥ ಜಾಗದಲ್ಲಿ ಇದ್ದಾನೆಂದು ಸುಳಿವು ನೀಡಿದ. ಅವನು, ವೇಶ್ಯೆಯ ಮನೆಯಲ್ಲಿ ಇದ್ದನಂತೆ! ಇಲ್ಲಿ ಬಣ್ಣ ಹಚ್ಚಿಕೊಳ್ಳೋದು ಬಿಟ್ಟು, ಅಲ್ಲಿಗೆ ಹೋಗಿ ಕುಳಿತಿದ್ದಾನೆ. ಇಲ್ಲಿ ಎಲ್ಲ ಜನ ಕಾಯ್ತಾ ಇದ್ದಾರೆ. ಅವನ ಹೆಸರೆಳಿಕೊಂಡೇ, ಜನ ಟಿಕೆಟ್ ತೆಗೆದಿದ್ದಾರೆ.
ಗುಬ್ಬಿ ವೀರಣ್ಣನವರು ಕಾರು ತಗೊಂಡು, ಸೀದಾ ಆ ವೇಶ್ಯೆ ಮನೆ ಬಳಿ ಹೋದ್ರು. ಇವರ ಕಾರು ನೋಡಿದ್ದೇ ತಡ, ಆತ ಭಯ- ಭಕ್ತಿಯಿಂದ ಓಡಿಬಂದು, ಕಾರಿನಲ್ಲಿ ಕುಳಿತ. ಇವರು “ಕಾರು ಸ್ಟಾರ್ಟ್ ಮಾಡ್ಲಾ?’ ಅಂತ ಕೇಳಿದರು. ಆತ “ಹ್ಞುಂ’ ಅಂದವನೇ, “ತಡೀರಿ ತಡೀರಿ, ಆಕೀ ಮನೇಲಿ ಚಪ್ಲಿ ಬಿಟ್ಟಿದೀನ್ರೀ. ಹಾಕ್ಕೊಂಡ್ ಬರ್ತೀನ್ರೀ…’ ಅಂತ ಇಳಿಯಲು ಮುಂದಾದ. ಆಗ, “ಬ್ಯಾಡಪ್ಪಾ… ನೀ ಹೋದ್ರೆ, ಮತ್ತೆ ಬರ್ತಿಯೋ, ಇಲ್ಲೋ ಅನ್ನೋದು ನಂಗೇ ಗ್ಯಾರಂಟಿ ಇಲ್ಲ. ನಾನೇ ತಗೊಂಡ್ ಬರ್ತಿನಿ’ ಅಂತ, ವೀರಣ್ಣನವರೇ ಅವನ ಚಪ್ಪಲಿಯನ್ನು ಕೈಯಲ್ಲಿ ಹಿಡ್ಕೊಂಡು, ಅವನ ಪಾದದ ಬುಡದಲ್ಲಿಟ್ಟರು.
ಇದು ಒಬ್ಬ ರಂಗ ಕಂಪನಿಯ ಮಾಲಿಕ, ಕಲಾವಿದರಿಗೆ ಮಾಡುವಂಥ ಒಂದು ತ್ಯಾಗ. ತಾನು ದೊಡ್ಡ ಕಂಪನಿಯ ಮಾಲಿಕನೆಂದು, ಅವರು ಬೇಧ- ಭಾವ ಮಾಡಲು ಹೋಗಲಿಲ್ಲ. ಆ ಹೊತ್ತಿಗಾಗಲೇ ಅವರು ಮೂರು ಕಂಪನಿ ನಡೆಸ್ತಾ ಇದ್ರು. ನಾಟಕದ ಕಲೆಕ್ಷನ್ ಆದ ಮೇಲೆ, ಗೋಣಿ ಚೀಲದಲ್ಲಿ ದುಡ್ಡು ತುಂಬ್ಕೊಂಡು ಹೋಗ್ತಾ ಇದ್ರು. ಅಂಥ ಮಾಲೀಕ ಕೂಡ, ಒಬ್ಬ ಕಾಮಿಡಿ ಪಾತ್ರ ಮಾಡುವವನ ಚಪ್ಪಲಿ ತರಲು ಸಿದ್ಧನಿರ್ತಾನೆ. ಇಂಥ ಘಟನೆಗಳನ್ನು ರಂಗಭೂಮಿಯಲ್ಲಿ ಮಾತ್ರ ಕಾಣಲು ಸಾಧ್ಯ.