Advertisement

ಗಿಳಿವಿಂಡಿನ ಮಹಿಳಾ ತಾಳಮದ್ದಳೆ

01:41 PM Sep 08, 2017 | Team Udayavani |

ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಆವರಣದ ಗಿಳಿವಿಂಡಿನಲ್ಲಿ ಇತ್ತೀಚೆಗೆ, ಮಹಿಳಾ ಗಡಣವು ತಾಳಮದ್ದಳೆ ಕಾರ್ಯಕ್ರಮ ಮೂಲಕ ವಿಜೃಂಭಿಸಿ ಸರಣಿ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದೆ. ದಿನಗಳೆದಂತೆ, ಗೋವಿಂದ ಪೈ ಮನೆ ಆವರಣವು ಬರಹಗಾರ – ಕಲಾವಿದರ ಬಳಗದ ಮೂಲಕ ಸಾಕಷ್ಟು ಪ್ರೇಕ್ಷರನ್ನು ಸೆಳೆಯುತ್ತಿದೆ. 

Advertisement

ಮಂಜೇಶ್ವರ, ಕುಂಬಳೆ, ಕಾಸರಗೋಡು ವಲಯದ ಮಹಿಳಾಮಣಿಗಳು ಮುಂದಿಟ್ಟ ಕಥಾ ಪ್ರಸಂಗ- ಸುಧನ್ವಮೋಕ್ಷ. ಆಟ-ಕೂಟಗಳಲ್ಲಿ ಪುರುಷರಿಗೆ ಸಮ ಪ್ರತಿಭೆಯಿಂದ ಮಿಂಚುವ ಮಹಿಳೆಯರ ಬಳಗದಲ್ಲಿನ ಪುಟ್ಟ ಕಲಾವಿದರೂ ಸಮರೋತ್ಸಾಹದ ಸನ್ನಿವೇಶಗಳನ್ನು ಚೆನ್ನಾಗಿ ಚಿತ್ರಿಸಿದರು. ಕಾಸರಗೋಡು ಕಾಲೇಜು ವಿದ್ಯಾರ್ಥಿನಿ ಶ್ರದ್ಧಾ ನಾಯರ್ಪಳ್ಳ ಅವರ  ಕಂಚಿನ ಕಂಠ, ಮಿಂಚುವ ಕಣ್ಣುಗಳು, ಹಾವಭಾವ ಪ್ರೇಕ್ಷಕರು ಭಲೇ ಎನ್ನುವಂತಿತ್ತು.

ಸುಧನ್ವ, ಕೃಷ್ಣ, ಅರ್ಜುನ ಪಾತ್ರಗಳು ಸಂದರ್ಭ ಮತ್ತು ಪಾತ್ರ ಚ್ಯುತಿ ಬಾರದಂತೆ ಜಾಗ್ರತೆ ವಹಿಸಿದ್ದರು. ಕಥಾನಾಯಕ ಸುಧನ್ವ ಪಾತ್ರಧಾರಿ ಸುಧಾ ಕಲ್ಲೂರಾಯರ ಭಾವಾನುಭವಗಳು ಉತ್ತಮ ಸ್ವರಭಾವದ ಏರಿಳಿತಗಳಲ್ಲಿ ಸಾಗಿತ್ತು. ಯಜ್ಞಾಶ್ವದ ನಾಯಕ ಅರ್ಜುನನ ಪ್ರವೇಶ ಮತ್ತು ನಿರರ್ಗಳ ಮಾತುಗಾರಿಕೆ ಆಕರ್ಷಕವಾಗಿತ್ತು. ಎಂದಿನಂತೆ ಜಯಲಕ್ಷ್ಮೀ ಕಾರಂತರು ಕೃಷ್ಣನಾಗಿ ಯಶಸ್ವಿಯಾದರು. ಉಳಿದಂತೆ ಸರಸ್ವತಿ ಹೊಳ್ಳ, ಸುಜಾತಾ ತಂತ್ರಿ ಪೋಷಕ ಪಾತ್ರದಲ್ಲಿ ರಂಜಿಸಿದರು. ಭಾಗವತರಾಗಿ ಭವ್ಯಶ್ರೀ ಮಂಡೆಕೋಲು, ಚೆಂಡೆ ಮದ್ದಳೆಗಳಲ್ಲಿ ಗಣೇಶ್‌ ರಾವ್‌ ಅಡೂರು ಮತ್ತು ಕೃಷ್ಣಮೂರ್ತಿ ಕಲ್ಲೂರಾಯ ಸಹಕರಿಸಿದರು. ಸತೀಶ್‌ ಅಡಪ, ಜಯಾನಂದ, ಕಮಲಾಕ್ಷ ಕಾರ್ಯಕ್ರಮಕ್ಕೆ ಸಹಕರಿಸಿದರು.

ಸುಭಾಶ್ಚಂದ್ರ ಕಣ್ವತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next